ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೆಯುತ್ತಾ ಬೆಳೆಯಿರಿ

Last Updated 26 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಹಾಡುತ್ತಾ ಹಾಡುತ್ತಾ ರಾಗ ಎನ್ನುವ ಹಾಗೆ, ಬರೆಯುತ್ತಾ ಬರೆಯುತ್ತಾ ಬರವಣಿಗೆ ಕಲೆ ವೃದ್ಧಿಸುತ್ತದೆ. ದಿನಬೆಳಗಾದರೆ ದಿನಪತ್ರಿಕೆ, ವಾರಪತ್ರಿಕೆ, ಪುಸ್ತಕಗಳನ್ನು ಓದುತ್ತೇವೆ. ಅದರಲ್ಲಿ ಕೆಲವು ಲೇಖನಗಳು ಮರೆಯಲಾಗದೇ ಮನಸ್ಸಿನಾಳದಲ್ಲೇ ಉಳಿದು ಬಿಡುತ್ತವೆ.

ಹಾಗಾದರೆ ಇಂಥ ಲೇಖನಗಳನ್ನು ಬರೆಯುವುದು ಹೇಗೆ? ಪ್ರಯತ್ನಪಟ್ಟರೆ ಇದೇನು ಅಸಾಧ್ಯದ ಮಾತಲ್ಲ ಬಿಡಿ. ಭಾಷೆಯ ಮೇಲೆ ಹಿಡಿತ, ಸೃಜನಶೀಲತೆ ಇದ್ದರೆ ಸಾಕು.  ಉನ್ನತ ಶಿಕ್ಷಣವಿಲ್ಲದ್ದರೂ ಸಹ ಒಳ್ಳೆಯ ಲೇಖನಗಳನ್ನು ಬರೆಯಬಹುದು.

ಬರವಣಿಗೆ ಎಂಬುದು ಕಾಲ್ಪನಿಕವಾಗಿ ಹಾಗೂ ಸೃಜನಾತ್ಮಕವಾಗಿ ಬರೆಯುವ ಕಲೆ. ಆದ್ದರಿಂದ ವಿಷಯ ಯಾವುದೇ ಇರಲಿ, ಅಂದರೆ ರಾಜಕೀಯ, ಮಾಹಿತಿ, ತಂತ್ರಜ್ಞಾನ ಇತ್ಯಾದಿ ಬಗ್ಗೆ ಸರಿಯಾಗಿ ತಿಳಿದುಕೊಂಡು, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುವ ಕೌಶಲ್ಯವನ್ನು ಬರಹಗಾರ ಬೆಳೆಸಿಕೊಳ್ಳಬೇಕು.

ಕಾಲ್ಪನಿಕ ವಿಚಾರಗಳನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದೀರಿ ಎಂಬುದು ಗಮನದಲ್ಲಿ ಇರಲಿ. ಸೃಜನಶೀಲ ಅಥವಾ ಸೃಜನೇತರ ಬರಹಗಳಿಗೆ ಅಧ್ಯಯನ ಅತ್ಯಗತ್ಯ. ಉತ್ತಮ ಕೃತಿಗಳ ಓದು ಇಲ್ಲದೆ ಉತ್ತಮ ಬರಹ ಸೃಷ್ಟಿ ಕಷ್ಟ.

ವೈವಿಧ್ಯಮಯ ವಿಚಾರಗಳನ್ನು ಆರಿಸಿಕೊಂಡು ಬರೆಯುವ ಮುನ್ನ ಏನೇನು ಇರಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ನೀವು ಬರೆಯುವ ಲೇಖನ ಲವಲವಿಕೆಯಿಂದ ಕೂಡಿರಲಿ; ಅದರಲ್ಲೊಂದು ಹೊಸತನ ಇರಲಿ.
 
ಓದುಗರಿಗೆ ಅಂಥ ಬರಹ ಇಷ್ಟವಾದೀತು. ಮುಖ್ಯವಾಗಿ ಯಾವುದೇ ವಿಷಯ ಬರೆಯುವಾಗ ಭಾಷೆಯ ಮೇಲೆ ಹಿಡಿತ ಇರಬೇಕು. ಹೊಸತನ ಅರಿಯುವ ಪ್ರಯತ್ನ, ಕಲ್ಪನೆಗಳನ್ನು ಸಾಕಾರಗೊಳಿಸುವ ಕಲೆ ನಿಮ್ಮದಾಗಿಸಿಕೊಂಡು, ಓದುಗರ ಮನ ತಲುಪಿ.

ಬರಹಗಾರರಿಗೆ ವಿಷಯ ಬರ ಎಂಬುದೇ ಇಲ್ಲ. ಸೃಜನಶೀಲ ಬರಹವನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುತ್ತದೆ. ಪತ್ರಿಕೆ ಹಾಗೂ ಮ್ಯೋಗಜಿನ್‌ಗಳಲ್ಲಿ ಬೇಡಿಕೆ ಹೆಚ್ಚಿರುತ್ತದೆ. ನೀವು ನಿಮ್ಮ ಒಳ್ಳೆಯ ಲೇಖನಗಳ ಮೂಲಕ ಓದುಗರನ್ನು ಆಕರ್ಷಿಸಬಹುದು.

ಕೌಶಲ ಬೆಳೆಸಿಕೊಂಡರೆ ಕಥೆ, ಕಾದಂಬರಿ, ಕವನ, ನಾಟಕಗಳನ್ನು ಬರೆಯಬಹುದು. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯಬಹುದು. ಟಿವಿ ಹಾಗೂ ಸಿನಿಮಾಗಳಿಗೆ ಚಿತ್ರಕಥೆಗಳನ್ನು ಕೂಡ ಬರೆಯಬಹುದು.
 
ಪ್ರಚಲಿತ ವಿಷಯಗಳನ್ನು ಆಯ್ದು, ವಿಭಿನ್ನ ಶೈಲಿಯಲ್ಲಿ ಓದುಗರ ಮನ ಮುಟ್ಟುವಂತೆ ಬರೆದು ಉತ್ತಮ ಬರಹಗಾರರೆಂದು ಹೆಸರು ಗಳಿಸಬಹುದು. ಅನುಭವ ಹಾಗೂ ಜ್ಞಾನದ ಬಲದಿಂದ ಬರವಣಿಗೆಯಲ್ಲಿ ತೊಡಗಬಹುದು.  ಬರವಣಿಗೆ ಎಂಬುದು ಜ್ಞಾನವನ್ನು ಹಂಚಿಕೊಳ್ಳಲು ಇರುವ ವೇದಿಕೆ. ಓದುವ ಹವ್ಯಾಸ ಆಕರ್ಷಕ ಬರವಣಿಗೆಗೆ ಪೂರಕ.

ಸೃಜನಶೀಲತೆ ಎಂಬುದು ಬರಹಗಾರನ ಅಸ್ತ್ರ. ಅಂಥ ಬರವಣಿಗೆ ರೂಢಿಸಿಕೊಂಡರೆ ಅವು ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತವೆ. ಅವಲೋಕನ, ತಲ್ಲೀನತೆ, ಪರಿಕಲ್ಪನೆ ಮತ್ತು ಭಾಷೆ ಇವೆಲ್ಲವನ್ನೂ ಒಟ್ಟುಗೂಡಿಸಿ ಬರಹಕ್ಕೆ ಇಳಿಸಿದರೆ ಸೃಜನಶೀಲ ಬರಹ ಸಿದ್ಧವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT