ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಕುಸ್ತಿಪಟುಗಳಿಗೆ ಟ್ರಯಲ್ಸ್ ರಿಯಾಯಿತಿ ನೀಡಿದ್ದು ಅನ್ಯಾಯದ ಕ್ರಮ: ಯೋಗೇಶ್ವರ್ ದತ್‌

Published 23 ಜೂನ್ 2023, 23:31 IST
Last Updated 23 ಜೂನ್ 2023, 23:31 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯನ್‌ ಮತ್ತು ವಿಶ್ವಚಾಂಪಿಯನ್‌ಷಿಪ್‌ ಆಯ್ಕೆ ಟ್ರಯಲ್ಸ್ ಪ್ರಕ್ರಿಯೆಯಿಂದ ಆರು ಮಂದಿ ಕುಸ್ತಿ ಪಟುಗಳಿಗೆ ರಿಯಾ ಯಿತಿ ನೀಡಿದ ಭಾರತ ಒಲಿಂಪಿಕ್‌ ಸಂಸ್ಥೆಯ ಅಡ್‌ಹಾಕ್‌ ಸಮಿತಿ ಕ್ರಮವನ್ನು ಹಿರಿಯ ಕುಸ್ತಿಪಟು ಯೋಗೇಶ್ವರ್ ದತ್‌ ಟೀಕಿಸಿದ್ದಾರೆ. ‘ಪೈಲ್ವಾನರು ಹೋರಾಟ ನಡೆಸಿದ್ದು ಇಂಥ ಲಾಭ ಪಡೆಯಲಿಕ್ಕೆಯೇ’ ಎಂದು ಪ್ರಶ್ನಿಸಿದ್ದಾರೆ.

ವಿನೇಶಾ ಫೋಗಟ್‌, ಬಜರಂಗ್ ಪೂನಿಯಾ, ಅವರ ಪತ್ನಿ ಸಂಗೀತಾ ಫೋಗಟ್‌, ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವ್ರತ ಕಾದಿಯಾನ್, ಜಿತೇಂದ್ರ ಸಿಂಗ್ ಅವರಿಗೆ ಅಡ್‌ಹಾಕ್‌ ಸಮಿತಿ ರಿಯಾಯಿತಿ ನೀಡಿತ್ತು. ಅವರು ಪೂರ್ಣ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿಲ್ಲ. ಆಯ್ಕೆ ಟ್ರಯಲ್ಸ್‌ನ ವಿಜೇತರ ವಿರುದ್ಧ ಅವರು (ತಮ್ಮ ತಮ್ಮ ತೂಕ ವಿಭಾಗದಲ್ಲಿ) ಗೆದ್ದರೆ ಈ ಎರಡು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ಅಡ್‌ಹಾಕ್ ಸಮಿತಿ ಈ ಆರು ಮಂದಿಗೆ ತಿಳಿಸಿತ್ತು. ವಿನಂತಿಯಂತೆ ಆಗಸ್ಟ್‌ನಲ್ಲಿ ಈ ಸೆಣಸಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದೂ ಭರವಸೆ ನೀಡಿತ್ತು.

ಇಂಥ ನಿಲುವು ತಾಳುವ ಮೂಲಕ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದ ಸಮಿತಿ ದೇಶದ ಕಿರಿಯ ಕುಸ್ತಿಪಟುಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ನಾಯಕರೂ ಆಗಿರುವ ದತ್‌ ಹೇಳಿದ್ದಾರೆ.

‘ಈ ರೀತಿಯ ಟ್ರಯಲ್ಸ್‌ ನಡೆಸುವ ನಿರ್ಧಾರಕ್ಕೆ ಅಡ್‌ಹಾಕ್‌ ಸಮಿತಿ ಅನುಸರಿಸಿರುವ ಮಾನದಂಡವಾದರೂ ಏನು?’ ಎಂದು ದತ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

ರವಿ ದಹಿಯಾ ಒಲಿಂಪಿಕ್‌ ಬೆಳ್ಳಿ ವಿಜೇತ. ದೀಪಕ್‌ ಪೂನಿಯಾ ಕಾಮನ್ವೆಲ್ತ್‌ ಚಿನ್ನದ ಪದಕ ಗೆದ್ದವರು. ಅನ್ಶು ಮಲಿಕ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ವಿಜೇತೆ. ಸೋನಮ್‌ ಮಲಿಕ್‌ ಕೂಡ ಇದ್ದಾರೆ. ಇನ್ನೂ ಹಲವು ಸಾಧಕರಿದ್ದಾರೆ. ಈ ಪಕ್ಷಪಾತ, ಅನ್ಯಾಯದ ವಿರುದ್ಧ ಜೂನಿಯರ್‌ ಕುಸ್ತಿಪಟುಗಳು, ಅವರ ತರಬೇತುದಾರರು, ಪೋಷಕರು ಧ್ವನಿ ಎತ್ತಬೇಕು ಎಂದೂ ದತ್‌ ಹೇಳಿದ್ದಾರೆ.

‘ಇದರ (ಪಕ್ಷಪಾತದ ವಿರುದ್ಧ) ಗ್ರೀಕೊ ರೋಮನ್‌, ಪುರುಷರ ಮತ್ತು ಮಹಿಳಾ ಫ್ರೀಸ್ಟೈಲ್‌ ಕುಸ್ತಿಪಟುಗಳು ಧ್ವನಿ ಎತ್ತಬೇಕು. ಇದರ ವಿರುದ್ಧ ಪ್ರತಿಭಟನೆಗೆ ಕುಳಿತುಕೊಳ್ಳಿ. ಪ್ರಧಾನಿ, ಗೃಹ ಸಚಿವ, ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಮತ್ತು ಐಒಎಗೆ ಪತ್ರ ಬರೆಯಿರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT