ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಿಸ್ತಿನ ಶಿಕ್ಷೆ ಏಕೆ?

ಶಿಕ್ಷಣ ಶಿಕ್ಷೆ ಬೇಕೇ?
Last Updated 24 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಆತ್ಮೀಯರೊಬ್ಬರ ಮಗ ಇತ್ತೀಚೆಗೆ ಎದುರಿಸಿದ ದಾರುಣ ಅನುಭವವನ್ನು ಇಲ್ಲಿ ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಶಿಕ್ಷೆ ಈ ಹೊತ್ತಿಗೆ ತಳೆದಿರುವ ನಕಾರಾತ್ಮಕ ಸ್ವರೂಪ ಎಂಥದ್ದು ಎಂಬುದನ್ನು ಅರ್ಥೈಸಿಕೊಳ್ಳಲು ಇದು ನೆರವಾಗಬಹುದು ಎನಿಸುತ್ತದೆ.

ಆಗಿದ್ದಿಷ್ಟು- ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಆ ಬಾಲಕ ಅಧ್ಯಯನದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದು. ಶಿಸ್ತಿನ ವಿಷಯದಲ್ಲಂತೂ ಹಿರಿಯರಿಗಿಂತಾ ತುಸು ಹೆಚ್ಚಿನ ಕಾಳಜಿ, ಬದ್ಧತೆ. ವಯೋಸಹಜವಾಗಿ ಆಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೂ ಓದಿನ ವಿಷಯದಲ್ಲಿ ಮಾತ್ರ ಕರಾರುವಾಕ್ಕು.

ಇಂಥ ಹುಡುಗ ಒಂದು ದಿನ ಶಾಲೆಯಿಂದ ಹಿಂದಿರುಗಿದ ಬಳಿಕ ಆಟದೆಡೆಗೆ ಆಸಕ್ತಿ ತೋರುವ ಬದಲು ಮಲಗಲು ಅಣಿಯಾದ. ಅಮ್ಮನ ಜೊತೆಗೆ ಮಾತಿಲ್ಲ. `ಏನಾಯ್ತು' ಎಂಬ ಪ್ರಶ್ನೆಗೆ ಬರೀ ಮೌನವೇ ಉತ್ತರ. ಎರಡು ತಿಂಗಳ ಹಿಂದಷ್ಟೇ ಜ್ವರದಿಂದ ಬಳಲುತ್ತಿದ್ದಾಗಲೂ ಉತ್ಸಾಹದಿಂದ ಇದ್ದವ ಈಗ ಹೀಗೇಕೆ ಮಂಕಾದ ಎಂದು ಕೊರಗಿದ ಅಮ್ಮ, ಒಂದಷ್ಟು ಹೊತ್ತಿನ ನಂತರ ಮತ್ತದೇ ಪ್ರಶ್ನೆಯೊಂದಿಗೆ ವಿಚಾರಿಸಿದರು. ಆಗ ಅವನೊಳಗಿನ ಆತಂಕ ಅನಾವರಣಗೊಂಡಿತು.

`ಅಮ್ಮೋ, ನಾನು ಇವತ್ತು ಒನ್ ಅವರ್ ಬಿಸಿಲಲ್ಲಿ ನಿಲ್ಲಬೇಕಾಯ್ತು. ಬೆಳಗಿನ ಪ್ರಯರ್ ಮುಗಿದ ನಂತ್ರ ಎಲ್ಲರನ್ನೂ ಹೀಗೇ ನಿಲ್ಲಿಸಿದ್ರು. ನಾನೇನೂ ತಪ್ಪು ಮಾಡಿರಲಿಲ್ಲ' ಎಂದು ಹೇಳಿದ. ಸ್ವತಃ ಶಿಕ್ಷಕಿಯಾದ ಆ ಬಾಲಕನ ತಾಯಿ ಮಗನ ಶಾಲೆಯ ಕೆಲವು ಶಿಕ್ಷಕರೊಂದಿಗೆ ಮಾತನಾಡಿದರು. ಆಗ ಸಂಪೂರ್ಣ ವಿಷಯ ತಿಳಿಯಿತು.

ಶಾಲೆಯಲ್ಲಿ ಕೆಲವು ಮಕ್ಕಳು ಶಿಸ್ತಿನಿಂದ ಇರಲಿಲ್ಲ. ಕ್ರಮೇಣ ಅಶಿಸ್ತಿನ ವರ್ತನೆಗಳು ಹೆಚ್ಚಾಗುತ್ತಿದ್ದವು. ಇಂಥ ವರ್ತನೆಗಳು ವಿದ್ಯಾಸಂಸ್ಥೆಗೆ ಕೆಟ್ಟ ಹೆಸರು ತರುತ್ತವೆ ಎಂಬ ಕಾರಣಕ್ಕೆ ಮುಖ್ಯೋಪಾಧ್ಯಾಯರು ಅಶಿಸ್ತನ್ನು ಇಲ್ಲವಾಗಿಸಲು ಕಂಡುಕೊಂಡದ್ದು ವಿಚಿತ್ರ ಶಿಕ್ಷೆಯ ಮಾರ್ಗ. ಪ್ರಾರ್ಥನೆಯ ನಂತರ  ಮಕ್ಕಳನ್ನು ಅವರವರ ತರಗತಿಗಳಿಗೆ ಕಳುಹಿಸದೇ `ನಿಮ್ಮ ವರ್ತನೆಗಳು ಹದ್ದುಮೀರುತ್ತಿವೆ.

ನಿಮ್ಮ ಈ ಅಶಿಸ್ತಿಗಾಗಿ ಒಂದು ಗಂಟೆಯ ಕಾಲ ನೀವೆಲ್ಲ ಹೀಗೇ ನಿಂತಿರಬೇಕು. ಆ ಮೂಲಕ, ಶಿಸ್ತಿನಿಂದ ಇರಬೇಕು ಎಂಬುದನ್ನು ತಿಳಿದುಕೊಳ್ಳಬೇಕು' ಎಂದು ತಾಕೀತು ಮಾಡಿದ್ದರು. ಈ ವೃತ್ತಾಂತವನ್ನು ಕೇಳಿದ ಮೇಲೆ ನನಗನಿಸಿದ್ದು `ಶಿಸ್ತನ್ನು ನೆಲೆಗೊಳಿಸಲು ಶಿಕ್ಷೆ ಇರಬೇಕು, ಆದರೆ ಶಿಸ್ತಿನ ಹೆಸರಲ್ಲಿ ಅಶಿಸ್ತಿನ ಶಿಕ್ಷೆ ಏಕೆ?'.

ಯಾವ ತಪ್ಪೂ ಮಾಡಿರದ ಆ ಬಾಲಕನಂತೆಯೇ ಅಲ್ಲಿ ಹಲವರು ಇದ್ದಿರಬಹುದು. ಅವರಲ್ಲಿ ಕೆಲವರು ಮನೆಗೆ ಹಿಂದಿರುಗಿದ ನಂತರ ಪಾಲಕರ ಅತಿ ಭಯಂಕರ ದೂರ್ವಾಸ ರೂಪವನ್ನು ನೆನೆದು ಅದನ್ನು ಹೇಳಿಕೊಳ್ಳದೆ ಒಳಗೊಳಗೇ ಕೊರಗಿರಬಹುದು. ಆ ಕ್ಷಣಕ್ಕೆ ಅವರೊಳಗೆ ನಡೆಯುವ ನೈತಿಕ ಹೊಯ್ದೊಟಗಳು ಶಾಲೆಯನ್ನು ರಾಕ್ಷಸಾಕೃತಿಯ ಪಡಿಯಚ್ಚು ಎಂಬಂತೆ ಬಿಂಬಿಸಬಹುದು.

ಡಬ್ಲ್ಯುಡಬ್ಲ್ಯುಎಫ್‌ನಲ್ಲಿ ದೈತ್ಯಾಕಾರದ ದೇಹಿಗಳು ಸೆಣಸಾಡುವಾಗ ತೋರುವ ಕ್ರೌರ್ಯದ ಮುಖದಂತೆಯೇ ಶಾಲೆಯನ್ನೂ ಕಲ್ಪಿಸಿಕೊಳ್ಳಬಹುದು. `ಛೋಟಾ ಭೀಮ್'ನಂತಹ ಕಾರ್ಟೂನ್ ಧಾರಾವಾಹಿಗಳಲ್ಲಿ ಬರುವ ವಿಲನ್ ಪಾತ್ರಗಳ ತದ್ರೂಪಿನಂತೆ ಮುಖ್ಯೋಪಾಧ್ಯಾಯರನ್ನು ಮತ್ತು ಇತರ ಶಿಕ್ಷಕರನ್ನು ಪರಿಗಣಿಸಬಹುದು.

ಇಂಥ ಸಂದರ್ಭದಲ್ಲಿ ರಾಕ್ಷಸ, ವಿಲನ್ ಪಾತ್ರಗಳನ್ನು ಸದೆಬಡಿಯುವ ಹೀರೊಗಳು ನಮ್ಮ ನೆರವಿಗೆ ಬರಬಾರದೇ ಎಂಬ ಆಲೋಚನೆಗಳು ಮೊಳಕೆಯೊಡೆಯಬಹುದು. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಅನಿವಾರ್ಯತೆಯು ಅವರೊಳಗೆ ಇಡೀ ಶಾಲೆಯ ಬಗ್ಗೆ ತಪ್ಪು ತಿಳಿವಳಿಕೆಗಳನ್ನು ಹುಟ್ಟುಹಾಕುವಷ್ಟರ ಮಟ್ಟಿಗೆ ಪ್ರಭಾವಿ ಆಗಿರುತ್ತದೆ.

ಇಂಥ ವೇಳೆ ಅಮ್ಮ, ಅಪ್ಪನ ಆಪ್ತತೆ, ಆತ್ಮೀಯ ಸಮಾಲೋಚನೆ ದಕ್ಕದಿದ್ದರೆ `ಸರಿಯಾಗಿದ್ದರೂ ಶಿಕ್ಷೆ, ಸರಿಯಾಗಿರದಿದ್ದರೂ ಶಿಕ್ಷೆ' ಎನ್ನುವುದಾದರೆ `ಸರಿಯಾಗಿರದೇ ಶಿಕ್ಷೆ ಅನುಭವಿಸುವುದೇ ಲೇಸು' ಎಂಬಂಥ ಅಪಾಯಕಾರಿ ನಿರ್ಣಯಕ್ಕೂ ಪಕ್ಕಾಗಬಹುದು.

ಮೊದಲ ಬಾರಿಗೆ ಶಾಲೆ ಪ್ರವೇಶಿಸಿದ ಮಗು ಕ್ರಮೇಣ ಶೈಕ್ಷಣಿಕ ಶಿಸ್ತಿನ ಪ್ರಜ್ಞೆಯೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ. ತಪ್ಪುಗಳಾದ ಸಂದರ್ಭದಲ್ಲಿ ಎಚ್ಚರಿಸಿದಾಗ ಅದನ್ನು ತಿದ್ದಿಕೊಂಡು, ಇನ್ನೊಂದು ಸಲ ಹೀಗಾಗಬಾರದು ಎಂಬ ಎಚ್ಚರವನ್ನು ಜಾಗೃತಗೊಳಿಸಿಕೊಳ್ಳುತ್ತದೆ.

ಇಂಥದ್ದೊಂದು ಪ್ರಜ್ಞೆಯೊಂದಿಗೆ ಇರುವ ಮಕ್ಕಳಿಗೆ ಅವರದಲ್ಲದ ತಪ್ಪಿಗೆ ಸಾಮೂಹಿಕವಾಗಿ ಶಿಕ್ಷೆ ಎದುರಿಸುವ ಸಂದರ್ಭ ಎದುರಾದರೆ, ಅವರೊಳಗೆ ಸಕಾರಾತ್ಮಕತೆಯ ಬಗ್ಗೆಯೇ ನಿರಾಸೆ ಮೊಳಕೆಯೊಡೆಯುತ್ತದೆ. ಆ ನಿರಾಸೆ ಅಸಮಾಧಾನವಾಗಿ ಪರಿವರ್ತಿತವಾಗುವ ಅಪಾಯ ಇರುತ್ತದೆ.

ಅಸಮಾಧಾನ ಬಹಳ ದಿನಗಳ ಕಾಲ ಮಕ್ಕಳ ಮನಸ್ಸಿನಲ್ಲಿ ಇದ್ದರೆ ಅವರೊಳಗಿನ ಸೀಮಿತ ಆಕ್ರೋಶ, ಅಸಹಾಯಕತೆಯು ಅಧ್ಯಯನ ಮಾತ್ರವಲ್ಲದೆ ಅವರ ವಯೋಸಹಜವಾದ ಇತರ ಸಕಾರಾತ್ಮಕ ಚಟುವಟಿಕೆಗಳಲ್ಲೂ ನಿರಾಸಕ್ತಿ ಮೂಡುವಂತೆ ಮಾಡುತ್ತದೆ. ಈ ನಿರಾಸಕ್ತಿ ಅವರೊಳಗಿನ ಜೀವನಪ್ರೀತಿಯನ್ನೂ ಕಳೆದುಬಿಡಬಹುದು.

ಶಿಸ್ತನ್ನು ನೆಲೆಗೊಳಿಸುವ ಉದ್ದೇಶದ ಶಿಕ್ಷೆ ಮಕ್ಕಳನ್ನು ಧನಾತ್ಮಕ ನೆಲೆಯಲ್ಲಿ ಬದಲಾಯಿಸುವಂತೆ ಇರಬೇಕೇ ಹೊರತು ತನ್ನ ಅಶಿಸ್ತಿನ ಮುಖದೊಂದಿಗೆ ಎದುರುಗೊಳ್ಳಬಾರದು. ಅಂಥ ಅಶಿಸ್ತಿನ ಸ್ವರೂಪದ ಶಿಕ್ಷೆಯ ನಿರಂತರ ಅವತಾರಗಳು ಭವಿಷ್ಯದಲ್ಲಿ ಅವರನ್ನು ಪ್ರಜಾಪ್ರಭುತ್ವ ವಿರೋಧಿಗಳನ್ನಾಗಿ ರೂಪಿಸುತ್ತವೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ `ಅವರನ್ಯಾಕೆ ಜೈಲಲ್ಲಿ ಇಟ್ಟಿದ್ದಾರೆ?' ಎಂದು ಸಂಬಂಧಿಕರ ಮಗನೊಬ್ಬ ಮುಗ್ಧ ಪ್ರಶ್ನೆಯನ್ನಿಟ್ಟಿದ್ದ. ತಪ್ಪು ಮಾಡಿದವರಿಗೆ ಶಿಕ್ಷೆ ಎಂಬ ನಿಯಮವನ್ನು ಪಾಲಕರು ತಿಳಿಸಿ ಸುಮ್ಮನಾಗಿದ್ದರು. ನಂತರ ಅದೇ ವ್ಯಕ್ತಿ ಬಿಡುಗಡೆಯಾಗಿ ವಿಜಯದ ಸಂಕೇತದೊಂದಿಗೆ ಮಾಧ್ಯಮಗಳಲ್ಲಿ ಮಿಂಚಿದಾಗ `ತಪ್ಪು ಮಾಡಿ ಜೈಲಿಗೆ ಹೋಗಿ, ಮತ್ತೆ ತಪ್ಪಿಸಿಕೊಂಡು ಹಾಗೆ ಹೊರಗೆ ಬರಬಹುದಾ?' ಎಂಬ ಮತ್ತೊಂದು ಪ್ರಶ್ನೆ ಎದುರಾದಾಗ ಪಾಲಕರಿಗೆ ಉತ್ತರಿಸಲು ಕಷ್ಟವಾಯಿತಂತೆ.

ಇದು ನಮ್ಮ ವ್ಯವಸ್ಥೆ ಅಳವಡಿಸಿಕೊಂಡಿರುವ ಶಿಕ್ಷೆ ಹಂಚಿಕೆಯ ಸ್ವರೂಪದ ಒಂದು ಉದಾಹರಣೆ ಮಾತ್ರ. ವ್ಯವಸ್ಥೆಯ ಒಳಗೇ ಇರುವ ಅಶಿಸ್ತು, ಅವ್ಯವಸ್ಥೆಯ ರಾಜಕಾರಣವು ಶಿಕ್ಷೆಯ ಸ್ವರೂಪವನ್ನೇ ಬದಲಾಯಿಸುವಷ್ಟರ ಮಟ್ಟಿಗೆ ಪ್ರಭಾವಿ ಆಗಿರುವ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು ಕಷ್ಟ.

ಆದರೆ, ಅವರವರ ಹಂತಗಳಲ್ಲಿ ಸರಿ-ತಪ್ಪುಗಳನ್ನು ವಿವೇಚಿಸುವ ಸಾಮರ್ಥ್ಯವನ್ನು ನೆಲೆಗೊಳಿಸುವಲ್ಲಿ ಶಿಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅದು ಪ್ರಜಾಸತ್ತಾತ್ಮಕ ಅಲ್ಲದ ನೆಲೆಗಟ್ಟಿನಲ್ಲಿ ಹಂಚಿಕೆಯಾದರೆ ಈ ವ್ಯವಸ್ಥೆಗೆ ಕ್ರಮೇಣ ನಾವು ಅಪಾಯಕಾರಿ ವ್ಯಕ್ತಿತ್ವಗಳನ್ನು ಕೊಡುಗೆಯಾಗಿ ನೀಡಿದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT