ಗುರುವಾರ , ನವೆಂಬರ್ 14, 2019
19 °C

ವಿಶ್ವ ಮಿಲಿಟರಿ ಕ್ರೀಡಾಕೂಟ: ಆನಂದನ್‌ಗೆ ಚಿನ್ನ ‘ಡಬಲ್‌’

Published:
Updated:
Prajavani

ವುಹಾನ್‌, ಚೀನಾ: ಭಾರತದ ಪ್ಯಾರಾ ಅಥ್ಲೀಟ್‌ ಆನಂದನ್‌ ಗುಣಶೇಖರನ್‌ ಅವರು ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಮಂಗಳವಾರ ಎರಡು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.

ಪುರುಷರ 100 ಮೀಟರ್ಸ್‌ ಓಟದಲ್ಲಿ 12.00 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದ ಆನಂದನ್‌, ಚಿನ್ನಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಈ ಬಾರಿಯ ಕೂಟದಲ್ಲಿ ಭಾರತದ ಪದಕದ ಖಾತೆ ತೆರೆದರು.

ಪೆರು ದೇಶದ ಕ್ಯಾಸಸ್‌ ಜೋಸ್‌ (12.65 ಸೆ.) ಮತ್ತು ಕೊಲಂಬಿಯಾದ ಫಜಾರ್ಡೊ ಪಾರ್ಡೊ ಟಿಯೊಡಿಸೆಲೊ (12.72ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ಪುರುಷರ 400 ಮೀಟರ್ಸ್‌ ಐಟಿ–1 ವಿಭಾಗದಲ್ಲೂ 32 ವರ್ಷದ ಆನಂದನ್‌ ಚಿನ್ನದ ಸಾಧನೆ ಮಾಡಿದರು. ಅವರು ನಿಗದಿತ ದೂರ ಕ್ರಮಿಸಲು 53.35 ಸೆಕೆಂಡುಗಳನ್ನು ತೆಗೆದುಕೊಂಡರು.

ಕೊಲಂಬಿಯಾದ ಫಜಾರ್ಡೊ ಪಾರ್ಡೊ ಟಿಯೊಡಿಸೆಲೊ 58.95 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಬೆಳ್ಳಿಯ ಪದಕ ಜಯಿಸಿದರು. ರಾಂಕಿನ್‌ ಮೈಕಲ್‌ (1:00.31ಸೆ.) ಅವರು ಈ ವಿಭಾಗದ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಗುಣಶೇಖರನ್‌ ಅವರು 2018ರ ರಾಷ್ಟ್ರೀಯ  ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 200 ಮತ್ತು 400 ಮೀಟರ್ಸ್‌ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು.

2017ರಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಗ್ರ್ಯಾನ್‌ ಪ್ರಿ ಕೂಟದ 400 ಮೀಟರ್ಸ್‌ ಓಟದಲ್ಲಿ ಅವರಿಂದ ಬೆಳ್ಳಿಯ ಸಾಧನೆ ಮೂಡಿಬಂದಿತ್ತು.

ವಿಶ್ವ ಕ್ಲಾಸ್‌ ಫೀಲ್ಡ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ತೇಜಿಂದರ್‌ ಸಿಂಗ್ ತೂರ್‌ ಅವರು ಆರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.

ಶಾಟ್‌ಪಟ್‌ ಸ್ಪರ್ಧೆಯಲ್ಲಿ ಅವರಿಂದ 20.36 ಮೀಟರ್ಸ್‌ ಸಾಮರ್ಥ್ಯವಷ್ಟೇ ಮೂಡಿಬಂತು.

ಪ್ರತಿಕ್ರಿಯಿಸಿ (+)