ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ‘ಸಾಹಸ’ಕ್ಕೆ ತಯಾರಿ

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಳೆದ ವಾರ ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಲ್ಲಿ ನಡೆದ ಬೆಂಗಳೂರು ಬೌಲ್ಡರಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡವರು ಗೋಡೆ ಏರುತ್ತಾ ಕನಸಿನ ಗೋಪುರ ಕಟ್ಟಿದರು. ಹತ್ತು ಮೀಟರ್ ಎತ್ತರದ ಗೋಡೆಯ ‘ಶಿಖರ’ವನ್ನು ಲೀಲಾಜಾಲವಾಗಿ ಮುಟ್ಟುತ್ತಿದ್ದ ಕ್ರೀಡಾಪಟುಗಳು ದೇಶದ ಸಾಹಸ ಕ್ರೀಡೆಯಲ್ಲಿ ಬೆಳಗುವ ಭರವಸೆ ಮೂಡಿಸಿದರು.

ಗೋಡೆ ಏರುವ ಸಾಹಸ ಕ್ರೀಡೆಯನ್ನು ಟೋಕಿಯೊದಲ್ಲಿ ನಡೆಯುವ 2020ರ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ನಿರ್ಧರಿಸಿದೆ.

ಇದಕ್ಕಾಗಿ ದೇಶದ ಕ್ರೀಡಾಪಟುಗಳು ಸಜ್ಜುಗೊಳ್ಳುತ್ತಿರುವಾಗಲೇ ನಡೆದ ಬೆಂಗಳೂರು ಬೌಲ್ಡರಿಂಗ್ ಚಾಂಪಿಯನ್‌ಷಿಪ್‌ ಈ ಕ್ರೀಡೆಯಲ್ಲಿ ಭಾರತದ ಸಾಮರ್ಥ್ಯ ತಿಳಿಯುವ ವೇದಿಕೆಯೂ ಆಯಿತು. ದೇಶದಲ್ಲಿ ಈ ಕ್ರೀಡೆಗೆ ಹೊಸ ಆಯಾಮ ನೀಡಿರುವುದು ಕರ್ನಾಟಕ. ಆದ್ದರಿಂದ ಇಲ್ಲಿನ ಕ್ರೀಡಾಪಟುಗಳು ಒಲಿಂಪಿಕ್ಸ್‌ ಪದಕದ ಕನವರಿಕೆಯಲ್ಲಿದ್ದಾರೆ.

ಫ್ರಾನ್ಸ್, ಇಟೆಲಿ, ಪೋಲೆಂಡ್‌, ಉಕ್ರೇನ್‌, ಆಸ್ಟ್ರಿಯಾ ಮುಂತಾದ ರಾಷ್ಟ್ರಗಳಲ್ಲಿ ಗೋಡೆ ಏರುವ ಕ್ರೀಡೆ ಪ್ರವರ್ಧಮಾನದಲ್ಲಿದೆ. ಭಾರತ ವಿಶ್ವಕಪ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳ ಕೊರತೆ ಅನುಭವಿಸುತ್ತಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದ ಇತರ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕಗಳು ಬಂದಿವೆ. ಅವುಗಳ ಪೈಕಿ ಬಹುತೇಕ ಪದಕಗಳು ಬಂದದ್ದು ಕರ್ನಾಕಟದ ಕ್ರೀಡಾಪಟುಗಳ ಮೂಲಕ.

ಗೋಡೆ ಏರುವ ಸಾಹಸ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಇದನ್ನು ಕ್ರೀಡೆ ಎಂದು ಪರಿಗಣಿಸಿ ಸ್ಪರ್ಧೆ ಆರಂಭಗೊಂಡು 25 ವರ್ಷಗಳಾಗಿವೆ.

20 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಸಮಿತಿ ಸ್ಥಾಪನೆಯಾಗಿತ್ತು. ಹತ್ತು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಆರೋಹಣ ಕ್ರೀಡೆ ಫೆಡರೇಷನ್‌ ಸ್ಥಾಪನೆಗೊಂಡ ನಂತರ ನಿಯಮಿತವಾಗಿ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ವಿಶ್ವಕಪ್‌ ನಡೆಯುತ್ತಿದೆ.

ಯುರೋಪಿಯನ್ ಚಾಂಪಿಯನ್‌ಷಿಪ್‌, ವಿಶ್ವ ಯುವ ಚಾಂಪಿಯನ್‌ಷಿಪ್‌ ಮತ್ತು ಅಂಗವಿಕಲರ ಚಾಂಪಿಯನ್‌ಷಿಪ್‌ ಕೂಡ ಪ್ರತ್ಯೇಕವಾಗಿ ನಡೆಯುತ್ತಿದೆ. ಫೆಡರೇಷನ್‌ನಲ್ಲಿ 81 ಸದಸ್ಯ ರಾಷ್ಟ್ರಗಳಿವೆ. ಭಾರತದಲ್ಲಿ ಇಂಡಿಯನ್‌ ಮೌಂಟೆನರಿಂಗ್‌ ಫೌಂಡೇಷನ್‌ ಸಂಸ್ಥೆಯ ಅಡಿಯಲ್ಲಿ ಚಟುವಟಿಕೆ ನಡೆಯುತ್ತಿದೆ.

ಸೇನೆ, ಪೊಲೀಸ್‌ ತಂಡಗಳು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ವಲಯಗಳು ಅಸ್ತಿತ್ವದಲ್ಲಿವೆ. ದಕ್ಷಿಣ ವಲಯದ ಚಟುವಟಿಕೆಯ ಕೇಂದ್ರ ಬೆಂಗಳೂರಿನ ಜನರಲ್‌ ತಿಮ್ಮಯ್ಯ ಅಕಾಡೆಮಿ. ದಕ್ಷಿಣ ವಲಯದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಸೌಲಭ್ಯಗಳಿವೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಗೂ ರಾಜ್ಯ ಆತಿಥ್ಯ ನೀಡಿತ್ತು.

2003ರಲ್ಲಿ ಮೊದಲ ಬಾರಿ ಚಾಂಪಿಯನ್‌ಷಿಪ್‌ ನಡೆದಿದ್ದು 2013 ಮತ್ತು 2016ರಲ್ಲಿ ಕ್ರೀಡಾಪಟುಗಳು ಸಾಮರ್ಥ್ಯ ತೋರಿಸಲು ವೇದಿಕೆ ಒದಗಿಸಿತ್ತು.

ಮೂರೂ ಚಾಂಪಿಯನ್‌ಷಿಪ್‌ಗಳು ಬೆಂಗ ಳೂರಿನಲ್ಲಿ ನಡೆದಿದ್ದವು. ಆಂಧ್ರದಲ್ಲಿ ಮೊದಲಿನಿಂದಲೇ ಕೃತಕ ಗೋಡೆ ಇದೆ. ಕೇರಳದಲ್ಲಿ ಈಗಷ್ಟೇ ನಿರ್ಮಾಣ ಪೂರ್ಣಗೊಂಡಿದೆ. ತಮಿಳುನಾಡಿನದಲ್ಲಿ ಸದ್ಯ ದಲ್ಲೇ ನಿರ್ಮಾಣ ವಾಗ ಲಿದೆ. ‘ಭಾರತದಲ್ಲಿ ಈ ಕ್ರೀಡೆಗೆ ಕರ್ನಾಟಕ ನೀಡಿ ರುವ ಕೊಡುಗೆ ಅಪಾರ.

ದಕ್ಷಿಣ ವಲಯದಲ್ಲಂತೂ ನಮ್ಮದೇ ಪ್ರಾಬಲ್ಯ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ 17 ಬಾರಿ ಪ್ರಶಸ್ತಿ ಗೆದ್ದಿರುವ ದಕ್ಷಿಣ ವಲಯ ತಂಡದಲ್ಲಿ ಇದ್ದವರೆಲ್ಲ ಕರ್ನಾ ಕಟದ ಕ್ರೀಡಾಪಟುಗಳು. ರಾಜ್ಯದ ಕ್ರೀಡಾಪಟುಗಳಿಗೆ ಈ ವರೆಗೆ 30 ಅಂತರ ರಾಷ್ಟ್ರೀಯ ಪದಕಗಳು ಸಂದಿವೆ. ಈ ಎಲ್ಲ ಕಾರಣಗಳಿಂದ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆ ಇದೆ’ ಎಂದು ದಕ್ಷಿಣ ವಲಯದ ಅಧ್ಯಕ್ಷ ಎಂ.ಆರ್‌.ವಿಜಯರಾಘವನ್‌ ಹೇಳಿದರು.

‘ಲೀಡ್‌ ಮತ್ತು ಸ್ಪೀಡ್‌ ವಿಭಾಗಗಳಲ್ಲಿ ಹಿಂದಿನಿಂದಲೇ ಸ್ಪರ್ಧೆಗಳು ನಡೆಯುತ್ತಿವೆ. ಬೌಲ್ಡರಿಂಗ್‌ ವಿಭಾಗವನ್ನು ಇತ್ತೀಚೆಗೆ ಸೇರಿ ಸಲಾಗಿದೆ. ಈ ವಿಭಾಗಗಳಲ್ಲಿ ದೊಡ್ಡ ವ್ಯತ್ಯಾಸ ವೇನೂ ಇಲ್ಲ. ದಕ್ಷಿಣ ವಲಯದಲ್ಲಿ ಎಲ್ಲ ವಿಭಾಗಗಳಿಗೂ ಆದ್ಯತೆ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು.

*

ಇದು ಸ್ಥಿತ್ಯಂತರದ ಕಾಲ
ಭಾರತದಲ್ಲಿ ಗೋಡೆ ಹತ್ತುವ ಸಾಹಸ ಕ್ರೀಡೆಗೆ ಹೊಸ ದಿಸೆ ತೋರಿಸಿದೆ ಕರ್ನಾಟಕ. ಬೆಂಗಳೂರಿನ ಪ್ರವೀಣ್‌, ವತ್ಸಲಾ, ಶಾಂತಿರಾಣಿ ಮುಂತಾದವರು ವರ್ಷಗಳಿಂದ ರಾಜ್ಯಕ್ಕೆ ಈ ಕ್ರೀಡೆಯಲ್ಲಿ ವಿಶಿಷ್ಟ ಸ್ಥಾನ ಗಳಿಸಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ಈಗ ಭರವಸೆ ಮೂಡಿಸಿರುವವರು ಭರತ್ ಪೆರೇರಾ, ಚೇಯಾ ಮಾರಕ್‌, ನೇಹಾ ಪ್ರಕಾಶ್ ಮುಂತಾದವರು.

ಈ ಎಲ್ಲ ಹೆಸರುಗಳ ನಡುವೆ ಮಿಂಚುವ ಅಪರೂಪದ ವ್ಯಕ್ತಿ ಅರ್ಚನಾ ಬಿ.ಎಸ್‌. 1999ರಿಂದ 2006ರ ವರೆಗೆ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಅವರು 2004ರಲ್ಲಿ ಏಷ್ಯಾ ಕಪ್‌ ತಮ್ಮದಾಗಿಸಿಕೊಂಡಿದ್ದರು. ವಿಶ್ವಕಪ್‌ನಲ್ಲೂ ಪಾಲ್ಗೊಂಡ ಗೌರವ ಅವರದ್ದು.

ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅರ್ಚನಾ ಇದು ದೇಶದಲ್ಲಿ ಗೋಡೆ ಹತ್ತುವ ಕ್ರೀಡೆಯ ಸ್ಥಿತ್ಯಂತರಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದ ಪಾಲಿಗಂತೂ ಇದು ಸಾಧನೆಯ ಶಿಖರವೇರುವ ಅವಕಾಶ ಒದಗಿಸಿದೆ ಎಂದು ಅವರು ಹೇಳಿದರು.

‘ದೇಶದ ಸಾಹಸ ಕ್ರೀಡಾಪಟುಗಳು ಈಗ ಮುಂದಿನ ಒಲಿಂಪಿಕ್ಸ್‌ಗೆ ಸಜ್ಜಾಗಬೇಕಿದೆ. ಟೋಕಿಯೊದಲ್ಲಿ ಪದಕ ಗೆಲ್ಲುವುದು ಸ್ವಲ್ಪ ಕಷ್ಟ. ಆದರೂ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸವಿದೆ. ಆದರೆ 2024ರಲ್ಲಿ ಭಾರತಕ್ಕೆ ಪದಕ ಕಚಿತ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT