ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಕ್ರಿಕೆಟ್‌ಗೆ ಹೊಸ ಭರವಸೆ

Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಕ್ರಿಕೆಟ್‌ ಚಟುವಟಿಕೆ ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆ. ಹುಬ್ಬಳ್ಳಿಯ ಕೆ.ಎಸ್.ಸಿ.ಎ ಮೈದಾನದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು ಅಲ್ಲಿನ ಕ್ರಿಕೆಟ್ ಪ್ರೇಮಿಗಳು ಅಂತ ರರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವ ಕನಸು ಕಾಣುತ್ತಿದ್ದಾರೆ. ಗದಗದಲ್ಲಿ ಮೈದಾನ ನಿರ್ಮಿಸಲು ಕೆ.ಎಸ್‌.ಸಿ.ಎ. ಸಜ್ಜಾಗಿದ್ದು ಗದಗ–ರೋಣ ರಸ್ತೆಯಲ್ಲಿ ಇದಕ್ಕಾಗಿ ಜಾಗ ಗುರುತಿಸಲಾಗಿದೆ. ಬೆಳಗಾವಿಯಲ್ಲಿ ಮಹತ್ವದ ಪಂದ್ಯಕ್ಕಾಗಿ ಕಾಯುತ್ತಿದ್ದ ಕೆ.ಎಸ್‌.ಸಿ.ಎ ಮೈದಾನ ಮೊದಲ ರಣಜಿ ಪಂದ್ಯದ ರೋಮಾಂಚನ ಕಂಡಿದೆ. ಕಳೆದ ವಾರ ಇಲ್ಲಿ ನಡೆದ ಗುಜರಾತ್ ಮತ್ತು ಪಂಜಾಬ್ ನಡುವಿನ ‘ಎ’ ಗುಂಪಿನ ರಣಜಿ ಪಂದ್ಯ ಇಲ್ಲಿನ ಕ್ರಿಕೆಟ್‌ಗೆ ಹೊಸ ತಿರುವು ನೀಡುವ ಭರವಸೆ ಮೂಡಿಸಿದೆ.

ಟೆನಿಸ್ ಬಾಲ್ ಕ್ರಿಕೆಟ್ ವೀಕ್ಷಿಸುವುದಕ್ಕೂ ಮುಗಿಬೀಳುವ ಇಲ್ಲಿನ ಕ್ರಿಕೆಟ್ ಅಭಿಮಾನಿಗಳು ಇಂಥದೇ  ‘ಪ್ರತಿಕ್ರಿಯೆ’ಯನ್ನು ಕಳೆದ ವಾರ ನಡೆದ ರಣಜಿ ಪಂದ್ಯದ ಸಂದರ್ಭದಲ್ಲೂ ವ್ಯಕ್ತಪಡಿಸಿ ದ್ದರು. ಹೊರರಾಜ್ಯದ ತಂಡಗಳ ನಡುವಿನ ಪಂದ್ಯ ಅವರಿಗೆ ‘ಬೋರ್‌’ ಅನಿಸಲಿಲ್ಲ.

ದಶಕಗಳ ನಂಟು
ಬೆಳಗಾವಿಗೂ ಕ್ರಿಕೆಟ್‌ಗೂ ದಶಕಗಳ ನಂಟು. ರಣಜಿ ಪಂದ್ಯ ಇಲ್ಲಿಗೆ ಹೊಸತೇನಲ್ಲ. 60ರ ದಶಕದಲ್ಲಿ ರಾಜಾ ಗುರವ್ ಮಹತ್ವದ ಪಂದ್ಯಗಳನ್ನು ಆಡಲು ಹೊರಟಾಗ ಹೊರ ಜಗತ್ತಿಗೂ ಇಲ್ಲಿನ ಕ್ರಿಕೆಟ್ ಶಕ್ತಿ ಗೊತ್ತಾಯಿತು. ಎಡಗೈ ವೇಗಿಯಾಗಿದ್ದ ಗುರವ್ ವಿವಿಧ ಟೂರ್ನಿಗಳಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದರು. ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸದ ಸಂದರ್ಭದಲ್ಲಿ ಆ ತಂಡದ ವಿರುದ್ಧ ಅಭ್ಯಾಸ ಪಂದ್ಯಗಳನ್ನೂ ಆಡಿದ್ದರು.

ನಂತರ ಇಲ್ಲಿನ ಕ್ರಿಕೆಟಿಗರ ಮೇಲೆ ಸಮೀಪದ ಗೋವಾ ರಾಜ್ಯದ ಕಣ್ಣು ಬಿತ್ತು. ಅಲ್ಲಿನ ರಣಜಿ ತಂಡದಲ್ಲಿ ಬೆಳಗಾವಿಯ ಪ್ರತಿಭೆಗಳು ಬೆಳಗಿದವು. ಸತೀಶ ಶಶಿಕಾಂತ ಶಿಂಧೆ, ಸುಬಾಷ್ ಕಂಗ್ರಾಲ್ಕರ್, ಪ್ರಮೋದ ರೇವಣಕರ್ ಮುಂತಾದವರು ಗೋವಾ ತಂಡದ ಪರ ಆಡಿ ಬೆಳಗಾವಿಗೆ ಹೆಸರು ತಂದಿದ್ದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಸತೀಶ ಕಂಗ್ರಾಲ್ಕರ್ ಗೋವಾ ತಂಡದ ನಾಯಕ ಕೂಡ ಆಗಿದ್ದರು. ಕರ್ನಾಟಕದ ಪರ ಆಡಿ ಬೆಳಗಾವಿಗೆ ಹೆಸರು ತಂದವರಲ್ಲಿ ಪ್ರಮುಖರು ದೀಪಕ್ ಚೌಗುಲೆ. ಬಲಗೈ ಬ್ಯಾಟ್ಸ್‌ಮನ್ ಮತ್ತು ಆಫ್‌ ಬ್ರೇಕ್ ಬೌಲರ್ ಆಗಿದ್ದ ಚೌಗುಲೆ ರಾಜ್ಯದ ಪರ 26 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 19 ವರ್ಷದೊಳಗಿನವರ ಭಾರತ ತಂಡದಲ್ಲೂ ಸ್ಥಾನ ಗಳಿಸಿದ ಅವರು ಕೆ.ಪಿ.ಎಲ್‌ ಮತ್ತು ಐಪಿಎಲ್‌ನಲ್ಲೂ ಆಡಿದ್ದರು.

ಇದೇ ಹಾದಿಯಲ್ಲಿ ಹೆಜ್ಜೆ ಹಾಕಿದ ರೋನಿತ್ ಮೋರೆ ರಾಜ್ಯ ರಣಜಿ ತಂಡದ ವೇಗದ ಬೌಲಿಂಗ್‌ಗೆ ಸಾಣೆ ಹಿಡಿದವರು. ಹಿಮಾಚಲ ಪ್ರದೇಶದ ಪರವಾಗಿಯೂ ರಣಜಿ ಆಡಿರುವ ಅವರು ಐಪಿಎಲ್‌, ಕೆಪಿಎಲ್‌ನಲ್ಲೂ ಮಿಂಚಿದ್ದಾರೆ. ಆಸ್ಟೇಲಿಯಾದ ದೇಶಿ ಕ್ರಿಕೆಟ್‌ನಲ್ಲೂ ಆಡಿದ್ದಾರೆ. ಈಗ ಕೆಪಿಎಲ್‌ನಲ್ಲಿ ಹೆಸರು ಮಾಡಿರುವ, ಈ ಬಾರಿಯ ಟೂರ್ನಿಯಲ್ಲಿ ಬಳ್ಳಾರಿ ಟಸ್ಕರ್ಸ್‌ ಗೆಲುವಿಗೆ ಪ್ರಮುಖ ಕಾರಣರಾದ ರೋಹನ್ ಕದಮ್‌ ಕೂಡ ಬೆಳಗಾವಿ ಪ್ರತಿಭೆ. ಕಿರಿ ಯರ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಸುಜಯ್ ಸಾತೇರಿ, ಅಮೇಯ ಭಾತಖಂಡೆ ಮುಂತಾದವರು ಭರವಸೆಯ ಹಾದಿಯಲ್ಲಿದ್ದಾರೆ.

ಯೂನಿಯನ್ ಜಿಮ್ಖಾನಾದಿಂದ ಕೆ.ಎಸ್‌.ಸಿ.ಎ ವರೆಗೆ 60–70 ದಶಕದಲ್ಲಿ ಬೆಳಗಾವಿಯಲ್ಲಿ ಕ್ರಿಕೆಟ್‌ಗೆ ಚುಕ್ಕಾಣಿ ಹಿಡಿದದ್ದು ಯೂನಿಯನ್‌ ಜಿಮ್ಖಾನಾ ಕ್ಲಬ್‌. 1970ರಲ್ಲಿ ಇಲ್ಲಿ ನಡೆದ ಮೊದಲ ರಣಜಿ ಪಂದ್ಯ ನಡೆದದ್ದು  ಈ ಕ್ಲಬ್‌ನ ಮೈದಾನದಲ್ಲೇ. ಮೈಸೂರು (ಕರ್ನಾಟಕ) ಮತ್ತು ಆಂಧ್ರ ನಡುವೆ ಅಂದು ಪಂದ್ಯ ನಡೆದದ್ದು ಮ್ಯಾಟಿಂಗ್ ಮೇಲೆ. ಮೂರು ದಶಕದ ನಂತರ ಮತ್ತೊಂದು ರಣಜಿ ಪಂದ್ಯದ ಆತಿಥ್ಯ ವಹಿಸುವ ಅವಕಾಶ ಲಭಿಸಿದಾಗ ಕ್ಲಬ್‌ನವರು ಟರ್ಫ್ ಪಿಚ್ ಸಿದ್ಧಪಡಿಸಿದ್ದರು.

ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಈ ಪಂದ್ಯಕ್ಕೂ ಮೊದಲು ಇಲ್ಲಿ ಆರ್‌.ಜಿ.ನಾಡಕರ್ಣಿ ಸ್ಮರಣಾರ್ಥ ಪ್ರದರ್ಶನ ಪಂದ್ಯ, ಕೂಚ್‌ ಬೆಹಾರ್‌ ಹಾಗೂ ವಿಜಯ್‌ ಮರ್ಚಂಟ್ ಟ್ರೋಫಿ ಪಂದ್ಯಗಳೂ ನಡೆದಿದ್ದವು. ರಣಜಿ ಪಂದ್ಯ ಗಳಲ್ಲಿ ಸಯ್ಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ಇ.ಎ.ಎಸ್‌ ಪ್ರಸನ್ನ, ಬಿ.ಎಸ್.ಚಂದ್ರಶೇಖರ್‌, ಜೆ.ಅರುಣ್‌ ಕುಮಾರ್, ದೊಡ್ಡ ಗಣೇಶ ಮತ್ತಿತರರನ್ನು ಹತ್ತಿರದಿಂದ ನೋಡಿದ ಪ್ರೇಕ್ಷಕರು ಪ್ರದರ್ಶನ ಪಂದ್ಯದಲ್ಲಿ  ಭಾರತ ತಂಡದ ಅಂದಿನ ಇತರ ಖ್ಯಾತನಾಮರನ್ನು ನೋಡಿದರು.

ಎರಡು ವರ್ಷಗಳ ಹಿಂದೆ ಕೆ.ಎಸ್.ಸಿ.ಎ ಧಾರವಾಡ ವಲಯ ಬೆಳಗಾವಿಯಲ್ಲಿ ಪ್ರತ್ಯೇಕ ಲೀಗ್ ಪಂದ್ಯಗಳನ್ನು ಆಡಿಸಲು ಮುಂದಾದ ನಂತರ ನಿಪ್ಪಾಣಿಯಂಥ ತಾಲ್ಲೂಕು ಕೇಂದ್ರಗಳಲ್ಲೂ ಕ್ರಿಕೆಟ್ ಚಟುವಟಿಕೆ ಹೆಚ್ಚತೊಡಗಿದೆ.   ಇದೆಲ್ಲದರ ಜೊತೆಗೆ ಮೂರು ವರ್ಷಗಳ ಹಿಂದೆ ಕಣಬರಗಿ ಗುಡ್ಡದ ಬದಿಯಲ್ಲಿ ನಿರ್ಮಾಣಗೊಂಡ ಕೆ.ಎಸ್.ಸಿ.ಎ ಮೈದಾನ ಈಗ ರಣಜಿ ಪಂದ್ಯದ ಮೂಲಕ ಪ್ರಗತಿಯ ಹೊಸ ಶಕೆಗೆ ನಾಂದಿ ಹಾಡಿದೆ.

‘ಮುಂದಿನ ವರ್ಷಗಳಲ್ಲಿ ಇನ್ನಷ್ಟು ಮಹತ್ವದ ಪಂದ್ಯಗಳಿಗೆ ಆತಿಥ್ಯ ವಹಿಸಲು ಬೆಳಗಾವಿಗೆ ಅವಕಾಶ ಸಿಗಲಿದೆ. ಮೈದಾನದ ಅಭಿವೃದ್ಧಿ ಕಾಮಗಾರಿಗಳ ವೇಗ ಈಗ ಹೆಚ್ಚಿದ್ದು ಒಂದೆರಡು ವರ್ಷಗಳಲ್ಲಿ ಯಾವುದೇ ಮಾದರಿಯ ಕ್ರಿಕೆಟ್‌ಗೆ ಮೈದಾನ ಸಜ್ಜುಗೊಳ್ಳಲಿದೆ’ ಎನ್ನುತ್ತಾರೆ ಅವಿನಾಶ ಪೋತದಾರ.          

*
ಸುಂದರ ಮೈದಾನದಲ್ಲಿ ಅತ್ಯುತ್ತಮ, ಸ್ಪರ್ಧಾತ್ಮಕ ವಿಕೆಟ್ ನಿರ್ಮಾಣಗೊಂಡಿದೆ. ಇಲ್ಲಿ ಕೆ.ಎಸ್.ಸಿ.ಎ-ಆರ್.ಸಿ. ಅಕಾಡೆಮಿಯ ಚಟುವಟಿಕೆ ಇನ್ನು ಗರಿಗೆದರಲಿದೆ. ಆ ಮೂಲಕ ಈ ಭಾಗದ ಕ್ರಿಕೆಟ್ ಗೆ ಹೊಸ ಜೀವ ಸಿಗಲಿದೆ.
–ಬಾಬಾ ಭೂಸದ, ಕೆ.ಎಸ್.ಸಿ.ಎ ಧಾರವಾಡ ವಲಯ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT