ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ರೈನೋಸ್‌ಗೆ ಚಾಂಪಿಯನ್‌ ಕಿರೀಟ

ಚೊಚ್ಚಲ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌: ಪುಣೆ ಪ್ರೈಡ್‌ ರನ್ನರ್‌ಅಪ್‌
Last Updated 4 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ತವರು ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ಕಣಕ್ಕಿಳಿದ ಬೆಂಗಳೂರು ರೈನೋಸ್‌ ತಂಡವು ಚೊಚ್ಚಲ ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 42–38 ಪಾಯಿಂಟ್‌ಗಳಿಂದ ಪುಣೆ‍ಪ್ರೈಡ್‌ ತಂಡಕ್ಕೆ ಬೆಂಗಳೂರು ಸೋಲುಣಿತು. ಬೆಂಗಳೂರು ಪರ ವಿಶಾಲ್‌ 12 ಪಾಯಿಂಟ್‌ ಗಳಿಸಿದರೆ, ಆರ್ಮುಗಂ 9, ಜಿ. ಅಂಬೇಸ್ವರಣ್‌ ಆರು ಪಾಯಿಂಟ್‌ ಗಳಿಸಿ ಮಿಂಚಿದರು. ವಿಶಾಲ್‌ ಅವರಿಗೆ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ದಕ್ಕಿತು.ಪುಣೆ ತಂಡದ ಅಮರ್‌ಜೀತ್‌ ಸಿಂಗ್‌ 13, ಜೀತೆಂದರ್‌ ಏಳು ಪಾಯಿಂಟ್‌ಗಳ ಕೊಡುಗೆ ನೀಡಿದರು. ಪ್ರಶಸ್ತಿ ವಿಜೇತ ಬೆಂಗಳೂರು ತಂಡ ₹ 1 ಕೋಟಿ ಬಹುಮಾನ ಮೊತ್ತ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್‌ ಅಪ್‌ ಪುಣೆ ₹ 75 ಲಕ್ಷ ಹಾಗೂ ಮೂರನೇ ಸ್ಥಾನ ಪಡೆದ ಚೆನ್ನೈ ಚಾಲೆಂಜರ್ಸ್‌ ₹ 50 ಲಕ್ಷ ಜೇಬಿಗಿಳಿಸಿತು.

ದಿಲ್ಲಿ ತಂಡದ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಸುನಿಲ್‌ ಜೈಪಾಲ್‌ ಪಾಲಾದರೆ, ಬೆಂಗಳೂರು ತಂಡದ ವಿಶಾಲ್‌ ಅವರು ಟೂರ್ನಿಯ ಅತ್ಯುತ್ತಮ ಆಲ್‌ರೌಂಡರ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ರೋಚಕ ಪೈಪೋಟಿ ಕಂಡುಬಂದ ಫೈನಲ್‌ ಪಂದ್ಯದಲ್ಲಿ ಪುಣೆ ತಂಡ ಆರಂಭದಲ್ಲೇ ಮುನ್ನಡೆ ಗಳಿಸಿತು. ಮೊದಲ ಕ್ವಾರ್ಟರ್‌ ಅಂತ್ಯದ ವೇಳೆಗೆ 13–12ರ ಮುನ್ನಡೆ ಕಾಯ್ದುಕೊಂಡ ಪುಣೆಗೆ ಬಳಿಕ ಅದೇ ಲಯ ಕಾಯ್ದುಕೊಳ್ಳಲಾಗಲಿಲ್ಲ.

ಮೊದಲ ಕ್ವಾರ್ಟರ್ ಮುಕ್ತಾಯದ ಬಳಿಕ ತಿರುಗೇಟು ನೀಡಿದ ಬೆಂಗಳೂರು ತಂಡ, ಪುಣೆ ಆಟಗಾರರ ಮೈದಾನ ಖಾಲಿ (ಆಲೌಟ್‌) ಮಾಡುವ ಮೂಲಕ 17–13ರ ಮುನ್ನಡೆ ತನ್ನದಾಗಿಸಿಕೊಂಡಿತು. ಆ ಬಳಿಕ ಇತ್ತಂಡಗಳು ಪಾಯಿಂಟ್‌ ಗಳಿಸುವ ಹಂತದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಎರಡನೇ ಕ್ವಾರ್ಟರ್‌ ಅಂತ್ಯಕ್ಕೆ ಬೆಂಗಳೂರಿಗೆ 21–15ರ ಮುನ್ನಡೆ ದೊರಕಿತು.

ಮೂರನೇ ಕ್ವಾರ್ಟರ್‌ನಲ್ಲಿ ತವರು ತಂಡ ಸಂಪೂರ್ಣ ಮೇಲುಗೈ ಸಾಧಿಸಿತು. ಮತ್ತೊಮ್ಮೆ ಪುಣೆ ಮೈದಾನ ಖಾಲಿ ಮಾಡಿದ ಬೆಂಗಳೂರು 37–25 ಪಾಯಿಂಟ್‌ ಅಂತರ ಕಾಯ್ದುಕೊಂಡಿತು. ಈ ಹಂತದಲ್ಲಿ ಪುಣೆ ಪುಟಿದೆದ್ದಿತು. ಸಂಘಟಿತ ಆಟದ ಮೂಲಕ ಬೆಂಗಳೂರು ತಂಡದ ಮೈದಾನ ಖಾಲಿ ಮಾಡಿ 37–39ಕ್ಕೆ ಮುನ್ನಡೆಯನ್ನು ತಗ್ಗಿಸಿಕೊಂಡಿತು.

ಈ ಹಂತದಲ್ಲಿ ಅಪಾಯದ ಮುನ್ಸೂಚನೆ ಅರಿತ ಬೆಂಗಳೂರು ಕೊನೆಯಲ್ಲಿ ಮಿಂಚಿನ ಆಟವಾಡಿ ಜಯದ ತೋರಣ ಕಟ್ಟಿತು. ಫೈನಲ್‌ ಪಂದ್ಯಕ್ಕೆ ಪ್ರೇಕ್ಷಕರ ಸಂಖ್ಯೆ ಅಧಿಕವಾಗಿತ್ತು. ಬೆಂಗಳೂರು ತಂಡ ಪಾಯಿಂಟ್‌ ಗಳಿಸಿದ ವೇಳೆಯಲ್ಲಿ ಹರ್ಷೋದ್ಘಾರದ ಅಲೆ ಏಳುತ್ತಿತ್ತು.

ಚೆನ್ನೈಗೆ ಮೂರನೇ ಸ್ಥಾನ

ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತ ಚೆನ್ನೈ ಚಾಲೆಂಜರ್ಸ್‌ ತಂಡ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಿಲರ್ ದಿಲ್ಲಿ ತಂಡದ ವಿರುದ್ಧ 37 -36 ಪಾಯಿಂಟ್‌ಗಳಿಂದಜಯಿಸಿತು. ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ಸ್ ಪ್ರವೇಶಿಸಿದ್ದ ದಿಲ್ಲಿ ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತು.ಚೆನ್ನೈ ತಂಡದ ಪರ ಸುನಿಲ್ ಕುಮಾರ್ 13 ಪಾಯಿಂಟ್‌ ಕಲೆಹಾಕಿದರೆ, ದಿಲ್ಲಿ ಪರ ಸುನಿಲ್ ಜೈಪಾಲ್ 12 ಪಾಯಿಂಟ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT