ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ - ಉತ್ತರ

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶಬ್ಬೀರ್ ಪಾಷ, ಹಾಸನ
ನಾನು ಬಿ.ಎಸ್ಸಿ. (ಪಿ.ಸಿ.ಎಂ) ಪದವಿಯನ್ನು ಶೇಕಡಾ 61 ಅಂಕಗಳೊಂದಿಗೆ ಮುಗಿಸಿ, ನಂತರ ಕಳೆದ ವರ್ಷ ಶೇ 88 ಫಲಿತಾಂಶದೊಂದಿಗೆ ಬಿ.ಇಡಿ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ನನಗೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕನಾಗಿ ಕೆಲಸ ಮಾಡಲು ಇಚ್ಛೆ ಇದೆ. ಆದರೆ ಕಳೆದ ನಾಲ್ಕೈದು ತಿಂಗಳುಗಳಿಂದ ಕೈ ಬೆರಳುಗಳ ಮೇಲೆ ಬಿಳಿಮಚ್ಚೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾನು ಶಿಕ್ಷಕನಾಗಲು ಸಾಧ್ಯವಿಲ್ಲವೇ? ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದೇ?

–ನಿಮ್ಮ ಕೈ ಬೆರಳುಗಳ ಮೇಲೆ ಕಾಣಿಸಿಕೊಳ್ಳುತ್ತಿರುವ ಬಿಳಿ ಮಚ್ಚೆಗಳು ನೀವು ಶಿಕ್ಷಕನಾಗಿ ಕೆಲಸ ಮಾಡಲು ಅಡ್ಡಿಯಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಲಾರದು. ಆದರೆ ನಿಮಗೆ ಸದ್ಯಕ್ಕೆ ಇರುವ ಸಮಸ್ಯೆಗೆ ಚರ್ಮರೋಗ ತಜ್ಞರನ್ನು ಭೇಟಿಯಾಗಿ ವೈದ್ಯಕೀಯ ಪರಿಹಾರವನ್ನು ಕಂಡುಕೊಳ್ಳಬಹುದು.

ಹೇಮಂತ್ ನಾಯಕ್
ನಾನು ಕಾಲೇಜಿಗೆ ಹಾಜರಾಗಿ ಬಿ.ಎಸ್ಸಿ. 5ನೇ ಸೆಮಿಸ್ಟರ್‌ವರೆಗೂ  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದೇನೆ. ಆದರೆ ಆರ್ಥಿಕ ಕಾರಣಗಳಿಂದ ಮುಂದೆ ಓದಲು ಸಾಧ್ಯವಾಗದೆ ಉದ್ಯೋಗಕ್ಕೆ ಸೇರಿಕೊಂಡೆ. ಈಗ ನಾನು ಕೊನೆ ವರ್ಷಕ್ಕೆ ಬೇರೆ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಓದು ಮುಂದುವರಿಸಬಹುದೇ?

–ಒಂದು ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಕಾರಣಾಂತರಗಳಿಂದ ಬೇರೊಂದು ಸ್ಥಳಕ್ಕೆ ನಾವು ಹೋಗಲೇಬೇಕಾದ ಸಂದರ್ಭ ಬಂದರೆ, ಆ ಸ್ಥಳದಲ್ಲಿ ಇರುವ ಮತ್ತೊಂದು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜಿನಲ್ಲಿ ಪ್ರವೇಶ ಪಡೆದು ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಮಾನ್ಯತೆ ಪಡೆದ ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ವಿಶ್ವವಿದ್ಯಾಲಯದ ಕಾಲೇಜಿಗೆ ಪ್ರವೇಶ ದೊರೆಯುತ್ತದೆ.

ಅಶ್ವಿನಿ ಶ್ರೀನಿವಾಸ್
ನಾನು ಅಂತಿಮ ವರ್ಷದಲ್ಲಿ ಬಿ.ಎಸ್ಸಿ. (ಇ.ಎಂ.ಸಿಎಸ್.) ಓದುತ್ತಿದ್ದೇನೆ. ಮುಂದೆ ಪವರ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂ.ಎಸ್ಸಿ. ಮಾಡಬೇಕೆಂಬ ಆಸೆ ಇದೆ. ಇದುವರೆಗೆ ಎಲೆಕ್ಟ್ರಾನಿಕ್ಸ್ ನಲ್ಲಿ ಶೇ 85ರಷ್ಟು ಅಂಕ ತೆಗೆದಿದ್ದೇನೆ. ಆದ್ದರಿಂದ ಸೂಕ್ತ ಸಲಹೆ ನೀಡಿ ಕಾಲೇಜುಗಳ ಕುರಿತು ಮಾಹಿತಿ ಒದಗಿಸಿಕೊಡಿ.

–ಪವರ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಅತೀವ ಆಸಕ್ತಿ ಇರುವ ನೀವು ಎಂ.ಎಸ್ಸಿ. ಪದವಿಯನ್ನು ಪಡೆಯಲು ಸೂಕ್ತವಾದ ಸಲಹೆ ಮತ್ತು ಸೂಚನೆಗಳನ್ನು ನಿಮ್ಮ ಕಾಲೇಜಿನ ಅಧ್ಯಾಪಕರಿಂದ ಪಡೆದುಕೊಳ್ಳಬಹುದು. ಅವರಿಂದಲೇ ಸೂಕ್ತ ಕಾಲೇಜುಗಳ ಪರಿಚಯವೂ ಆಗುತ್ತದೆ.

ಶ್ರೀರಕ್ಷಾ ಜೆ.ವಿ.
ಆಯುರ್ವೇದಕ್ಕಿರುವ ಬೇಡಿಕೆ ಮತ್ತು ಭವಿಷ್ಯದ ಕುರಿತು ತಿಳಿಸಿಕೊಡಿ.

–ಪರ್ಯಾಯ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಹೋಮಿಯೊಪಥಿ ಇತ್ಯಾದಿ ಔಷಧಿ ಪದ್ಧತಿಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ಈ ವೈದ್ಯಕೀಯ ಪದ್ಧತಿಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಗಳಿಸಿದ ಅಭ್ಯರ್ಥಿಗಳಿಗೆ ಬಹಳಷ್ಟು ಬೇಡಿಕೆ ಇದೆ. ಆದ್ದರಿಂದ  ಈ ವೈದ್ಯಕೀಯ ಪದವಿಯನ್ನು ಪಡೆಯುವುದು ಭವಿಷ್ಯದ ದೃಷ್ಟಿಯಿಂದ ಉಚಿತ.

ಕುಮರೇಶ್ವರ್, ಬೆಳಗಾವಿ
ನಾನು ವಿಜ್ಞಾನ ವಿಭಾಗದಲ್ಲಿ ಪಿ.ಯು. ಮುಗಿಸಿ ಈಗ ಡಿಪ್ಲೊಮಾಗೆ ಸೇರಿದ್ದೇನೆ. ನನಗೆ ಡಿಗ್ರಿ ಮಾಡಬೇಕೆಂಬ ಹಂಬಲವೂ ಇದೆ. ನಾನು ಈಗ ದೂರಶಿಕ್ಷಣ ಮಾಧ್ಯಮದಲ್ಲಿ ಪದವಿಗೆ ಸೇರಬಹುದೇ? ಡಿಪ್ಲೊಮಾ ಜೊತೆಯಲ್ಲೇ ಇದನ್ನೂ ಮಾಡಬಹುದೇ?

– ಸದ್ಯಕ್ಕೆ ಡಿಪ್ಲೊಮಾ ಕೋರ್ಸನ್ನು ಉತ್ತಮ ದರ್ಜೆರ್ಯಲ್ಲಿ ಪಡೆಯುವ ಕಡೆಗೆ ಆದ್ಯತೆ ಇರಲಿ. ನಂತರ ಬಿ.ಇ. ಪದವಿಯ ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆದು ಅಭ್ಯಾಸ ಮಾಡಿ ಪದವಿ ಗಳಿಸಬಹುದು. ಇದರ ಹೊರತಾಗಿ ಎರಡೆರಡು ತಾಂತ್ರಿಕ ಕೋರ್ಸ್‌ಗಳನ್ನು ಒಮ್ಮೆಗೇ ಮಾಡುವುದು ಉಚಿತವಲ್ಲ. ಇದರಿಂದ ಉತ್ತಮ ದರ್ಜೆರ್ಯಲ್ಲಿ ನೀವು ಎರಡು ಪದವಿಗಳನ್ನು ಒಟ್ಟಿಗೇ ಗಳಿಸುವುದು ಸಾಧ್ಯವಾಗದೇ ಹೋಗಬಹುದು.

ಕೇಶವ, ಮಂಗಳೂರು
ಮೂಲ ವಿಜ್ಞಾನವನ್ನು ಓದಬೇಕೆಂಬ ಹಂಬಲದಿಂದ ಎಂ.ಎಸ್ಸಿ. ಅಪ್ಲೈಡ್ ಜುವಾಲಜಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿ ಈಗ ಮೆಡಿಸಿನ್ ರಿಸರ್ಚ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದೇನೆ. ಅಲ್ಲೇ ಉದ್ಯೋಗವೂ ಲಭಿಸುವ ಸಾಧ್ಯತೆ ಇದೆ. ಮೆಡಿಸಿನ್ ರಿಸರ್ಚ್‌ನಲ್ಲಿ ಸಹಾಯಕ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿದರೆ ಭವಿಷ್ಯ ಉತ್ತಮವಾಗಿರಬಹುದೇ? ರಿಸರ್ಚ್‌ಗೆ ಬದಲಾಗಿ ಮೆಡಿಸಿನ್ ಪ್ರೊಡಕ್ಷನ್ ಒಳ್ಳೆಯದೇ? ನಾನು ದೂರಶಿಕ್ಷಣದ ಮೂಲಕ ಎಂ.ಫಾರ್ಮ ಮಾಡಲು ಸಾಧ್ಯವಿದೆಯೇ? ಈಗಿರುವ ಹಾಗೆ ಮುಂದುವರಿದಲ್ಲಿ ಪೂರಕವಾಗಿ ಏನನ್ನು  ಓದಬಹುದು?

–ಆರೋಗ್ಯ ಮಾನವನ ಒಂದು ಮೂಲಭೂತ ಅವಶ್ಯಕತೆ. ಆದ್ದರಿಂದ ಹೊಸ ಔಷಧಿಗಳ ಆವಿಷ್ಕಾರ ಮತ್ತು ಅವುಗಳ ಉತ್ಪಾದನೆ ಒಂದು ಪ್ರಮುಖ ಕ್ಷೇತ್ರವಾಗಿರುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಔಷಧಿಗಳ ಸಂಶೋಧನೆಯ ಸಹಾಯಕ ವಿಜ್ಞಾನಿಯಾಗಿ ಅಥವಾ ಯಾವುದಾದರೂ ಔಷಧಿ ತಯಾರಿಕಾ ಸಂಸ್ಥೆಯಲ್ಲಿ ನೀವು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ದೂರಶಿಕ್ಷಣದ ಮೂಲಕ ಎಂ.ಫಾರ್ಮ ಮಾಡಲು ಸಾಧ್ಯವಿದೆ. ಇದಕ್ಕಾಗಿ ನೀವು ಯಾವುದಾದರೂ ಮುಕ್ತ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೇಮಾವತಿ ಎಂ.
ನಾನು ಬಯೊಟೆಕ್ನಾಲಜಿಯಲ್ಲಿ ಬಿ.ಇ. ಮುಗಿಸಿದ್ದೇನೆ. ನನಗೆ ಎಂ.ಟೆಕ್.ಗಿಂತಲೂ ಎಂ.ಎಸ್ಸಿ. ರಸಾಯನಶಾಸ್ತ್ರದಲ್ಲಿ ತುಂಬಾ ಆಸಕ್ತಿ ಇದೆ. ಬಿ.ಇ. ಬಯೊಟೆಕ್ನಾಲಜಿ ಬೋಧಿಸುವ ಕಾಲೇಜುಗಳು ಕಡಿಮೆ ಇರುವುದರಿಂದ ಉದ್ಯೋಗಾವಕಾಶಗಳು ಕಡಿಮೆ ಇರುತ್ತವೆ. ಆದ್ದರಿಂದ ನಾನು ಪದವಿ ಕಾಲೇಜುಗಳಿಗೆ ಉಪನ್ಯಾಸಕಿಯಾಗಿ ಹೋಗಬಹುದೇ? ಯಾವುದೇ ವಿಚಾರದಲ್ಲಿ ಎಂ.ಎಸ್ಸಿ. ಮಾಡಬಹುದೇ? ಎಂ.ಎಸ್ಸಿ. ನಂತರ ಎನ್.ಇ.ಟಿ. ಪರೀಕ್ಷೆಗೆ ಅರ್ಹಳಾಗುತ್ತೇನೆಯೇ?

–ಬಯೊಟೆಕ್ನಾಲಜಿಯಲ್ಲಿ ತಾಂತ್ರಿಕ ಪದವಿ ಗಳಿಸಿರುವ ನೀವು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅರ್ಹತೆ ಇರುವುದಿಲ್ಲ. ಆದ್ದರಿಂದ ಉಪನ್ಯಾಸಕಿಯಾಗಿ ಕೆಲಸ ಮಾಡುವ ಇಚ್ಛೆ ಇದ್ದರೆ ಬಯೊಟೆಕ್ನಾಲಜಿಯಲ್ಲಿ ಎಂ.ಟೆಕ್. ಪದವಿ ಗಳಿಸಿ ಉದ್ಯೋಗಕ್ಕೆ ಸೇರಬಹುದು.

ಪ್ರಸಾದ್ ಸಿ.
ಬಿ.ಎಸ್ಸಿ. (ಪಿ.ಸಿ.ಎಂ.) ಮುಗಿದ ಮೇಲೆ ಬಿ.ಇ. ಮಾಡಬಹುದೇ? ಇದರಿಂದ ಪ್ರಯೋಜನವಿದೆಯೇ?

–ಬಿ.ಎಸ್ಸಿ. ಪದವಿಯ ನಂತರ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಬಿ.ಇ. ಪದವಿಯ ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯುವ ಅವಕಾಶ ಇದೆ. ಈ ಪ್ರವೇಶಕ್ಕೆ ನೀವು ಬಿ.ಎಸ್ಸಿ. ಪದವಿಯಲ್ಲಿ ಪಿ.ಸಿ.ಎಂ. ವಿಷಯಗಳಲ್ಲಿ ಗಳಿಸಿದ ಅಂಕಗಳ ಜೊತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಆಧಾರವಾಗಿರುತ್ತವೆ. ಹೆಚ್ಚಿನ ವಿವರಗಳನ್ನು ಈ ಪ್ರಾಧಿಕಾರದ ಅಂತರ್ಜಾಲದಲ್ಲಿ ಪಡೆಯಬಹುದು.

ಮೌನೇಶ್ ಕುರಳಿ
ನಾನು ಹೆಲ್ತ್ ಇನ್ಸ್‌ಪೆಕ್ಟರ್ ಡಿಪ್ಲೊಮಾ ಮುಗಿಸಿದ್ದೇನೆ. ನನಗೆ ಫುಡ್ ಇನ್ಸ್‌ಪೆಕ್ಟರ್‌ ಆಗಬೇಕೆಂಬ ಹಂಬಲ ಇದೆ. ದಯಮಾಡಿ ಇದಕ್ಕೆ ಪೂರಕ ಕೋರ್ಸ್‌ಗಳು ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಒದಗಿಸಿಕೊಡಿ.

– ಹೆಲ್ತ್ ಇನ್ಸ್‌ಪೆಕ್ಟರ್‌ ಡಿಪ್ಲೊಮಾ ನಂತರ, ಫುಡ್ ಇನ್ಸ್‌ಪೆಕ್ಟರ್‌ ಆಗಲು ಬೇಕಾಗುವ ಪೂರಕ ಕೋರ್ಸ್‌ಗಳ ಮಾಹಿತಿಯನ್ನು ಕೃಷಿ ವಿಜ್ಞಾನ ಕಾಲೇಜಿನ ಅಧ್ಯಾಪಕರು ಅಥವಾ ಈ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ  ಪಡೆಯಬಹುದು.  www.uasbangalore.edu.in

......

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ. ರಸ್ತೆ, ಬೆಂಗಳೂರು 560 001
ಇ-ಮೇಲ್- shikshana@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT