ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕ್ರಿಕೆಟ್‌ನಲ್ಲಿ ‘ಹಸಿರು’ ಕ್ರಾಂತಿ

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತದ ಕ್ರಿಕೆಟ್‌ನಲ್ಲಿ ಈಗ ‘ಹಸಿರು’ ಕ್ರಾಂತಿ ನಡೆಯುತ್ತಿದೆ. ಇಲ್ಲಿ ನಡೆಯುವ ಟೆಸ್ಟ್ ಸರಣಿಗಳಲ್ಲಿ ಆಡಲು ಬರುವ ವಿದೇಶಿ ತಂಡಗಳು ಸ್ಪಿನ್‌ ಬೌಲಿಂಗ್ ಎದುರಿಸುವ ಭೀತಿಯಲ್ಲಿರುತ್ತವೆ. ಆತಿಥೇಯ ತಂಡವೂ ತನ್ನ ಸ್ಪಿನ್  ಮೋಡಿಗಾರರ ಮೇಲೆಯೇ ಹೆಚ್ಚು ಅವಲಂಬನೆಯಾಗಿರುತ್ತದೆ. ಸ್ಪಿನ್ ಕಲೆ ನಮ್ಮ ದೇಶದ ಪರಂಪರೆ ಮತ್ತು ಶಕ್ತಿ ಎರಡೂ ಹೌದು.

ಅದಕ್ಕೆ ಕಾರಣ ಇಲ್ಲಿಯ ಪಿಚ್‌ಗಳು. ದೇಶದ ಭೇರೆ ಬೇರೆ ಊರುಗಳಲ್ಲಿ ಇರುವ ಪಿಚ್‌ಗಳ ಮಣ್ಣಿನ ಗುಣ ಬೇರೆ.  ಅಲ್ಲದೇ ಹವಾಗುಣವೂ ಪರಿಣಾಮ ಬೀರುತ್ತದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಭೌಗೋಳಿಕ ವಾತಾವರಣ ಇದೆ. ಆದರೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ಗಳಲ್ಲಿ   ವಾತಾವರಣ ಬೇರೆ. ಆದ್ದರಿಂದ ಅಲ್ಲಿ ವೈವಿಧ್ಯಮಯವಾದ ಪಿಚ್‌ಗಳನ್ನು ನಿರೀಕ್ಷಿಸುವಂತಿಲ್ಲ. ಅಲ್ಲಿರುವ ಹಸಿರು ಮೇಲ್ಮೈನ ಗಟ್ಟಿ ಪಿಚ್‌ಗಳಲ್ಲಿ ವೇಗಿಗಳು ವಿಜೃಂಭಣೆ ನಡೆಯುತ್ತಿದೆ.

ಆದರೆ ಮಹತ್ವಾಕಾಂಕ್ಷಿ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ರವಿಶಾಸ್ತ್ರಿ ಅವರ ಬಳಗವು ಈ ಬಾರಿ ಹೊಸ ಇತಿಹಾಸ ಬರೆದಿದೆ.  ಈಗ ನಡೆಯುತ್ತಿರುವ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಹಸಿರು ಪಿಚ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೋಲ್ಕತ್ತ ಮತ್ತು ನಾಗಪುರ ಟೆಸ್ಟ್‌ಗಳಲ್ಲಿ ಇದರ ಪರಿಣಾಮ ನೋಡಿದ್ದೇವೆ. ಆದರೆ ಇದರ ಹಿಂದೆ ಅವರ ದೂರಾಲೋಚನೆ ಇದೆ.

ಮುಂದಿನ ತಿಂಗಳ ಕೊನೆಯ ವಾರದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತವು ತೆರಳಲಿದೆ. ಫೆಬ್ರುವರಿ 24ರವರೆಗೆ ನಡೆಯುವ ಸರಣಿಯಲ್ಲಿ ಮೂರು ಟೆಸ್ಟ್, ಆರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ. ಅಲ್ಲಿಯ ಬೌನ್ಸಿ ಪಿಚ್‌ಗಳಲ್ಲಿ ಆಡಲು ಇಲ್ಲಿಂದಲೇ ಸಿದ್ಧವಾಗಿ ಹೋಗುವ ಅನಿವಾರ್ಯತೆ ತಂಡಕ್ಕೆ ಇದೆ.

ಸದ್ಯ ತಂಡದಲ್ಲಿ ಉತ್ತಮ ವೇಗದ ಬೌಲರ್‌ಗಳು ಇದ್ದಾರೆ. ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ಫಾರ್ಮ್‌ನಲ್ಲಿದ್ದಾರೆ. ಅವರು ತಮ್ಮ ಪ್ರತಿಭೆಯನ್ನು ದಕ್ಷಿಣ ಆಫ್ರಿಕಾ ನಾಡಿನಲ್ಲಿಯೂ ಸಾಬೀತುಪಡಿಸಿದರೆ ಭಾರತದ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭವಾಗುವುದು ಖಚಿತ.

ಕರ್ಸನ್ ಗಾವ್ರಿ, ಕಪಿಲ್ ದೇವ್, ರೋಜರ್ ಬಿನ್ನಿ, ಜಾವಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಇರ್ಫಾನ್ ಪಠಾಣ್ ಅವರು ಭಾರತದ ವೇಗದ ಬೌಲಿಂಗ್‌ಗೆ ವಿಶಿಷ್ಟ ಕಾಣಿಕೆ ನೀಡಿದ್ದಾರೆ. ಇದೀಗ ಯುವಪೀಳಿಗೆಯ ಸರದಿ ಇದೆ.‌

**

ವಿಶ್ರಾಂತಿ ಕೊರತೆ; ವೇಳಾಪಟ್ಟಿಯ ಕಿರಿಕಿರಿ

‘ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲು ಸಾಕಷ್ಟು ಸಿದ್ಧತೆಯ ಅವಶ್ಯಕತೆ ಇತ್ತು. ಆದರೆ ಎಡೆಬಿಡದ ವೇಳಾಪಟ್ಟಿಯಿಂದಾಗಿ ಸಿದ್ಧತೆಗೆ ಅತ್ಯಂತ ಕನಿಷ್ಠ ಕಾಲಾವಕಾಶ ಸಿಗುತ್ತಿದೆ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಮೇಲೆ ಹರಿಹಾಯ್ದಿದ್ದಾರೆ.

ಅಲ್ಲದೆ ಅವರು ವಿಶ್ರಾಂತಿಯ ಕೊರತೆಯನ್ನೂ ಎದುರಿಸುತ್ತಿದ್ದಾರೆ. ಹೋದ  ಮಾರ್ಚ್‌ನಿಂದ ಇಲ್ಲಿಯವರೆಗೆ ಟೆಸ್ಸ್‌, ಏಕದಿನ, ಐಪಿಎಲ್, ಟ್ವೆಂಟಿ–20 ಟೂರ್ನಿಗಳಲ್ಲಿ ವಿರಾಟ್ ಸತತವಾಗಿ ಆಡಿದ್ದಾರೆ. ಆದರೆ ಮಧ್ಯದಲ್ಲಿ ಯಾವ ಪಂದ್ಯದಿಂದಲೂ ವಿಶ್ರಾಂತಿ ಪಡೆದಿಲ್ಲ. ಜನಪ್ರಿಯತೆಯ ಉತ್ತುಂಗದಲ್ಲಿರುವ ಅವರು ಈಗ ಹಲವಾರು ಜಾಹೀರಾತು ಚಿತ್ರಿಕರಣದಲ್ಲಿಯೂ ಬಿಸಿಯಾಗಿರುವುದರಿಂದ ವಿಶ್ರಾಂತಿ ಎನ್ನುವುದು ಮರಿಚಿಕೆಯಾಗಿದೆ.

ಅವರ ಈ ಅಸಮಾಧಾನವನ್ನು ಎರಡು ಬಗೆಯಲ್ಲಿ ವಿಶ್ಲೇಷಿಸಬಹುದು. ಒಂದು ವೃತ್ತಿಪರವಾಗಿರುವ ಇಂದಿನ ಕ್ರಿಕೆಟ್‌ನಲ್ಲಿ ಎಡೆಬಿಡದ ವೇಳಾಪಟ್ಟಿ, ಸಾಲು ಸಾಲು ಸರಣಿಗಳು, ಲೀಗ್ ಟೂರ್ನಿಗಳಲ್ಲಿ ಆಡಲು ಅತ್ಯಂತ ಉನ್ನತ ಮಟ್ಟದ ಫಿಟ್‌ನೆಸ್‌ ಅವಶ್ಯಕತೆ ಇದೆ. ಅದಕ್ಕಾಗಿ ಬಿಸಿಸಿಐ ಎಲ್ಲ ಸೌಲಭ್ಯಗಳನ್ನೂ ಅಂತರರಾಷ್ಟ್ರೀಯ ಕ್ರಿಕೆಟಿಗರಿಗೆ ಒದಗಿಸುತ್ತಿದೆ. ತಂಡದಲ್ಲಿ ಇವತ್ತು  ನೆರವು ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿ  ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ. ತಂಡವು ಗೆಲ್ಲುತ್ತಿರುವಷ್ಟು ದಿನ ಜನಪ್ರಿಯತೆಯು ಮುಗಿಲಿನಲ್ಲಿರುತ್ತದೆ. ಅಲ್ಲಿಯವರೆಗೂ ಬಿಸಿಸಿಐ ಶ್ರೀಮಂತವಾಗಿರುತ್ತದೆ.

ಆದಕ್ಕಾಗಿ ಹೊಸ ದಾಖಲೆಗಳನ್ನು ರಚಿಸುವ ಅವಶ್ಯಕತೆಯೂ ಇದೆ. ವಿದೇಶಿ ನೆಲದಲ್ಲಿ ನಮ್ಮ ತಂಡವು ಇದುವರೆಗೆ ದೊಡ್ಡ ಯಶಸ್ಸು ಪಡೆದಿಲ್ಲ. ಈ ಬಾರಿ ಸರಣಿ ಗೆಲುವಿನ ಸಾಧನೆಯನ್ನು ವಿರಾಟ್ ಬಳಗವು ಮಾಡಿಬಿಟ್ಟರೆ ಅದೊಂದು ಮಹತ್ವದ ಮೈಲಿಗಲ್ಲಾಗುವುದು ಖಚಿತ. ಒಂದೊಮ್ಮೆ ಗೆಲುವು ಸಾಧ್ಯವಾಗದಿದ್ದರೆ, ವಿರಾಟ್ ಹೇಳಿರುವ ‘ಸಿದ್ಧತೆಯ ಕೊರತೆ’ಯ ಮಾತುಗಳು ನೆನಪಾಗುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT