ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಪರೀಕ್ಷಾ ಪರ್ವ

Last Updated 10 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಹುಡುಕುತ್ತಾ, ಉತ್ತಮ ಅಂಕ ಗಳಿಸುವುದು ಹೇಗೆ, ರ‍್ಯಾಂಕ್ ಪಡೆಯುವುದು ಹೇಗೆ ಎಂಬಂತಹ  ಪ್ರಶ್ನೆಗಳೊಂದಿಗೆ ಮಕ್ಕಳು ನೋಟ್ಸುಗಳ ಒಳಗೆ ತಲೆ ಹುದುಗಿಸಿಕೊಂಡು ಕುಳಿತಿರುವ ದೃಶ್ಯ ಈಗ ಎಲ್ಲ ಮನೆಗಳಲ್ಲೂ ಸಾಮಾನ್ಯ. ಇದರೊಂದಿಗೆ ನನ್ನ ಮಗ/ಳು ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸುವುದೇ ನಮಗೆ ಮುಖ್ಯ ಎಂಬಂತೆ ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರೂ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ.

ಪೋಷಕರ ಈ ವರ್ತನೆಯೇನೋ ಸಹಜ. ಆದರೆ ಇಲ್ಲಿ ಮಾನಸಿಕ, ದೈಹಿಕ ಒತ್ತಡಕ್ಕೆ ಒಳಗಾಗಿ ಹಿಂಸೆ ಅನುಭವಿಸುವವರು ಮಾತ್ರ ಬಡಪಾಯಿ ವಿದ್ಯಾರ್ಥಿಗಳು. ಇಂತಹ ಒತ್ತಡ ಸಹಿಸಲಾರದೆ ಅನೇಕ ಮಕ್ಕಳು ಮನೆ ಬಿಟ್ಟು ಓಡಿಹೋಗುವುದು, ಆತ್ಮಹತ್ಯೆಗೆ ಶರಣಾಗುವುದು, ಖಿನ್ನತೆಗೆ ಒಳಗಾಗುವ ಘಟನೆಗಳು ಪರೀಕ್ಷಾ ಸಮಯದ ಆಸುಪಾಸಿನ ದಿನಗಳಲ್ಲಿ ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಅನೇಕ ತಜ್ಞರು ಸಲಹೆ- ಸೂಚನೆ ನೀಡುತ್ತಾ ಬಂದರೂ ಪರೀಕ್ಷಾ ಒತ್ತಡದ ಪರಿಣಾಮ ಮಾತ್ರ ಶಮನವಾಗಿಲ್ಲ; ಆತ್ಮಹತ್ಯೆಯಂತಹ ಘಟನೆಗಳೂ ನಿಂತಿಲ್ಲ; ಒತ್ತಡ ಹೇರುವ ಪೋಷಕರ ಸಂಖ್ಯೆಯೂ ಕಡಿಮೆಯಾಗಿಲ್ಲ.

ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಒತ್ತಡವನ್ನು ನಿವಾರಿಸಿಕೊಂಡು ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬುದಕ್ಕೆ ಕೆಲವು ಮಾರ್ಗೋಪಾಯಗಳು ಇಲ್ಲಿವೆ.

1. ಪರೀಕ್ಷೆ ಎಂಬುದು ಭಯಾನಕ ಭೂತವಲ್ಲ. ಅದೊಂದು ಕೋರ್ಸಿನ ಮುಂದಿನ ಹಂತ ತಲುಪಲು ಇರುವ ಮೆಟ್ಟಿಲು. ಆ ಮೆಟ್ಟಿಲು ತಪ್ಪಿದರೆ ಮತ್ತೊಂದು ಮೆಟ್ಟಿಲು ಇದ್ದೇ ಇರುತ್ತದೆ. ಅದಕ್ಕೆ ಆತ್ಮಹತ್ಯೆ ಪರಿಹಾರಅಲ್ಲ ಎಂಬುದನ್ನು ಅರಿತು ಪರೀಕ್ಷೆಗೆ ಅಣಿಯಾಗಿ.

2. ಯುದ್ಧಕ್ಕೆ ಹೇಗೆ ಅಸ್ತ್ರ-ಶಸ್ತ್ರಗಳ  ಅಗತ್ಯವಿದೆಯೋ ಹಾಗೆಯೇ ಪರೀಕ್ಷೆಗೂ ಓದು ಎಂಬ ಮುಖ್ಯ ಅಸ್ತ್ರ ಬೇಕು. ಆದರೆ, ಯುದ್ಧದಲ್ಲಿ ಸೋಲು-ಗೆಲುವು ಇರುವಂತೆ ಪರೀಕ್ಷೆಯಲ್ಲೂ ಸೋಲು-ಗೆಲುವು ಸಾಮಾನ್ಯ.

3. ಪರೀಕ್ಷೆ ತಯಾರಿಗೆ ಬಹು ಮುಖ್ಯವಾಗಿ ಹಳೆಯ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದು ಅಗತ್ಯ. ಇದರಿಂದ ಮುಂದಿನ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ; ಅವುಗಳಿಗೆ ಹೇಗೆ ಮತ್ತು ಎಷ್ಟು ಉತ್ತರ ಬರೆಯಬೇಕು, ಪ್ರತಿ ಪ್ರಶ್ನೆಗೆ ಮೀಸಲಾದ ಕಾಲಮಿತಿ ಏನು ಎಂಬುದರ ಅರಿವಾಗುವುದರಿಂದ  ಸಮಯದ ಉಳಿತಾಯವಾಗಿ ಪರೀಕ್ಷಾ ಸಿದ್ಧತೆಗೆ ಬೇಕಾದ ಶೇ 50ರಷ್ಟು ಜ್ಞಾನ ದೊರೆಯುತ್ತದೆ.

4. ಅಲ್ಲದೆ ಸಂಬಂಧಿಸಿದ ವಿಷಯಗಳ ಪಠ್ಯಪುಸ್ತಕಗಳನ್ನು ಓದಿ, ಟಿಪ್ಪಣಿ ಮಾಡಿಕೊಳ್ಳುವುದು ಉತ್ತಮ. ಯಾರೋ ಬರೆದ, ಯಾವುದೋ ಹಿಂದಿನ ವರ್ಷದ ನೋಟ್ಸನ್ನು ಓದುವುದರಿಂದ ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗದೆ, ಉತ್ತಮ ಅಂಕ ಗಳಿಸುವುದರಲ್ಲಿ ಸೋಲಬಹುದು. ಅದಕ್ಕಾಗಿ ಅಧಿಕೃತವಾದ ರೆಫರೆನ್ಸ್ ಪುಸ್ತಕಗಳನ್ನು ಓದುವುದು ಮುಖ್ಯ.

5. ಪ್ರಶ್ನೆಪತ್ರಿಕೆ ನಿಮ್ಮ ಕೈಗೆ ಬಂದ ಕೂಡಲೇ ಎಲ್ಲ ಪ್ರಶ್ನೆಗಳನ್ನೂ ಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ. ಆ ನಂತರ ಯಾವುದು ಸುಲಭವಾಗಿ, ಕರಾರುವಾಕ್ಕಾಗಿ ನಿಮಗೆ ಉತ್ತರಿಸಲು ಸಾಧ್ಯವೋ ಅಂತಹ ಪ್ರಶ್ನೆಗಳನ್ನು ಗುರುತು ಹಾಕಿಕೊಂಡು, ಅವುಗಳಿಗೆ ಮೊದಲು ಉತ್ತರಿಸಿ. ಇದು ನಿಮ್ಮ ಆತ್ಮವಿಶ್ವಾಸ ವೃದ್ಧಿಗೆ ಸಹಕಾರಿ. ಅಲ್ಲದೆ, ನಿಮ್ಮ ಸಮಯದ ಉಳಿತಾಯವನ್ನೂ ಮಾಡುತ್ತದೆ. ಆದರೆ, ಪ್ರಶ್ನೆಪತ್ರಿಕೆ ಸಿಕ್ಕಿದ ಕೂಡಲೇ ಪೂರ್ಣ ಓದದೆ ಬಹುತೇಕ ವಿದ್ಯಾರ್ಥಿಗಳು ಮೊದಲ ಪ್ರಶ್ನೆ ಓದಿದ ತಕ್ಷಣ ಉತ್ತರಿಸುವಂತೆ ನೀವೂ ಮಾಡಬೇಡಿ.

6. ಕೇಳಿದ ಪ್ರಶ್ನೆಗೆ ಎಷ್ಟು ಉತ್ತರದ ಅಗತ್ಯವಿದೆಯೋ ಅಷ್ಟನ್ನು ಮಾತ್ರ ಬರೆಯುವುದನ್ನು ಮರೆಯದಿರಿ. ಗೊತ್ತಿದೆ ಎಂಬ ಕಾರಣಕ್ಕೆ ಕಡಿಮೆ ಅಂಕದ ಪ್ರಶ್ನೆಗೆ ಪುಟಗಟ್ಟಲೆ ಬರೆಯುವುದು ಸರಿಯಲ್ಲ. ಇದು ನಿಮ್ಮ ಸಮಯವನ್ನು ಹಾಳು ಮಾಡುವುದಲ್ಲದೆ, ಮಿಕ್ಕ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶವನ್ನು ನುಂಗಿಹಾಕುತ್ತದೆ.

7. ಇನ್ನು ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆದು ಆದ ನಂತರ ಮತ್ತೊಮ್ಮೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೀರ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಅಲ್ಲದೆ ಪೂರಕವಾಗಿರುವ ಭೂಪಟ, ಗ್ರಾಫ್, ಹೆಚ್ಚುವರಿ ಹಾಳೆಗಳನ್ನು ಉತ್ತರ ಪತ್ರಿಕೆಯ ಮಧ್ಯದಲ್ಲಿ ಸೇರಿಸಿ ಬಿಗಿಯಾಗಿ ದಾರ ಕಟ್ಟಿ.

8. ಪರೀಕ್ಷೆ ಅವಧಿ ಮುಗಿಯುವ ತನಕ ಕೊಠಡಿಯನ್ನು ಬಿಡದೆ, ಸಂಪೂರ್ಣ ಸಮಯವನ್ನು ಹಾಲ್‌ನಲ್ಲಿ ಕಳೆಯಿರಿ. ಕೊಠಡಿ ಮೆಲ್ವಿಚಾರಕರು ಕೇಳಿದ ನಂತರವೇ ನಿಮ್ಮ ಉತ್ತರ ಪತ್ರಿಕೆಯನ್ನು ಅವರಿಗೆ ಒಪ್ಪಿಸಿ. ಅನಂತರ ನಿರಾಳವಾಗಿ ಅಲ್ಲಿಂದ ನಿರ್ಗಮಿಸಿ.

ಇಂತಹ ಕ್ರಮಗಳನ್ನು ವಿದ್ಯಾಥಿಗಳು ವಿವೇಚನೆಯಿಂದ ಅನುಸರಿಸಿದ್ದೇ ಆದರೆ ಅವರು ಪರೀಕ್ಷೆ ಎಂಬ ಮಾಯಾಜಿಂಕೆಯನ್ನು ತಮ್ಮ ಪೆನ್ನು ಮತ್ತು ಉತ್ತರ ಪತ್ರಿಕೆಯಲ್ಲಿ ಹೆಡೆಮುರಿ ಕಟ್ಟಿ ಶ್ರೇಷ್ಠವಾದ ಅಂಕಗಳ ಬೇಟೆಯಾಡಬಹುದು. ಒತ್ತಡ, ಆತ್ಮಹತ್ಯೆ, ಆತಂಕ ಮುಂತಾದ ಭೂತಗಳನ್ನು ಬದಿಗೆ ಸರಿಸಿ, `ಉತ್ತಮ ಅಂಕ' ಎಂಬ ಕೀರ್ತಿಯ ಕಿರೀಟವನ್ನು ತೊಟ್ಟು ಮೆರೆಯಬಹುದು.

ಪಾಲಕರೇ ನಿಮಗಿದು ಸಲ್ಲದು
ನಮ್ಮ ಮಕ್ಕಳು ಬಹಳ ಬುದ್ಧಿವಂತರು, ಅತಿ ಹೆಚ್ಚು ಅಂಕ ಗಳಿಸಿದವರು ಎಂದೆಲ್ಲ ನೆರೆಹೊರೆಯವರು, ಬಂಧು-ಬಳಗದವರ ಎದುರು ಜಂಬ ಕೊಚ್ಚಿಕೊಳ್ಳಲು ಉತ್ತಮ ಅಂಕ ಗಳಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಇದರಿಂದ ಮಕ್ಕಳ ಮಾನಸಿಕ ಒತ್ತಡ ಹೆಚ್ಚಾಗಿ ಅವರು ಹಿಂಸೆ ಅನುಭವಿಸುವ ಹಂತ ತಲುಪುತ್ತಾರೆ.

ಮಕ್ಕಳಿಗೆ ಇಷ್ಟವಿರಲಿ, ಇಲ್ಲದಿರಲಿ ಅವರು ಡಾಕ್ಟರ್, ಎಂಜಿನಿಯರ್ ಆಗಬೇಕು ಎಂಬ ಪೋಷಕರ ಹಟಮಾರಿ ಧೋರಣೆ ಶಿಕ್ಷಣದ ಮೇಲೆ ಪರಿಣಾಮ ಬೀರಬಹುದು. ಮಕ್ಕಳಿಗೆ ವಿದ್ಯೆ ಎಂದರೆ ವಾಕರಿಕೆ ಬರುವಂತಾದೀತು. ಆದ್ದರಿಂದ ಪೋಷಕರು ತಮ್ಮ ಬಯಕೆಗಳನ್ನು ಬಲವಂತವಾಗಿ ಹೇರದೆ, ಮಕ್ಕಳ ಇಷ್ಟ-ಕಷ್ಟ ಅರಿತು ಅವರಿಗೆ ಇಷ್ಟವಾಗುವುದನ್ನು ಓದಲು ಹುರಿದುಂಬಿಸಬೇಕು.

ಓದು ಎಂಬುದು ಸ್ವಪ್ರಯತ್ನ, ಒಲವಿನಿಂದ ಬರುತ್ತದೆ ಹೊರತು ಬಲವಂತದಿಂದಲ್ಲ ಎಂಬುದನ್ನು ಅರಿಯಬೇಕು. ತಾವೇನಾಗಬೇಕು ಎಂಬುದನ್ನು ಮಕ್ಕಳೇ ನಿರ್ಧರಿಸುವಂತೆ ನೋಡಿಕೊಳ್ಳಬೇಕು. ಬೇಕಾದರೆ ಅವರನ್ನು ತಮ್ಮೆದುರು ಕೂರಿಸಿಕೊಂಡು ಸಮಾಲೋಚಿಸಿ ಸಲಹೆ ನೀಡಬಹುದು.
ಒಟ್ಟಿನಲ್ಲಿ ಪೋಷಕರು ಮತ್ತು ಮಕ್ಕಳ ನಡುವಿನ ಕಂದಕಗಳಿಂದ ಮಕ್ಕಳ ಪರೀಕ್ಷೆಯ ಮೇಲಷ್ಟೇ ಅಲ್ಲ, ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿ ಇಡೀ ಕುಟುಂಬದ ನೆಮ್ಮದಿ ಹರಣಕ್ಕೆ ಕಾರಣವಾಗುತ್ತದೆ.

ಕಾಪಿ ಚೀಟಿ ಬರೆಯುತ್ತಿದ್ದೀರಾ?
ಪರೀಕ್ಷೆ ವೇಳೆಯನ್ನು ಅಭ್ಯಾಸಕ್ಕೆ ಮೀಸಲಿಡುವ ಬದಲು, ಕಾನೂನು ಬಾಹಿರವಾಗಿ ಪರೀಕ್ಷೆಯಲ್ಲಿ ನಕಲು (ಕಾಪಿ) ಹೊಡೆಯುವುದು ಹೇಗೆ ಎಂಬ ಬಗ್ಗೆ  ಯೋಚಿಸುತ್ತಾ ಕೆಲವರು ಕಾಲಹರಣ ಮಾಡುತ್ತಾರೆ. ಅಪರಾಧ ಎಂದು ತಿಳಿದಿದ್ದರೂ ಕಾಪಿ ಹೊಡೆಯಲು ಬೇಕಾದ ಚೀಟಿಗಳನ್ನು ಬರೆಯುತ್ತಾ ಕುಳಿತಿರುತ್ತಾರೆ. ಇದರ ಬದಲು ಕಾಪಿ ಬರೆಯಲು ಬಳಸುವ ಸಮಯವನ್ನು ಓದಿನಲ್ಲಿ ತೊಡಗಿಸಿದರೆ ಕನಿಷ್ಠ ಪಕ್ಷ ಪಾಸಾಗುವಷ್ಟು ಅಂಕಗಳನ್ನಾದರೂ ಗಳಿಸಬಹುದು.

ಪರೀಕ್ಷೆ ಎಂಬುದು ನಿಮ್ಮ ಜ್ಞಾನದ ಮಟ್ಟವನ್ನು ಪ್ರಾಮಾಣಿಕವಾಗಿ ಅಳೆಯಲು ಇರುವ ಮಾಪಕ. ಆದರೆ, ಅದನ್ನು ಮೋಸದಿಂದ ಪಡೆದರೆ ನೀವು ಗಳಿಸುವ ಅಂಕಗಳಿಗೆ ಬೆಲೆ ಸಿಗುವುದೇ? ಸಿಕ್ಕರೂ ಅದರಲ್ಲಿ ಪ್ರಾಮಾಣಿಕತೆ ಉಂಟೇ ಎಂಬುದನ್ನು ಯೋಚಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT