ಶನಿವಾರ, ಡಿಸೆಂಬರ್ 7, 2019
21 °C
ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಗೋವಿಂದರಾಜ್‌ ಹೇಳಿಕೆ

‘ಒಲಿಂ‍‍‍ಪಿಕ್ಸ್‌ಗೆ ರಹದಾರಿ ಪಡೆಯುಲು ಸದವಕಾಶ’

Published:
Updated:
Prajavani

ಬೆಂಗಳೂರು: ‘ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಏಷ್ಯಾ, ಒಸೀನಿಯಾದ ಮಹಿಳಾ ತಂಡಗಳಿಗೆ ಏಷ್ಯಾಕಪ್‌ ಡಿವಿಷನ್‌ ‘ಎ’ ಚಾಂಪಿಯನ್‌ಷಿಪ್‌ ಉತ್ತಮ ವೇದಿಕೆಯಾಗಿದೆ’ ಎಂದು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ (ಬಿಎಫ್‌ಐ) ಅಧ್ಯಕ್ಷ ಕೆ.ಗೋವಿಂದರಾಜ್ ತಿಳಿಸಿದರು.

ಭಾನುವಾರ ಕರ್ನಾಟಕ ಒಲಿಂಪಿಕ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಂಗಳವಾರದಿಂದ ಒಟ್ಟು ಆರು ದಿನಗಳ ಕಾಲ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಎಂಟು ತಂಡಗಳು ಭಾಗವಹಿಸಲಿವೆ. ಇವುಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಿದ್ದೇವೆ. ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳಿಗೆ ಟೋಕಿಯೊ ಟಿಕೆಟ್‌ ಸಿಗಲಿದೆ’ ಎಂದರು.

‘ಕಂಠೀರವ ಕ್ರೀಡಾಂಗಣದಲ್ಲಿರುವ ಬ್ಯಾಸ್ಕೆಟ್‌ಬಾಲ್ ಅಂಗಳವು ದಕ್ಷಿಣ ಏಷ್ಯಾದಲ್ಲೇ ಅತ್ಯುನ್ನತ ಗುಣಮಟ್ಟ ಹೊಂದಿದೆ. ಇತ್ತೀಚೆಗೆ ಭೇಟಿ ನೀಡಿದ್ದ ಸೆಂಟ್ರಲ್‌ ಪಾರ್ಲಿಮೆಂಟರಿ ಕಮಿಟಿಯವರು ಅಂಗಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ‘ಎ’ ಪ್ರಮಾಣ ಪತ್ರ ನೀಡಿದ್ದಾರೆ. ಇದು ಹೆಮ್ಮೆಯ ವಿಷಯ’ ಎಂದು ನುಡಿದರು.

‘ಭಾರತ ತಂಡವು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕೆಂಬುದು ನಮ್ಮ ಆಸೆ. ತಂಡವನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಆಯೋಜಿಸಿದ್ದೆವು. 75 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ನಮ್ಮ ಆಟಗಾರ್ತಿಯರಿಗೆ ವಿದೇಶಿ ಕೋಚ್‌ ಮಾರ್ಗದರ್ಶನ ನೀಡಿದ್ದಾರೆ’ ಎಂದೂ ಹೇಳಿದರು.

ಭಾರತ ತಂಡ ಪ್ರಕಟ: ಇದೇ ವೇಳೆ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡವನ್ನು ಪ್ರಕಟಿಸಲಾಯಿತು. ಕರ್ನಾಟಕದ ಎಚ್‌.ಬಾಂಧವ್ಯ ಮತ್ತು ಟಿ.ಲೋಪಮುದ್ರಾ ಅವರು ಸ್ಥಾನ ಪಡೆದಿದ್ದಾರೆ. ಆರ್‌.ರಾಜಪ್ರಿಯದರ್ಶಿನಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಬರ್ಖಾ ಸೊಂಕಾರ, ಮಧು ಕುಮಾರಿ, ಎಚ್‌.ಬಾಂಧವ್ಯ, ಶಿರೀನ್‌ ವಿಜಯ ಲಿಮಾಯೆ, ಶ್ರುತಿ ಅರವಿಂದ್‌, ಪಿ.ಜಿ.ಅಂಜನಾ, ಪಿ.ಎಸ್‌.ಜೀನಾ, ಪಿ.ಯು.ನವನೀತಾ, ಸ್ಟೆಫಿ ನಿಕ್ಸನ್‌, ಆರ್‌.ರಾಜಪ್ರಿಯದರ್ಶಿನಿ, ಅನಮೋಲ್‌ಪ್ರೀತ್‌ ಕೌರ್‌ ಮತ್ತು ಟಿ.ಲೋಪಮುದ್ರಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು