ನವದೆಹಲಿ: ‘ಯೋಗೇಶ್ವರ ದತ್ ಅವರನ್ನು ಕುಸ್ತಿ ಲೋಕವು ಡಬ್ಲ್ಯುಎಫ್‌ಐ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಗುಲಾಮನ ರೀತಿಯಲ್ಲಿ ನೆನಪಿಡುತ್ತದೆ’ ಎಂದು ಕುಸ್ತಿಪಟು ವಿನೇಶಾ ಫೋಗಟ್ ಶುಕ್ರವಾರ ಟೀಕಿಸಿದ್ದಾರೆ.
ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಆಯ್ಕೆ ಟ್ರಯಲ್ಸ್ ಪ್ರಕ್ರಿಯೆಯಿಂದ ವಿನೇಶಾ ಮತ್ತು ಇತರ ಐವರು ಪೈಲ್ವಾನರಿಗೆ ನೀಡಿರುವ ರಿಯಾಯಿತಿಯನ್ನು ಲಂಡನ್ ಒಲಿಂಪಿಕ್ಸ್ ಪದಕ ವಿಜೇತ ದತ್ ಪ್ರಶ್ನಿಸಿದ ಕೆಲವೇ ಗಂಟೆಗಳ ನಂತರ ವಿನೇಶಾ ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ಮಹಿಳಾ ಕುಸ್ತಿಪಟುಗಳ ದೂರುಗಳ ಬಗ್ಗೆ ವಿಚಾರಣೆ ನಡೆಸಲು ನೇಮಿಸಿದ್ದ ಸಮಿತಿಯಲ್ಲಿದ್ದ ದತ್ ಅವರು ಆರೋಪಗಳ ಬಗ್ಗೆ ವಿಕಟ ನಗೆ ಬೀರಿದ್ದರು. ವಿಚಾರಣೆ ಸಂದರ್ಭದಲ್ಲಿ ಮಹಿಳಾ ಕುಸ್ತಿಪಟುವಿನ ಮುಂದೆ ‘ಇಂಥದ್ದು ನಡೆಯುತ್ತಿರುತ್ತದೆ’ ಎಂದಿದ್ದರು’ ಎಂದೂ ವಿನೇಶಾ ಆರೋಪ ಮಾಡಿದ್ದಾರೆ.
ಸಮಿತಿಯಲ್ಲಿ ಆರು ಸದಸ್ಯರಿದ್ದು ಅವರಲ್ಲಿ ದತ್ ಒಬ್ಬರಾಗಿದ್ದರು. ಸರ್ಕಾರವು ಸಮಿತಿಯ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ಆಯ್ಕೆ ಟ್ರಯಲ್ಸ್‌ನಲ್ಲಿ ವಿಜೇತರಾದವರ ವಿರುದ್ಧ ಒಂದು ಸೆಣಸಾಟದಲ್ಲಿ ಗೆದ್ದರೆ ಆರು ಮಂದಿ ಮಹಿಳಾ ಕುಸ್ತಿಪಟುಗಳನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಅಡ್‌ಹಾಕ್ ಸಮಿತಿಯ ನಿರ್ಧಾರವನ್ನು ಪಿಟಿಐ ಗುರುವಾರ ವರದಿ ಮಾಡಿತ್ತು.
ದತ್ ಅವರನ್ನು ಬ್ರಿಜ್‌ಭೂಷಣ್ ಅವರ ಬೆನ್ನೆಲುಬಿಲ್ಲದ ಹಿಂಬಾಲಕ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಜರೆದಿರುವ ವಿನೇಶಾ, ತಮ್ಮ ಕ್ಷೇತ್ರದವರಿಗೇ ದ್ರೋಹ ಬಗೆದ ವ್ಯಕ್ತಿ ಈತ ಎಂದೂ ಟೀಕಿಸಿದ್ದಾರೆ.
‘ಯೋಗೇಶ್ವರ್ ಅವರಂಥ ಜಯಚಂದ್ರನ ರೀತಿಯ ವ್ಯಕ್ತಿಯಿರುವವರೆಗೆ ದಮನಿತರ ಸ್ಫೂರ್ತಿ ಎತ್ತರದಲ್ಲೇ ಇರುತ್ತದೆ’ ಎಂದೂ ಬರೆದಿದ್ದಾರೆ. (ಕನೌಜ್‌ನ ಅರಸ ಪೃಥ್ವಿರಾಜ್ ಅವರನ್ನು ಸೋಲಿಸಲು ಮೊಹಮ್ಮದ್ ಘೋರಿ ಅವರೊಂದಿಗೆ ಜಯಚಂದ್ರ ಸಂಚು ನಡೆಸಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ).
ಆರೋಪ:
ಸಮಿತಿ ನಡೆಸುತ್ತಿದ್ದ ವಿಚಾರಣೆಯ ವೇಳೆ ಯೋಗೇಶ್ವರ ಅವರು ಬ್ರಿಜ್‌ಭೂಷಣ್ ವಿರುದ್ಧದ ದೂರುಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದರು ಎಂದು ವಿನೇಶಾ ಆರೋಪಿಸಿದ್ದಾರೆ.
‘ಇಬ್ಬರು ಮಹಿಳಾ ಪೈಲ್ವಾನರು ನೀರು ಕುಡಿಯಲು ಹೊರಗೆ ಬಂದಾಗ ಅವರನ್ನು ಹಿಂಬಾಲಿಸಿದ ದತ್, ‘ಬ್ರಿಜ್‌ಭೂಷಣ್‌ಗೆ ಏನೂ ಆಗುವುದಿಲ್ಲ. ಹೋಗಿ ನಿಮ್ಮ ಪ್ರಾಕ್ಟೀಸ್ ಶುರುಮಾಡಿಕೊಳ್ಳಿ’ ಎಂದಿದ್ದರು’ ಎಂದು ವಿನೇಶಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.