ಸೋಮವಾರ, ಸೆಪ್ಟೆಂಬರ್ 20, 2021
20 °C
ರಾಜ್ಯ ಸರ್ಕಾರಗಳಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಕರೆ

ಖೇಲೊ ಇಂಡಿಯಾ ಕ್ರೀಡಾಕೂಟವನ್ನು ಸಕ್ರಿಯವಾಗಿ ಸಂಘಟಿಸಿ: ಸಚಿವ ಕಿರಣ್‌ ರಿಜಿಜು ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಳಮಟ್ಟದಿಂದಲೇ ಉತ್ತಮ ಪ್ರತಿಭೆಗಳನ್ನು ಗುರುತಿಸಲು ಖೇಲೊ ಇಂಡಿಯಾ ಕ್ರೀಡಾಕೂಟಗಳನ್ನು ಸಕ್ರಿಯವಾಗಿ ಸಂಘಟಿಸುವಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ರಾಜ್ಯ ಸರ್ಕಾರಗಳಿಗೆ ಕರೆ ನೀಡಿದ್ದಾರೆ.

’ಖೇಲೊ ಇಂಡಿಯಾ ಯೋಜನೆಯಡಿ ರಾಷ್ಟ್ರಮಟ್ಟದಲ್ಲಿ ವಾರ್ಷಿಕವಾಗಿ ಖೇಲೊ ಇಂಡಿಯಾ ಯೂತ್‌, ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ಎಲ್ಲ ರಾಜ್ಯಗಳಲ್ಲಿ ಪ್ರತಿಭೆಗಳ ಗುರುತಿಸಲು ಈ ಕ್ರೀಡಾಕೂಟಗಳು ಅನುಕೂಲವಾಗಿವೆ. ಆದರೆ ಇಷ್ಟು ಸಾಕಾಗುವುದಿಲ್ಲ. ವಾರ್ಷಿಕವಾಗಿ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವ ರಾಜ್ಯಗಳು ಖೇಲೊ ಇಂಡಿಯಾ ಯೋಜನೆಗೆ ಕೈಜೋಡಿಸಬಹುದು. ಕೇಂದ್ರ ಸರ್ಕಾರ ಇದಕ್ಕೆ ಸಹಕಾರ ನೀಡಲಿದೆ‘ ಎಂದು ಖೇಲೊ ಇಂಡಿಯಾ ಯೋಜನೆಯ ಸಾಮಾನ್ಯ ಸಮಿತಿಯ ಮೊದಲ ಸಭೆಯಲ್ಲಿ ರಿಜಿಜು ಹೇಳಿದರು. 

ರಿಜಿಜು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕ್ರೀಡಾ ಕಾರ್ಯದರ್ಶಿ ರಾಜೀವ್‌ ಮಿತ್ತಲ್‌, ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಪ್ರಧಾನ ಕಾರ್ಯದರ್ಶಿ ಸಂದೀಪ್‌ ಪ್ರಧಾನ್‌ ಹಾಗೂ ಕ್ರೀಡಾ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

’ಭಾರತವನ್ನು ಕ್ರೀಡಾ ಶಕ್ತಿಯಾಗಿ ರೂಪಿಸಲು 5–10ರ ವಯಸ್ಸಿನಿಂದಲೇ ಪ್ರತಿಭೆಗಳನ್ನು ಗುರುತಿಸಬೇಕು. ಬಳಿಕ ಅವರನ್ನು ಭವಿಷ್ಯದ ಚಾಂಪಿಯನ್‌ಗಳಾಗುವಂತೆ ಸಜ್ಜುಗೊಳಿಸಬೇಕು. ಒಲಿಂಪಿಕ್‌ ಕೂಟಕ್ಕೆ ಅಥ್ಲೀಟುಗಳನ್ನು ಸಜ್ಜುಗೊಳಿಸಲು ಕನಿಷ್ಠ 8 ವರ್ಷಗಳಾದರೂ ಅಗತ್ಯ. ಪ್ರತಿಭೆಗಳ ಹುಡುಕಾಟ ವಿಳಂಬವಾದಷ್ಟು ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸುವ ಸಾಧ್ಯತೆಗಳು ಸೀಮಿತಗೊಳ್ಳುತ್ತವೆ‘ ಎಂದು ರಿಜಿಜು ನುಡಿದರು.

ಪ್ರತಿಭೆಗಳನ್ನು ಗುರುತಿಸಲು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಈಶಾನ್ಯ ಎಂಬ ಐದು ವಲಯ ಸಮಿತಿಗಳನ್ನು ರಚಿಸುವ ಕುರಿತು ಕ್ರೀಡಾ ಸಚಿವರು ವಿವರಣೆ ನೀಡಿದರು.

’ಗುರುತಿಸಲಾದ ಪ್ರತಿಭೆಗಳಿಗೆ ರಾಜ್ಯ ಸರ್ಕಾರದ ಅಡಿ ಅಥವಾ ಸಾಯ್‌ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು. ಈ ಕುರಿತು ರಾಜ್ಯಗಳು ನಮಗೆ ಮಾಹಿತಿ ನೀಡಬೇಕು‘ ಎಂದರು.

ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರಕ್ಕಾಗಿ (ಕೆಐಎಸ್‌ಸಿಇ) ರಾಜ್ಯಗಳು ಒದಗಿಸುವ ತಮ್ಮ ಅತ್ಯುತ್ತಮ ಕ್ರೀಡಾ ಮೂಲಸೌಕರ್ಯಗಳನ್ನು ಆದ್ಯತೆಯ ಮೇಲೆ ಗುರುತಿಸುವ ಅಗತ್ಯತೆಯ ಬಗ್ಗೆ ಸಚಿವರು ಒತ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು