ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಬಿರ ಹಗುರ...

Last Updated 31 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ರಜೆ ಬಂತೆಂದರೆ ಮಕ್ಕಳು ಅಜ್ಜಿ ಮನೆಗೋ ಅಥವಾ ಪರ ಊರಿನ ಸಂಬಂಧಿಗಳ ಮನೆಗೋ ಹೋಗಿ ಆಟವಾಡುತ್ತಾ ಕಾಲ ಕಳೆಯುವ ಸಂಭ್ರಮ ಈಗ ಉಳಿದಿಲ್ಲ. ರಜೆ ಎಂದರೆ ಲಗೋರಿ, ಕುಂಟೇಬಿಲ್ಲೆ, ಚೌಕಾಬಾರ... ಹೀಗೆ ಬೇರೆ ಬೇರೆ ಆಟವಾಡುವ ದಿನಗಳು ಸಹ ಈಗಿಲ್ಲ.

ಮಗು ರಜೆಯನ್ನು ಬೇಕಾಬಿಟ್ಟಿಯಾಗಿ ಕಳೆಯಬಾರದು, ಶಿಸ್ತಿನ ಪಠ್ಯೇತರ ಚಟುವಟಿಕೆಗಳ ಮೂಲಕ ರಜೆಯಲ್ಲೂ ಕಲಿಕೆ ಮುಂದುವರಿಸುವಂತೆ ಆಗಬೇಕು ಎಂಬ ಮನೋಭಾವ ಪಾಲಕರಲ್ಲಿ ವ್ಯಾಪಕವಾಗಿ ಇದೆ. ಬೇಸಿಗೆ ಶಿಬಿರಗಳು, ಮಕ್ಕಳಿಗೆ ಆಟದ ಕಲಿಕೆಯ ಮೂಲಕ ಬದುಕಿನ ಪಾಠ ಕಲಿಸುವಲ್ಲಿ ಬಹುತೇಕ ಯಶಸ್ವಿಯಾಗುತ್ತಿವೆ.

ಪ್ರಾರಂಭದಲ್ಲಿ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಬೇಸಿಗೆ ಶಿಬಿರಗಳು ಈಗ ಸಣ್ಣಪುಟ್ಟ ಪೇಟೆಗಳಲ್ಲೂ ನಡೆಯುತ್ತಿವೆ. ಯೋಗ, ಧ್ಯಾನ, ಕ್ರೀಡೆ, ನೃತ್ಯ, ಚಿತ್ರಕಲೆ, ಕ್ರೀಡೆ, ರಂಗಭೂಮಿ, ಹಾಡುಗಾರಿಕೆ, ಹಾಡುಗಳ ರಚನೆ, ಕುಶಲ ಕಲೆ, ಭಾಷಣ ಕಲೆ, ಹೀಗೆ ತರಬೇತಿಯ ಜೊತೆಗೆ ನಾಯಕತ್ವ ಸಂಘಟನೆ, ಮನೋವಿಕಾಸ, ವ್ಯಕ್ತಿತ್ವ ವಿಕಸನ, ಪರಿಸರ ಪರಿಚಯ, ಅದರೊಂದಿಗಿನ ಬದುಕು ಹೀಗೆ ವಿವಿಧ ಕೋನಗಳಲ್ಲಿ ಮಕ್ಕಳ ಚಲನಶೀಲತೆಯನ್ನು ತಿದ್ದಿ ತೀಡುವ ಕೆಲಸ ನಡೆಯುತ್ತದೆ.

ಶಿಬಿರಗಳಿಗೆ ಮಕ್ಕಳನ್ನು ಕಳುಹಿಸುವ ಮುಂಚೆ ಪಾಲಕರು ತಮ್ಮ ಜವಾಬ್ದಾರಿ ಅರಿತುಕೊಳ್ಳುವುದು ಅವಶ್ಯಕ. ತಮ್ಮ ಮಕ್ಕಳಲ್ಲಿ ಆಸಕ್ತಿದಾಯಕ ವಿಚಾರಗಳು ಯಾವುವು ಎಂಬುದನ್ನು ಮುಂಚಿತವಾಗಿಯೇ ಗ್ರಹಿಸಿ ಆ ವಿಷಯದ ಪರಿಣತಿಗಾಗಿ ಶಿಬಿರಕ್ಕೆ ಕಳುಹಿಸಿದರೆ ಒಳ್ಳೆಯದು. ಅಕ್ಕಪಕ್ಕದವರ, ಸ್ನೇಹಿತರ ಮಕ್ಕಳು ಶಿಬಿರಕ್ಕೆ ಸೇರಿದರೆಂದು ತಮ್ಮ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಆ ಶಿಬಿರಗಳಿಗೇ ಕಳುಹಿಸುವುದು ಸರಿಯಲ್ಲ.

ಶಿಬಿರಗಳಲ್ಲಿ ಚಟುವಟಿಕೆಗಳು ಸಹಜವಾಗಿರಬೇಕು. ಅಲ್ಲೂ ಶಾಲೆಗಳಂತೆ `ಹೋಂವರ್ಕ್' ನೀಡಿದರೆ ರಜೆ ಬದಲು ಸಜೆಯಾದೀತು. ಟಿ.ವಿ ಮುಂದೆ ಕುಳಿತು ಕಾಲಹರಣ ಮಾಡುವುದಕ್ಕಿಂತ ಉತ್ತಮವಾದ ಶಿಬಿರಗಳಲ್ಲಿ ಭಾಗವಹಿಸಬಹುದು. ಕಳೆದ ವರ್ಷ ಜೋಗ ಜಲಪಾತದ ಸಮೀಪ ಶರಾವತಿ ಹಿನ್ನೀರಿನ ಜಾಗದಲ್ಲಿ 30 ಮಕ್ಕಳ ತಂಡವೊಂದರ `ಬೇಸಿಗೆ ಶಿಬಿರ' ಇತ್ತು. 

ಕಾಡಿನಲ್ಲಿ ಚಾರಣ ಮಾಡುತ್ತಾ ಮಕ್ಕಳಿಗೆ ಪರಿಸರದ ಪರಿಚಯ, ಪಕ್ಷಿ, ಪ್ರಾಣಿಗಳ ಪರಿಚಯ, ಅವುಗಳ ಧ್ವನಿ ಗುರುತಿಸುವ, ಅವುಗಳ ಜೀವನ ವಿಧಾನ ತಿಳಿದುಕೊಳ್ಳುವ ಯತ್ನ ನಡೆಯಿತು. ಮಕ್ಕಳಿಗೂ ಖುಷಿ ಪಾಲಕರಿಗೂ ಸಮಾಧಾನ. ಹಾಗೆಯೇ ಶಿಬಿರಗಳಲ್ಲಿ ಯೋಗ ಕಲಿತು ಮುಂದುವರಿಸಿದರೆ ಆರೋಗ್ಯದಾಯಕ.

ರಂಗಭೂಮಿ ಶಿಬಿರಗಳಲ್ಲಿ ನಾಟಕ ಅಭ್ಯಾಸ ಮಾಡಿಸಿ ಅವರಿಂದಲೇ ಶಿಬಿರದ ಕೊನೆಯ ದಿನ ನಾಟಕ ಪ್ರದರ್ಶನ ಮಾಡಿಸಲಾಗುತ್ತದೆ. ಪಾಲಕರಿಗೆ ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ನೋಡುವ ಅವಕಾಶ, ಮಕ್ಕಳ ಆಸಕ್ತಿ ಗರಿಗೆದರಲೂ ಸುವರ್ಣಾವಕಾಶ ಆಗುತ್ತದೆ. ಶಾಸ್ತ್ರೀಯ ಹಾಡುಗಾರಿಕೆ, ಭಾವಗೀತೆ, ಜನಪದ ಗೀತೆ, ಸುಗ್ಗಿ ಪದ, ಪಕ್ಕವಾದ್ಯಗಳ ತರಬೇತಿ ಶಿಬಿರಗಳು ನಡೆಯುತ್ತವೆ. ಯಕ್ಷಗಾನ ಪದ್ಯಗಳ, ಮೃದಂಗ, ಚಂಡೆ ವಾದನ, ತರಬೇತಿಯೂ ಇರುತ್ತದೆ. ಆದರೆ, ಕೆಲವು ಕ್ಷೇತ್ರಗಳ ತರಬೇತಿ ಅಲ್ಪಾವಧಿಯಲ್ಲಿ ಪರಿಣಾಮಕಾರಿ ಆಗುವುದು ಕಷ್ಟ. ಆದರೆ ಅವು ಮಕ್ಕಳ ಆಸಕ್ತಿ ಕೆರಳಿಸಲು ಮಾತ್ರ ಯಶಸ್ವಿಯಾಗಬಹುದು.

ಕ್ರೀಡೆಗಳಲ್ಲಿ ಮರಕೋತಿ, ಚಿನ್ನಿದಾಂಡು, ಗೋಲಿ, ಲಗೋರಿ ಮರೆತುಹೋಗಿದೆ. ಅಥ್ಲೆಟಿಕ್ಸ್, ಈಜು, ಚೆಸ್, ವಾಲಿಬಾಲ್, ಹಾಕಿ, ಕಬಡ್ಡಿ ಆಡಲು ಮಕ್ಕಳು ಇಚ್ಛಿಸುತ್ತಿಲ್ಲ. ವಿಶ್ವ ಕಪ್ ಗೆದ್ದ ನಂತರವಂತೂ ಮೂಲೆ ಮೂಲೆಗಳಲ್ಲಿ ಕ್ರಿಕೆಟ್ ಶುರುವಾಗಿದೆ. ದುಬಾರಿ ಪ್ರವೇಶ ಶುಲ್ಕದೊಂದಿಗೆ ಶಿಬಿರಗಳೂ ಪ್ರಾರಂಭವಾಗಿವೆ.  ಎಲ್ಲ ಶಿಬಿರಗಳೂ ಪ್ರಯೋಜನಕಾರಿ ಎನ್ನಲಾಗದು. 

ಕೆಲವು ಕಡೆ ಸಾಕಷ್ಟು ಪ್ರಚಾರದ ಅಬ್ಬರದೊಂದಿಗೆ ಶಿಬಿರಗಳು ಪ್ರಾರಂಭವಾಗುತ್ತವೆ. ಇದನ್ನು ಒಂದು `ವ್ಯಾಪಾರ'ವನ್ನಾಗಿ ಆಯೋಜಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಕೆಲವು ವಿಷಯಗಳಾದರೆ ಸರಿ, ಹತ್ತೆಂಟು ವಿಷಯಗಳನ್ನು ಒಮ್ಮೆಲೇ ಕಲಿಸಲು ಪ್ರಯತ್ನಿಸಿದಾಗ ಅದನ್ನು ಗ್ರಹಿಸಿಕೊಳ್ಳಲಾಗದೇ ಶಿಬಿರಗಳು ಮಕ್ಕಳಲ್ಲಿ ಕೀಳರಿಮೆ ಹುಟ್ಟುಹಾಕುವ ಸಾಧ್ಯತೆಯೂ ಇಲ್ಲದಿಲ್ಲ.
 
ಹೀಗಾಗಿ ಶಿಬಿರಕ್ಕೆ ಸೇರಿಸುವ ಮೊದಲು ಪಾಲಕರು ಮುನ್ನೆಚ್ಚರಿಕೆ ವಹಿಸಿದರೆ ಕ್ಷೇಮ. ಮನೋ ವಿಕಾಸಕ್ಕಾಗಿ, ಕುತೂಹಲ ಉದ್ದೀಪಿಸುವ ಸಲುವಾಗಿ, ಕ್ರಿಯಾಶೀಲತೆಗೆ ಚಾಲನೆ ನೀಡುವ ಕಾರಣದಿಂದ ಬೇಸಿಗೆ ಶಿಬಿರಗಳು ನಡೆದರೆ ಅವುಗಳ ನಿಜವಾದ ಉದ್ದೇಶ ಸಾರ್ಥಕವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT