ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿ: ಎರಡನೇ ದಿನದ ಪಂದ್ಯಗಳೂ ಡ್ರಾ

ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿ
Last Updated 11 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಹಾಕಿ ಕರ್ನಾಟಕ ಆಶ್ರಯದ ಡೊಲೊ–650 ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಟೂರ್ನಿಯ ಎರಡನೇ ದಿನವಾದ ಭಾನುವಾರ, ನೆಚ್ಚಿನ ತಂಡಗಳ ಗೆಲುವು ಕಣ್ತುಂಬಿಕೊಳ್ಳಲು ಬಂದಿದ್ದ ಹಾಕಿ ಪ್ರಿಯರಿಗೆ ನಿರಾಸೆ ಕಾಡಿತು.

ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ನಡೆದ ದಿನದ ಎರಡೂ ಪಂದ್ಯಗಳು ಡ್ರಾ ಆದವು. ಶನಿವಾರ ನಡೆದಿದ್ದ ಪಂದ್ಯಗಳೂ ಡ್ರಾದಲ್ಲಿ ಅಂತ್ಯವಾಗಿದ್ದವು.

ಬೆಂಗಳೂರು ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮುಂಬೈಯ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ಮತ್ತು ಇಂಡಿಯನ್‌ ನೇವಿ ನಡುವಣ ಹಣಾಹಣಿ 1–1 ಗೋಲುಗಳಿಂದ ಸಮಬಲವಾಯಿತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಐಒಸಿಎಲ್‌, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇಂಡಿಯನ್‌ ನೇವಿ ತಂಡ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಹೀಗಾಗಿ 33 ನಿಮಿಷಗಳ ಆಟ ಗೋಲುರಹಿತವಾಗಿತ್ತು.

34ನೇ ನಿಮಿಷದಲ್ಲಿ ಐಒಸಿಎಲ್‌ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿರುವ ಯುವರಾಜ್‌ ವಾಲ್ಮಿಕಿ, ಕೈಚಳಕ ತೋರಿದರು. ಅವರು ಫ್ಲಿಕ್‌ ಮಾಡಿದ ಚೆಂಡು ಎದುರಾಳಿ ತಂಡದ ಗೋಲ್‌ಕೀಪರ್‌ ಬಿ.ಸಂಜಯ್‌ ಅವರನ್ನು ವಂಚಿಸಿ ಗುರಿ ಸೇರುತ್ತಿದ್ದಂತೆ ಐಒಸಿಎಲ್‌ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ಬಳಿಕ ಮುನ್ನಡೆ ಹೆಚ್ಚಿಸಿಕೊಳ್ಳಲು ಐಒಸಿಎಲ್‌ಗೆ ಉತ್ತಮ ಅವಕಾಶಗಳು ಲಭ್ಯವಾಗಿದ್ದವು. ಈ ತಂಡದ ಆಟಗಾರರು ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕೈಚೆಲ್ಲಿದರು.

ಅಂತಿಮ ಕ್ವಾರ್ಟರ್‌ನಲ್ಲಿ ಇಂಡಿಯನ್‌ ನೇವಿ, ವೇಗದ ಆಟಕ್ಕೆ ಮುಂದಾಯಿತು. ಪಂದ್ಯ ಮುಗಿಯಲು ನಾಲ್ಕು ನಿಮಿಷ (56) ಬಾಕಿ ಇದ್ದಾಗ ಜುಗ್‌ರಾಜ್‌ ಸಿಂಗ್‌ ಮೋಡಿ ಮಾಡಿದರು. ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಪರಿವರ್ತಿಸಿದ ಅವರು ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಆರ್ಮಿ ಇಲೆವನ್‌ ಮತ್ತು ಇಂಡಿಯನ್‌ ಏರ್‌ ಫೋರ್ಸ್‌ ನಡುವಣ ದಿನದ ಮೊದಲ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು.

ಆರು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕೈಚೆಲ್ಲಿದ ಆರ್ಮಿ ಇಲೆವನ್‌ ತಂಡ ಫೀಲ್ಡ್‌ ಗೋಲುಗಳನ್ನು ಗಳಿಸುವಲ್ಲೂ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT