ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ ಸಂಜನಾಗೆ ಎನ್‌ಎಯು ಗೌರವ

7
ಅಮೆರಿಕದ ಎಮಿಲಿ ರಾಡ್‌ಬೋ ಜೊತೆ ಸ್ಕಾಲರ್‌ಷಿಪ್‌; ಭಾರತದ ಎರಡನೇ ಆಟಗಾರ್ತಿ

ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ ಸಂಜನಾಗೆ ಎನ್‌ಎಯು ಗೌರವ

Published:
Updated:

ನವದೆಹಲಿ: ಭಾರತ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ, ಬೆಂಗಳೂರಿನ ಸಂಜನಾ ರಮೇಶ್‌ ಕ್ಯಾಲಿಫೋರ್ನಿಯಾದ ನಾರ್ತರ್ನ್‌ ಅರಿಜೋನಾ ಯುನಿವರ್ಸಿಟಿಯ ಡಿವಿಷನ್‌–1 ವಿದ್ಯಾರ್ಥಿವೇತನಕ್ಕೆ ಪಾತ್ರರಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾಗಿರುವ ಭಾರತದ ಎರಡನೇ ಆಟಗಾರ್ತಿ ಆಗಿದ್ದಾರೆ ಅವರು.

2019–20ರ ಅವಧಿಗೆ ಸಂಜನಾ ಮತ್ತು ವಾಷಿಂಗ್ಟನ್‌ನ ಎಮಿಲಿ ರಾಡಬೋ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ ಎನ್‌ಎಯು ಮುಖ್ಯ ಕೋಚ್‌ ಲಾರಿ ಪೈನೆ, ‘ಇಬ್ಬರಿಗೆ ಮಾತ್ರ ವಿದ್ಯಾರ್ಥಿವೇತನ ನೀಡಲು ಅವಕಾಶವಿದೆ. ಆದ್ದರಿಂದ ಅತ್ಯಂತ ಪ್ರಭಾವಿ ಆಟಗಾರ್ತಿಯರನ್ನು ಆಯ್ಕೆ ಮಾಡುವ ಸವಾಲು ಇತ್ತು’ ಎಂದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಆಟಗಾರ್ತಿ ಸಂಜನಾ. ಅವರನ್ನು ಆಯ್ಕೆ ಮಾಡಲು ಸಾಧ್ಯವಾದದ್ದಕ್ಕೆ ಖುಷಿಯಾಗಿದೆ. ನಮ್ಮ ಗೌರವ ಸ್ವೀಕರಿಸಲು ಒಪ್ಪಿಕೊಂಡದ್ದಕ್ಕೆ ಅವರಿಗೆ ಅಭಾರಿಯಾಗಿದ್ದೇವೆ’ ಎಂದು ಪೈನೆ ಹೇಳಿದರು.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಫಿಬಾ 16 ವರ್ಷದೊಳಗಿನವರ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಸಂಜನಾ ಅವರು ತಂಡವು ‘ಬಿ’ ವಿಭಾಗದಿಂದ ‘ಎ’ ವಿಭಾಗಕ್ಕೆ ತೇರ್ಗಡೆಯಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟೂರ್ನಿಯಲ್ಲಿ ಸರಾಸರಿ 6.5 ಪಾಯಿಂಟ್‌ಗಳನ್ನು ಮತ್ತು ಸರಾಸರಿ 7 ರೀಬೌಂಡ್‌ಗಳ ಸಾಧನೆ ಮಾಡಿದ್ದ ಅವರು ನಂತರ ತೈವಾನ್‌ನಲ್ಲಿ ನಡೆದಿದ್ದ ವಿಲಿಯಂ ಜಾನ್ಸ್ ಕಪ್‌ ಟೂರ್ನಿಯಲ್ಲಿ ಭಾರತದ ಪರ ಆಡಿದ್ದರು. ಎನ್‌ಬಿಎ ಅಕಾಡೆಮಿಯು ಮಹಿಳೆಯರಿಗಾಗಿ ನಡೆಸಿದ್ದ ಶಿಬಿರದಲ್ಲೂ ಪಾಲ್ಗೊಂಡಿದ್ದರು. ಬೆಂಗಳೂರಿನ ಪ್ರೊ.ಜಿ.ರಮೇಶ್ ಮತ್ತು ನಿರ್ಮಲಾ ಅವರ ಪುತ್ರಿ ಸಂಜನಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !