ಪಿಬಿಎಲ್‌: ಫೈನಲ್‌ಗೆ ರ‍್ಯಾಪ್ಟರ್ಸ್

7

ಪಿಬಿಎಲ್‌: ಫೈನಲ್‌ಗೆ ರ‍್ಯಾಪ್ಟರ್ಸ್

Published:
Updated:
Prajavani

ಬೆಂಗಳೂರು: ಜಿದ್ದಾಜಿದ್ದಿಯ ಕಾದಾಟಕ್ಕೆ ವೇದಿಕೆಯಾದ ಪ್ರೊ ಬ್ಯಾಡ್ಮಿಂಟನ್ ಲೀಗ್‌ನ (‍ಪಿಬಿಎಲ್‌) ಮೊದಲ ಸೆಮಿಫೈನಲ್‌ ಹಣಾಹಣಿಯಲ್ಲಿ ಗೆದ್ದ ಆತಿಥೇಯ ಬೆಂಗಳೂರು ರ‍್ಯಾಪ್ಟರ್ಸ್ ಪ್ರಶಸ್ತಿ ಸುತ್ತು ಪ್ರವೇಶಿಸಿತು. 

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಅವಧ್‌ ವಾರಿಯರ್ಸ್‌ ವಿರುದ್ಧ 4–2ರಿಂದ ರ‍್ಯಾಪ್ಟರ್ಸ್ ಗೆದ್ದಿತು. ನಿರ್ಣಾಯಕ ಟ್ರಂಪ್ ಪಂದ್ಯದಲ್ಲಿ ಗೆದ್ದ ಮೊಹಮ್ಮದ್ ಅಹ್ಸಾನ್‌ ಮತ್ತು ಹೇಂದ್ರ ಸತ್ಯವಾನ್ ಜೋಡಿ ಕಿದಂಬಿ ಶ್ರೀಕಾಂತ್ ಬಳಗದ ಸತತ ಎರಡನೇ ಫೈನಲ್‌ ಕನಸಿಗೆ ರಂಗು ತುಂಬಿದರು.

ಮೊದಲ ಪಂದ್ಯದಲ್ಲಿ ಆತಿಥೇಯರು ನಿರಾಸೆ ಅನುಭವಿಸಿದರು. ಟ್ರಂಪ್‌ ಪಂದ್ಯದೊಂದಿಗೆ ಕಣಕ್ಕೆ ಇಳಿದ ಅಶ್ವಿನಿ ಪೊನ್ನಪ್ಪ ಮತ್ತು ಮಥಾಯಸ್‌ ಕ್ರಿಸ್ಟಿಯನ್‌ಸೆನ್‌ ಅವರು ಮಾರ್ಕಸ್ ಎಲಿಸ್ ಮತ್ತು ಲಾರೆನ್ ಸ್ಮಿತ್ ಎದುರು 15–7, 15–10ರಿಂದ ಗೆದ್ದು ಎರಡು ಪಾಯಿಂಟ್ ಕಲೆ ಹಾಕಿದರು. ಕ್ರಿಸ್ಟಿಯನ್‌ಸೆನ್‌ ಅವರ ಭರ್ಜರಿ ಸ್ಮ್ಯಾಷ್‌ ಮತ್ತು ಅಶ್ವಿನಿ ಅವರ ಚಾಕಚಕ್ಯ ಆಟ ಮೇಳೈಸಿದಾಗ ಇಂಗ್ಲೆಂಡ್‌ ಜೋಡಿ ದಂಗಾಯಿತು. ಜಂಪ್ ಸ್ಮ್ಯಾಷ್‌ಗೆ ಹೆಸರು ಗಳಿಸಿರುವ ಕ್ರಿಸ್ಟಿಯನ್‌ಸೆನ್‌ ಹೆಚ್ಚು ಆಕ್ರಮಣಕಾರಿ ಆಟವಾಡಿದರು. ಅಶ್ವಿನಿ ತಾಳ್ಮೆಯ ಆಟದ ಮೂಲಕ ಬೆಂಬಲಿಸಿದರು.

ಸಾಯಿ ಪ್ರಣೀತ್ ಆಟದ ವೈಭವ: ಎರಡನೇ ಪಂದ್ಯದಲ್ಲಿ ಡಾಂಗ್ ಕ್ಯೂನ್ ಲೀ ವಿರುದ್ಧ ಸಾಯಿ ಪ್ರಣೀತ್‌ 15–9, 15–4ರಿಂದ ಗೆದ್ದು ರ‍್ಯಾಪ್ಟರ್ಸ್‌ಗೆ ಮೊದಲ ಪಾಯಿಂಟ್ ಗಳಿಸಿಕೊಟ್ಟರು. ಬಲಶಾಲಿ ಸ್ಮ್ಯಾಷ್ ಮತ್ತು ಚಾಣಾಕ್ಷ ಪ್ಲೇಸಿಂಗ್ ಮೂಲಕ ಮಿಂಚಿದ ಅವರು ನೆಟ್‌ ಮಟ್ಟದಲ್ಲಿ ಷಟಲ್‌ ಹಿಂದಿರುಗಿಸಿ ಬ್ಯಾಡ್ಮಿಂಟನ್‌ ಪ್ರಿಯರನ್ನು ಬೆರಗಾಗಿಸಿದರು. 

ಕಿದಂಬಿ ಶ್ರೀಕಾಂತ್ 15–7, 15–10ರಿಂದ ವಾನ್ ಹೊ ಸಾನ್‌ ಅವರನ್ನು ಮಣಿಸಿ ಹಣಾಹಣಿಯಲ್ಲಿ 2–2ರ ಸಮಬಲ ಸಾಧಿಸಿದರು. ಪುರುಷರ ಮಿಶ್ರ ಡಬಲ್ಸ್ ಪಂದ್ಯ ಪ್ರೇಕ್ಷಕರಿಗೆ ರೋಮಾಂಚನ ನೀಡಿತು. ಅಹ್ಸಾನ್‌ ಮತ್ತು ಸತ್ಯವಾನ್ 15–14, 15–9ರಲ್ಲಿ ಯಾಂಗ್ ಲೀ ಮತ್ತು ಮಥಾಯಸ್‌ ಕ್ರಿಸ್ಟಿಯನ್‌ಸೆನ್‌ ಎದುರು ಗೆಲುವು ಸಾಧಿಸುತ್ತಿದ್ದಂತೆ ರ‍್ಯಾಪ್ಟರ್ಸ್‌ ಡಗ್ ಔಟ್‌ನಲ್ಲಿ ಸಂಭ್ರಮ ಅಲೆಯಾಡಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !