ಭಾನುವಾರ, ಸೆಪ್ಟೆಂಬರ್ 26, 2021
21 °C
ಕುಸ್ತಿಯಲ್ಲಿ ಸುಶೀಲ್‌ ಕುಮಾರ್‌, ಬಜರಂಗ್‌ ಮೇಲೆ ಹೆಚ್ಚಿನ ನಿರೀಕ್ಷೆ

ಅನುಭವಿಗಳಿಗೆ ಅಗ್ನಿಪರೀಕ್ಷೆ; ಯುವಕರಿಗೆ ಹೊಸ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಜಕಾರ್ತ: ಅನುಭವಿ ಮತ್ತು ಯುವಕರಿಂದ ಕೂಡಿರುವ ಭಾರತದ ಕುಸ್ತಿ ಪಡೆ ಚಿನ್ನದ ಕನಸಿನೊಂದಿಗೆ ಭಾನುವಾರ ಏಷ್ಯನ್‌ ಕ್ರೀಡಾಕೂಟದ ಅಖಾಡಕ್ಕೆ ಇಳಿಯಲಿದೆ.

ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಹಿರಿಯ ಕುಸ್ತಿಪಟು ಸುಶೀಲ್‌ ಕುಮಾರ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ‍ಪದಕಕ್ಕೆ ಕೊರಳೊಡ್ಡಿದ್ದ 24ರ ಹರೆಯದ ಬಜರಂಗ್‌ ಪೂನಿಯಾ ಅವರ ಮೇಲೆ ಅಪಾರ ನಿರೀಕ್ಷೆ ಇಡಲಾಗಿದೆ.

74 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಕಣಕ್ಕಿಳಿಯಲಿರುವ ಸುಶೀಲ್‌, ಏಷ್ಯನ್‌ ಕೂಟದಲ್ಲಿ ಚಿನ್ನದ ಪದಕ ಜಯಿಸಿಲ್ಲ. 2006ರಲ್ಲಿ ದೋಹಾದಲ್ಲಿ ನಡೆದಿದ್ದ ಕೂಟದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಆಗ 66 ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದರು.

65 ಕೆ.ಜಿ. ವಿಭಾಗದಲ್ಲಿ ಅಖಾಡಕ್ಕೆ ಇಳಿಯಲಿರುವ ಬಜರಂಗ್‌ ಕೂಡಾ ಚೊಚ್ಚಲ ಚಿನ್ನದ ಕನಸಿನಲ್ಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ (2014) ಇಂಚೆನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಅವರಿಂದ ಬೆಳ್ಳಿ ಪದಕದ ಸಾಧನೆ ಮೂಡಿಬಂದಿತ್ತು.

ಒಲಿಂಪಿಯನ್‌ ಕುಸ್ತಿಪಟು ಯೋಗೇಶ್ವರ ದತ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಬಜರಂಗ್‌, ಮೊದಲ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಸಿರೋಜಿದ್ದಿನ್‌ ಖಾಶನೋವ್‌ ವಿರುದ್ಧ ಸೆಣಸಲಿದ್ದಾರೆ. ಹೋದ ವರ್ಷ ನವದೆಹಲಿಯಲ್ಲಿ ಜರುಗಿದ್ದ ಏಷ್ಯನ್‌ ಚಾಂ‍ಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಬಜರಂಗ್‌ ಅವರು ಖಾಶನೋವ್‌ ವಿರುದ್ಧ ವಿಜಯಿಯಾಗಿದ್ದರು.

ಈ ಬಾರಿಯ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದ ಸುಶೀಲ್‌ ಅವರ ಪದಕದ ಹಾದಿ ಅಷ್ಟು ಸುಲಭವಾಗಿಲ್ಲ. ಅವರಿಗೆ ಕೂಟದ ಆರಂಭಿಕ ಸುತ್ತಿನಿಂದಲೂ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

ಸಂದೀಪ್‌ ಕುಮಾರ್‌ (57 ಕೆ.ಜಿ), ಪವನ್‌ ಕುಮಾರ್‌ (86 ಕೆ.ಜಿ) ಮತ್ತು ಮೌಸಮ್‌ ಖಾತ್ರಿ (97 ಕೆ.ಜಿ) ಅವರೂ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ನಾಳೆ ಮಹಿಳಾ ಸ್ಪರ್ಧೆ: ಮಹಿಳೆಯರ ವಿಭಾಗದ ಸ್ಪರ್ಧೆಗಳು ಸೋಮವಾರದಿಂದ ಆರಂಭವಾಗಲಿವೆ.

ವಿನೇಶಾ ಪೋಗಟ್‌ ಅವರು ಈ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದಾರೆ. ಕೂಟಕ್ಕೂ ಮುನ್ನ ಹಂಗರಿಯಲ್ಲಿ ವಿಶೇಷ ತರಬೇತಿ ಪಡೆದಿರುವ ವಿನೇಶಾ 50 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ಚೀನಾ ಮತ್ತು ಜಪಾನ್‌ನ ಕುಸ್ತಿಪಟುಗಳಿಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿದ್ದಾರೆ.

ವಿನೇಶಾ ಅವರು ಇಂಚೆನ್‌ನಲ್ಲಿ ನಡೆದಿದ್ದ ಹಿಂದಿನ ಕೂಟದಲ್ಲಿ 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಈ ಬಾರಿಯ ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಕ್ರಮವಾಗಿ ಬೆಳ್ಳಿ ಮತ್ತು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು. 

ಸಾಕ್ಷಿ ಮಲಿಕ್‌ ಕೂಡಾ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಅವರು 62 ಕೆ.ಜಿ. ವಿಭಾಗದಲ್ಲಿ ಸೆಣಸಲಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ಬರೆದಿದ್ದರು.

‍ಪಿಂಕಿ (53 ಕೆ.ಜಿ), ಪೂಜಾ ಧಂಡಾ (57 ಕೆ.ಜಿ), ದಿವ್ಯಾ ಕಾಕ್ರನ್‌ (68 ಕೆ.ಜಿ) ಹಾಗೂ ಕಿರಣ್‌ (76 ಕೆ.ಜಿ) ಕೂಡಾ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು