ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಕೋಚ್ ವಿರುದ್ಧ ಎಫ್‌ಐಆರ್

ಬೆಂಗಳೂರು: ವಯಸ್ಸು ತಿದ್ದಿದ ಜನನ ಪ್ರಮಾಣ ಸೃಷ್ಟಿಸಿ ಸರ್ಕಾರ ಹಾಗೂ ಪ್ರತಿಭಾವಂತ ಆಟಗಾರರನ್ನು ವಂಚಿಸಿದ ಆರೋಪದಡಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಹಾಗೂ ಕೋಚ್ ವಿಮಲ್ ಕುಮಾರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ದೂರುದಾರ ಎಂ.ಜಿ. ನಾಗರಾಜ್ ಅವರು ವಂಚನೆ ಕೃತ್ಯದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿತ್ತು. ಅದರನ್ವಯ ಇದೀಗ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಲಕ್ಷ್ಮ ಸೇನ್ ಅವರ ತಂದೆ ಧೀರೇಂದ್ರಕುಮಾರ್ ಸೇನ್, ತಾಯಿ ನಿರ್ಮಲ್ ಸೇನ್ ಸಹೋದರ ಚಿರಾಗ್ ಸೇನ್ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಕೋಚ್ ವಿಮಲಕುಮಾರ್ ಐದನೇ ಆರೋಪಿ’ ಎಂದು ತಿಳಿಸಿವೆ.
ಕೋಚ್ ಜೊತೆ ಸೇರಿ ತಿದ್ದುಪಡಿ: ‘ಧೀರೇಂದ್ರಕುಮಾರ್ ಹಾಗೂ ನಿರ್ಮಲ್ ಸೇನ್ ಅವರು ತಮ್ಮ ಇಬ್ಬರೂ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ಕೊಡಿಸಿದ್ದರು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಕೋಚ್ ಆಗಿರುವ ವಿಮಲ್‌ಕುಮಾರ್ ಜೊತೆ ಸಂಚು ರೂಪಿಸಿ, ಮಕ್ಕಳ ವಯಸ್ಸು ತಿದ್ದುಪಡಿ ಮಾಡಿ ಜನನ ಪ್ರಮಾಣ ಪತ್ರ ಸೃಷ್ಟಿಸಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನೈಜ ವಯಸ್ಸು ಮುಚ್ಚಿಟ್ಟಿದ್ದ ಲಕ್ಷ್ಯಸೇನ್, 2010ರಿಂದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ವಂಚನೆ ಮೂಲಕವೇ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದಿದ್ದಾರೆ. ಇದರಿಂದಾಗಿ ಅರ್ಹ ವಯಸ್ಸಿನ ಆಟಗಾರರಿಗೆ ಅನ್ಯಾಯವಾಗಿದೆ. ಆರೋಪಿಗಳ ಕೃತ್ಯದಿಂದಾಗಿ ಸರ್ಕಾರಕ್ಕೂ ವಂಚನೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.
ತಮ್ಮ ವಿರುದ್ಧದ ಪ್ರಕರಣದ ಕುರಿತು ಮಾಹಿತಿ ಪಡೆಯಲು ಲಕ್ಷ್ಮ ಸೇನ್ ಹಾಗೂ ಕುಟುಂಬದವರು ಲಭ್ಯರಾಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.