ಗುರುವಾರ , ಏಪ್ರಿಲ್ 9, 2020
19 °C
ಒಮಾನ್ ಓಪನ್ ಟೇಬಲ್ ಟೆನಿಸ್ ಟೂರ್ನಿ: ಸೆಮಿಫೈನಲ್‌ನಲ್ಲಿ ಹರ್ಮೀತ್ ದೇಸಾಯಿಗೆ ನಿರಾಸೆ

ಫೈನಲ್‌ಗೆ ಲಗ್ಗೆ ಇರಿಸಿದ ಶರತ್ ಕಮಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಸ್ಕತ್‌: ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ಐಟಿಟಿಎಫ್ ಚಾಲೆಂಜರ್ ಪ್ಲಸ್ ಒಮಾನ್ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಭಾನುವಾರ ನಡೆದ ನಾಲ್ಕರ ಘಟ್ಟದ ಹಣಾಹಣಿಯ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಚೇತರಿಸಿಕೊಂಡು ಅಮೋಘ ಆಟವಾಡಿದ ಅವರು ರಷ್ಯಾದ ಕಿರಿಲ್ ಸ್ಕಚ್ಕೊವ್ ಎದುರು ಗೆಲುವು ಸಾಧಿಸಿದರು.

ನಾಲ್ಕನೇ ಶ್ರೇಯಾಂಕದ ಶರತ್ ಮೊದಲ ಎರಡು ಗೇಮ್‌ಗಳಲ್ಲಿ 11–13, 11–13ರ ಹಿನ್ನಡೆಗೆ ಒಳಗಾಗಿದ್ದರು. ನಂತರ 13–11, 11–9, 13–11, 8–11, 11–7ರಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದರು. ಒಂದು ತಾಸು ಎಂಟು ನಿಮಿಷಗಳ ಹೋರಾಟ ಇದಾಗಿತ್ತು.

37 ವರ್ಷದ ಶರತ್ ಕಮಲ್ ಅಗ್ರ ಕ್ರಮಾಂಕದ, ಪೋರ್ಚುಗಲ್‌ನ ಮಾರ್ಕೋಸ್‌ ಫ್ರೇಟಾಸ್ ಅವರನ್ನು ಫೈನಲ್‌ನಲ್ಲಿ ಎದುರಿಸುವರು. ಭಾರತದ ಹರ್ಮೀತ್ ದೇಸಾಯಿ ಅವರನ್ನು 5–11, 11–9, 6–11, 6–11, 11–8, 13–11, 11–3ರಲ್ಲಿ ಮಾರ್ಕೋಸ್ ಸೆಮಿಫೈನಲ್‌ನಲ್ಲಿ ಸೋಲಿಸಿದರು. 

ಈ ವರ್ಷದ ಆರಂಭದಲ್ಲಿ ನಡೆದ ಈಜಿಪ್ಟ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡ ನಂತರ ಶರತ್ ಕಮಲ್ ಫೈನಲ್ ಪ್ರವೇಶಿಸಿದ ಮೊದಲ ಐಟಿಟಿಎಫ್ ಟೂರ್ನಿ ಇದು.

‘ಇಲ್ಲಿ ಈ ವರೆಗೆ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾದದ್ದರಲ್ಲಿ ಖುಷಿ ಇದೆ. ರ‍್ಯಾಂಕಿಂಗ್‌ನಲ್ಲಿ ಬಡ್ತಿ ಮತ್ತು ಮುಂದಿನ ಟೂರ್ನಿಗಳಲ್ಲಿ ಉತ್ತಮ ಶ್ರೇಯಾಂಕ ಗಳಿಸಲು ಇದು ನೆರವಾಗಲಿದೆ. ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಯ ಹಿನ್ನೆಲೆಯಲ್ಲಿ ಇದು ಒಳ್ಳೆಯ ಬೆಳವಣಿಗೆ’ ಎಂದು ಅವರು ಪಂದ್ಯದ ನಂತರ ಹೇಳಿದರು. 

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಗಳಿಸುವ ಗುರಿ ಇರಿಸಿಕೊಂಡು ಇಲ್ಲಿ ಭಾರತದ ಆಟಗಾರರು ಅಧಿಕ ಸಂಖ್ಯೆಯಲ್ಲಿ ಕಣಕ್ಕೆ ಇಳಿದಿದ್ದಾರೆ. ಅವರೆಲ್ಲರ ನಡುವೆ ನನಗೆ ಫೈನಲ್ ಪ್ರವೇಶಿಸಲು ಸಾಧ್ಯವಾದದ್ದು ಸಂತೋಷದ ವಿಷಯ’ ಎಂದು ಅವರು ಹೇಳಿದರು.

ಆರಂಭದಲ್ಲಿ ಮೇಲುಗೈ ಸಾಧಿಸಿದ ದೇಸಾಯಿ: ಮಾರ್ಕೋಸ್ ಎದುರಿನ ಪಂದ್ಯದಲ್ಲಿ ಹರ್ಮೀತ್ ದೇಸಾಯಿ ಆರಂಭದ ಮುನ್ನಡೆ ಸಾಧಿಸಿದ್ದರು. ಆದರೆ ವಿಶ್ವದ 26ನೇ ಕ್ರಮಾಂಕದ ಮಾರ್ಕೋಸ್ 3–1ರ ಹಿನ್ನಡೆಯಿಂದ ಚೇತರಿಸಿಕೊಂಡು ತಿರುಗೇಟು ನೀಡಿದರು. ಹೀಗಿದ್ದೂ ದೇಸಾಯಿ ಮುಂದಿನ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸುವ ಭರವಸೆಯಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)