ಸೋಮವಾರ, ಏಪ್ರಿಲ್ 19, 2021
31 °C

ಕಾರು ಗುದ್ದಿಸಿ 3 ಸಾವು: ತಪ್ಪಿತಸ್ಥನೆಂಬ ಭಾವನೆ ಕಾಡುತ್ತಿದೆ– ಗೌರವ್‌ ಗಿಲ್

ರೋಶನ್‌ ತ್ಯಾಗರಾಜನ್‌ Updated:

ಅಕ್ಷರ ಗಾತ್ರ : | |

ಜೋಧ್‌ಪುರ: 'ಮಿಂಚಿನ ವೇಗದಲ್ಲಿ ಸಂಭವಿಸಿದ ಘಟನೆ ಅದು, ಆ ಅಪಘಾತ ತೀವ್ರ ನೋವುಂಟು ಮಾಡಿದ್ದು, ತಪ್ಪಿತಸ್ಥನೆಂಬ ಭಾವನೆ ನನ್ನ ಕಾಡುತ್ತಿದೆ' ಎಂದು ಭಾರತದ ವೇಗದ ತಾರೆ (ರೇಸ್‌ ಕಾರು ಚಾಲಕ) ಗೌರವ್‌ ಗಿಲ್‌ ತಿಳಿಸಿದ್ದಾರೆ. 

ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಸಂಭವಿಸಿದ ಅವಘಡದಿಂದ ಇನ್ನು ನಾನು ಚೇತರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ರಾಜಸ್ತಾನದ ಬಾರ್ಮೆರ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಸಂಭವಿಸಿದ ಟ್ರ್ಯಾಕ್‌ ದುರಂತದಲ್ಲಿ ಗೌರವ್ ಗಿಲ್‌ ಅವರ ಕಾರು ಅಪಘಾತಕ್ಕೆ ಒಳಗಾಗಿ ಮೂವರು ಸಾವಿಗೀಡಾಗಿದ್ದರು. 

ಇದನ್ನೂ ಓದಿ: ಗೌರವ್ ಗಿಲ್ ಕಾರು ದುರಂತ: 3 ಸಾವು

ರ‍್ಯಾಲಿಯ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಗೌರವ್ ಗಿಲ್ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಮುನ್ನುಗ್ಗುತ್ತಿದ್ದರು. ಎಡಕ್ಕೆ ತಿರುಗುವ ಸಂದರ್ಭದಲ್ಲಿ ಭದ್ರತೆಯನ್ನು ಭೇದಿಸಿ ಬೈಕ್ ಸವಾರನೊಬ್ಬ ಟ್ರ್ಯಾಕ್‌ ಒಳಗೆ ನುಗ್ಗಿದ್ದಾನೆ. ಟ್ರ್ಯಾಕ್ ಸಮೀಪ ನಿಂತಿದ್ದ ನರೇಂದ್ರ, ಅವರ ಪತ್ನಿ ಪುಷ್ಪಾ ಮತ್ತು ಪುತ್ರ ಜಿತೇಂದ್ರ ಅವರಿಗೆ ಕಾರು ಅಪ್ಪಳಿಸಿದ್ದರಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದರು.

ಈ ಅಪಘಾತ ಮಿಂಚಿನ ವೇಗದಲ್ಲಿ ಸಂಭವಿಸಿತ್ತು. ಕಾರನ್ನು ನಿಯಂತ್ರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದೆ, ಆದರೆ ಕಾರು ಅತಿವೇಗದಲ್ಲಿ ಇದ್ದ ಕಾರಣ ಫಲ ಸಿಗಲಿಲ್ಲ, ಆಗ ಎಲ್ಲವೂ ನನ್ನ ಕೈ ಮೀರಿ ಹೋಗಿತ್ತು ಎಂದು ಗಿಲ್‌ ವಿಷಾಧ ವ್ಯಕ್ತಪಡಿಸಿದರು. 

ಟ್ರ್ಯಾಕ್‌ನಲ್ಲಿ ನಾನು ಸಾಕಷ್ಟು ಅಪಘಾತಗಳನ್ನು ನೋಡಿದ್ದೇನೆ, ಆದರೆ ಈ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಗಿದೆ ಎಂದಿದ್ದಾರೆ.

ಈ ಘಟನೆ ನಡೆದ ಬಳಿಕ ನಾನು ನಾಪತ್ತೆಯಾಗಿದ್ದೆ ಎಂದು ಕೆಲವರು ಅಪಪ್ರಚಾರ ಮಾಡಿದ್ದರು, ನಾನು ಎಲ್ಲಿಯೂ ಹೋಗಿರಲಿಲ್ಲ, ಅಲ್ಲಿಯೇ ಇದ್ದೆ, ಸಂಜೆ ದೆಹಲಿಗೆ ಬಂದಿದ್ದರೂ ಘಟನೆಯ ಬಗ್ಗೆ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೆ ಎಂದು ಅವರು ಹೇಳಿದ್ದಾರೆ. 

ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ಸೂಕ್ತ ಬಿಗಿ ಭದ್ರತೆ ಕಲ್ಪಿಸುವ ವ್ಯವಸ್ಥೆಯನ್ನು ಆಯೋಜಕರು ಮಾಡಬೇಕಿದೆ. ಅಂದು ಬೈಕ್‌ ಸವಾರ ಭದ್ರತೆ ಸೀಳಿಕೊಂಡು ಟ್ರ್ಯಾಕ್‌ಗೆ ಬರದಿದ್ದರೆ ಆ ಘಟನೆ ಸಂಭವಿಸುತ್ತಿರಲಿಲ್ಲ. ಇಂತಹ ಟೂರ್ನಿಗಳಲ್ಲಿ ಸಾರ್ವಜನಿಕರು ಟ್ರ್ಯಾಕ್‌ ಒಳಗೆ ಬರಬಾರದು ಹಾಗೂ ಪೊಲೀಸರ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು