ಭಾನುವಾರ, ಸೆಪ್ಟೆಂಬರ್ 26, 2021
21 °C

ನನಗೆ ಯಾವ ಪುರಸ್ಕಾರವೂ ಬೇಡ : ಭಾರತದ ಬಾಕ್ಸರ್‌ ಅಮಿತ್‌ ಪಂಘಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ನನಗೆ ಯಾವ ಪುರಸ್ಕಾರವೂ ಬೇಡ. ಅದನ್ನು ಬಯಸುವುದೂ ಇಲ್ಲ. ನಾನು ಬಾಕ್ಸಿಂಗ್‌ನಲ್ಲಿ ಎತ್ತರದ ಸಾಧನೆ ಮಾಡುವಲ್ಲಿ ಕೋಚ್‌ ಅನಿಲ್‌ ಧನಕರ್‌ ಅವರ ಪಾತ್ರ ಮಹತ್ವದ್ದು. ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದರೆ ಅತೀವ ಖುಷಿಯಾಗುತ್ತದೆ’ ಎಂದು ಭಾರತದ ಬಾಕ್ಸರ್ ಅಮಿತ್‌ ಪಂಘಲ್‌ ನುಡಿದಿದ್ದಾರೆ.

ಅಮಿತ್‌ ಅವರು ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿಯ ಪದಕ ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಿದ್ದರು. ಪುರುಷರ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್‌ ಎಂಬ ಹಿರಿಮೆ ಭಾಜನರಾಗಿದ್ದರು.

‘2008ರಲ್ಲಿ ಬಾಕ್ಸಿಂಗ್‌ ಲೋಕಕ್ಕೆ ಅಡಿ ಇಟ್ಟಾಗ ನನಗೆ ಏನೂ ಗೊತ್ತಿರಲಿಲ್ಲ. ಧನಕರ್‌ ಅವರು ನನ್ನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸಾಣೆ ಹಿಡಿದರು. ಈಗಲೂ ಅವರು ಅಮೂಲ್ಯ ಸಲಹೆಗಳನ್ನು ನೀಡುತ್ತಾರೆ. ಅವರಿಗೆ ಗೌರವ ನೀಡಿದರೆ ಅದು ನನಗೆ ಸಿಕ್ಕಂತೆಯೇ’ ಎಂದಿದ್ದಾರೆ.

23 ವರ್ಷ ವಯಸ್ಸಿನ ಅಮಿತ್‌, ಭಾರತೀಯ ಸೇನೆಯಲ್ಲಿ ನೈಬ್‌ ಸುಬೇದಾರ್‌ ಆಗಿದ್ದಾರೆ. ಮೊದಲು 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಯು ತೂಕದ ವಿಭಾಗಗಳಲ್ಲಿ ಬದಲಾವಣೆ ಮಾಡಿದ ಬಳಿಕ 52 ಕೆ.ಜಿ. ವಿಭಾಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

‘ಭಾಗವಹಿಸುವ ಎಲ್ಲಾ ಕೂಟ ಮತ್ತು ಚಾಂಪಿಯನ್‌ಷಿಪ್‌ಗಳಲ್ಲೂ ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಬೇಕೆಂಬ ಗುರಿ ಇಟ್ಟುಕೊಂಡಿರುತ್ತೇನೆ. ಅದಕ್ಕಾಗಿ ಕಠಿಣ ತಾಲೀಮು ನಡೆಸುತ್ತೇನೆ. ಮುಂದಿನ ವರ್ಷದ ಫೆಬ್ರುವರಿಯಲ್ಲಿ ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ನಡೆಯಲಿದೆ. ಅದರಲ್ಲಿ ಪದಕ ಜಯಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

2012ರಲ್ಲಿ ಅಮಿತ್‌ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಪ್ರಶಸ್ತಿ ಪಟ್ಟಿಯಿಂದ ಅವರ ಹೆಸರು ಕೈಬಿಡಲಾಗಿತ್ತು. ಜೊತೆಗೆ ಒಂದು ವರ್ಷ ನಿಷೇಧವನ್ನೂ ಹೇರಲಾಗಿತ್ತು.

‘ಅಮಿತ್‌ ನನಗೆ ಮಗನಿದ್ದಂತೆ. 2005ರಿಂದಲೂ ಆತನನ್ನು ನೋಡುತ್ತಾ ಬಂದಿದ್ದೇನೆ. ಆತ ತುಂಬಾ ಪ್ರತಿಭಾವಂತ. ಬಾಕ್ಸಿಂಗ್‌ ಬಗ್ಗೆ ಅಪಾರ ಬದ್ಧತೆ ಹೊಂದಿದ್ದಾನೆ. ಆತನ ಸಾಧನೆಯಿಂದ ಇಡೀ ದೇಶವೇ ಹೆಮ್ಮೆಯಿಂದ ಬೀಗುವಂತಾಗಿದೆ. ನನಗೂ ತುಂಬಾ ಖುಷಿಯಾಗಿದೆ’ ಎಂದು ಧನಕರ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು