ಭಾನುವಾರ, ಮಾರ್ಚ್ 29, 2020
19 °C

ಡಚ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ: ಕಂಚು ಗೆದ್ದ ತಸ್ನಿಂ, ಮಾನಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಯುವ ಆಟಗಾರ್ತಿಯರಾದ ತಸ್ನಿಂ ಮಿರ್‌ ಹಾಗೂ ಮಾನಸಿ ಸಿಂಗ್‌ ಅವರು ಡಚ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಂಚಿನ ಪದಕಗಳಿಗೆ ಮುತ್ತಿಟ್ಟಿದ್ದಾರೆ. ನೆದರ್ಲೆಂಡ್ಸ್‌ನ ಹಾರ್ಲೆಮ್‌ನಲ್ಲಿ ನಡೆದ ಟೂರ್ನಿಯಲ್ಲಿ ಈ ಸಾಧನೆ ಮೂಡಿಬಂದಿದೆ.

ಈ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ಲಭಿಸಿರುವುದು ಇದೇ ಮೊದಲು.

ಭಾನುವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ತಸ್ನಿಂ, ಮೂರನೇ ಶ್ರೇಯಾಂಕದ ಕೊರಿಯಾದ ಸೊ ಯುಲ್‌ ಲೀ ಎದುರು ದಿಟ್ಟ ಆಟವಾಡಿದರೂ 19–21, 10–22 ಗೇಮ್‌ಗಳಿಂದ ಸೋತರು. ಈ ಪಂದ್ಯ 36 ನಿಮಿಷಗಳಲ್ಲಿ ಮುಗಿಯಿತು.

ತಸ್ನಿಂ, ಈ ಟೂರ್ನಿಯಲ್ಲಿ 11ನೇ ಶ್ರೇಯಾಂಕ ಪಡೆದಿದ್ದರು. ತನಗಿಂತ ಹೆಚ್ಚಿನ ರ‍್ಯಾಂಕಿನ ಆಟಗಾರ್ತಿಯರನ್ನು ಮಣಿಸಿ ಗಮನಸೆಳೆದಿದ್ದರು.

ನಾಲ್ಕರ ಘಟ್ಟ ತಲುಪಿದ್ದ ಮಾನಸಿ ಅವರಿಗೆ ಇಂಡೊನೇಷ್ಯಾದ ಸೈಫಿ ರಿಜ್‌ಕಾ ನೂರಿದಯಾಹ್‌ ಸವಾಲು ಮೀರಲಾಗಲಿಲ್ಲ. 11–21, 16–21 ಅವರು ಪರಾಭವ ಕಂಡರು.

ಮೂರನೇ ಸುತ್ತಿನ ಸೆಣಸಿನಲ್ಲಿ ಮಾನಸಿ 22-20, 21-14ರಿಂದ ಸ್ಥಳೀಯ ಆಟಗಾರ್ತಿ, ಐದನೇ ಶ್ರೇಯಾಂಕದ ಆ್ಯಮಿ ಟಾನ್‌ ಅವರಿಗೆ ಆಘಾತ ನೀಡಿದ್ದರು.

ಆಕರ್ಷಿ, ಅನುಪಮಾ ಮಿಂಚು: ಭಾರತದ ಉದಯೋನ್ಮುಖ ಆಟಗಾರ್ತಿಯರಾದ ಆಕರ್ಷಿ ಕಶ್ಯ‍ಪ್‌ ಹಾಗೂ ಅನುಪಮಾ ಉಪಾಧ್ಯಾಯ ಅವರು ಕೆನ್ಯಾ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡರು. ಮಹಿಳಾ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಆಕರ್ಷಿ 21–15, 21–6ರಿಂದ ಅನುಪಮಾ ಅವರಿಗೆ ಸೋಲುಣಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು