ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವನೆ: ಸಿಕ್ಕಿಬಿದ್ದ ಇನ್ನಿಬ್ಬರು ಅಥ್ಲೀಟ್‌ಗಳು

Published 10 ಜುಲೈ 2023, 17:00 IST
Last Updated 10 ಜುಲೈ 2023, 17:00 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕಾಕ್‌ನಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಆರಂಭವಾಗಲು ಇನ್ನೆರಡು ದಿನಗಳು ಬಾಕಿ ಇವೆ. ಈ ಕೂಟದಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ಇಬ್ಬರು ಪ್ರಮುಖ ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿದೆ ಎನ್ನಲಾಗಿದೆ.

ಇದರಿಂದಾಗಿ ಅವರಿಬ್ಬರನ್ನೂ ತಂಡದಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಅಧಿಕೃತ ಮಾಹಿತಿ ಲಭಿಸಿಲ್ಲ. ಅದರಲ್ಲಿ ಒಬ್ಬರು ಮಹಿಳೆ ಮತ್ತು ಒಬ್ಬ ಪುರುಷ ಅಥ್ಲೀಟ್ ಇದ್ದಾರೆನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಅಧ್ಯಕ್ಷ ಆದಿಲೆ ಸುಮರಿವಾಲಾ, ‘ನಾಡಾದಲ್ಲಿ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ಕೇಳಿ‘ ಎಂದರು.

ಅವರು ಸದ್ಯ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಫೆಡರೇಷನ್ ಚುನಾವಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಭಾರತದ 54 ಅಥ್ಲೀಟ್‌ಗಳ ತಂಡವನ್ನು ಆಯ್ಕೆ ಮಾಡಲಾಗಿತ್ತು. ಹೋದ ಶನಿವಾರ ಶಾಟ್‌ ಪಟ್ ಅಥ್ಲೀಟ್ ಕರಣವೀರ್ ಸಿಂಗ್ ಅವರು ಉದ್ದೀಪನ ಮದ್ದು ಸೇವನೆ ಮಾಡಿದ್ದು ಖಚಿತವಾಗಿತ್ತು. ಆದ್ದರಿಂದ ಅವರು ತಂಡದಿಂದ ಹೊರಬಿದ್ದಿದ್ದರು.ಇದೀಗ ಇನ್ನಿಬ್ಬರು ಪ್ರಮುಖ ಅಥ್ಲೀಟ್‌ಗಳು ಹೊರಬೀಳಲಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

ಲಾಂಗ್‌ ಜಂಪ್ ಅಥ್ಲೀಟ್ ಜೆಸ್ವಿನ್ ಆಲ್ಟ್ರೀನ್, ಟ್ರಿಪಲ್ ಜಂಪ್ ಅಥ್ಲೀಟ್ ಪ್ರವೀಣ ಚಿತ್ರವೇಲ್ ಮತ್ತು ಜಾವೆಲಿನ್ ಥ್ರೋ ಪಟು ರೋಹಿತ್ ಯಾದವ್ ಅವರೂ ಕಳೆದ ಬುಧವಾರ ಗಾಯದಿಂದಾಗಿ ತಂಡದಿಂದ ಹೊರಬಂದರು.

ಓಟಗಾರರಾದ ಮೊಹಮ್ಮದ್ ಅನಾಸ್ ಮತ್ತು ಅಂಜಲಿ ದೇವಿ ಅವರ ಹೆಸರುಗಳನ್ನು ನಿಗದಿತ ದಿನಕ್ಕಿಂತ ವಿಳಂಬವಾಗಿ ಕಳಿಸಲಾಗಿತ್ತು. ಆದ್ದರಿಂದ ಅವರೂ ಥಾಯ್ಲೆಂಡ್‌ಗೆ ತೆರಳುವುದಿಲ್ಲ. ಅವರ ಬದಲಿಗೆ ಬೇರೆ ಅಥ್ಲೀಟ್‌ಗಳಿಗೂ ಅವಕಾಶ ನೀಡುವುದಿಲ್ಲ ಎಂದೂ ಏಷ್ಯನ್ ಅಥ್ಲೆಟಿಕ್ಸ್ ಸಂಸ್ಥೆ (ಎಎಎ) ಈಗಾಗಲೇ ಖಚಿತಪಡಿಸಿದೆ.

ತಂಡದಲ್ಲಿ ಇನ್ನೂ ಐವರು ಮಹಿಳಾ ಅಥ್ಲೀಟ್‌ಗಳು ಇದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT