ಸಿಂಧು, ಪ್ರಣಯ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

7
ಸೈನಾ ನೆಹ್ವಾಲ್‌ಗೆ ಚೆನ್ ಯೂಫಿ ಎದುರು ಸೋಲು; ಹೊರ ಬಿದ್ದ ಸಮೀರ್ ವರ್ಮಾ

ಸಿಂಧು, ಪ್ರಣಯ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

Published:
Updated:

ಜಕಾರ್ತ: ಎದುರಾಳಿಯನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಪಿ.ವಿ.ಸಿಂಧು ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಅವರು ಜಪಾನ್‌ನ ಅಯಾ ಒಹೋರಿ ಅವರನ್ನು 21–17, 21–14ರಿಂದ ಮಣಿಸಿದರು. ಪುರುಷರ ವಿಭಾಗದಲ್ಲಿ ಎಚ್‌.ಎಸ್‌. ಪ್ರಣಯ್‌ ಪ್ರಯಾಸದ ಗೆಲುವಿನ ಮೂಲಕ 16ರ ಘಟ್ಟಕ್ಕೆ ಲಗ್ಗೆ ಇಟ್ಟರು. ಆದರೆ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ನಿರಾಸೆ ಮೂಡಿಸಿದರು.

23ನೇ ಜನ್ಮದಿನ ಆಚರಿಸಿಕೊಂಡ ಸಿಂಧು ಅವರು ಒಹೋರಿ ವಿರುದ್ಧ ಆರಂಭದಲ್ಲೇ ಪ್ರಾಬಲ್ಯ ಸಾಧಿಸಿದರು. 36 ನಿಮಿಷಗಳಲ್ಲಿ ಮುಕ್ತಾಯಗೊಂಡ ಪಂದ್ಯದ ಮೊದಲ ಗೇಮ್‌ನಲ್ಲಿ ಎದುರಾಳಿಯಿಂದ ಸ್ವಲ್ಪ ಪ್ರತಿರೋಧ ಎದುರಾದರೂ ಮುಂದಿನ ಗೇಮ್‌ನಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟವಾಡಿದ ಸಿಂಧು ಸುಲಭವಾಗಿ ಮುಂದಿನ ಸುತ್ತಿಗೆ ಸಾಗಿದರು.

ಈ ಆಟಗಾರ್ತಿಯ ವಿರುದ್ಧ ಇದು ಸಿಂಧು ಅವರ ನಿರಂತರ ಐದನೇ ಜಯವಾಗಿದೆ. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ಚೀನಾದ ಬಿಂಗ್‌ಜಯೊ ಅವರನ್ನು ಎದುರಿಸುವರು.‌

ಪ್ರಣಯ್‌ಗೆ ಭರ್ಜರಿ ಜಯ
ಮೊದಲ ಸುತ್ತಿನಲ್ಲಿ ಒಲಿಂಪಿಕ್ ಚಾಂಪಿಯನ್‌ ವ್ಯಾನ್‌ ಡ್ಯಾನ್‌ ಅವರನ್ನು ಮಣಿಸಿದ್ದ ಪ್ರಣಯ್‌ ಗುರುವಾರ ವಾಂಗ್ ತ್ಸು ವೀ ಅವರನ್ನು ಮಣಿಸಿದರು. ಒಂದು ತಾಸು ನಡೆದ ಹಣಾಹಣಿಯ ಮೊದಲ ಗೇಮ್‌ನಲ್ಲಿ 21–23ರ ಹಿನ್ನಡೆ ಅನುಭವಿಸಿದ ಪ್ರಣಯ್‌ ಚೇತರಿಸಿಕೊಂಡು 21–15, 21–13ರಲ್ಲಿ ಜಯ ಸಾಧಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಅವರಿಗೆ ಚೀನಾದ ಶಿ ಯೂಗಿ ಎದುರಾಳಿ.

ಮೊದಲ ಗೇಮ್‌ನ ಆರಂಭದಲ್ಲಿ ಪ್ರಣಯ್‌ 14–10ರ ಹಿನ್ನಡೆ ಸಾಧಿಸಿದ್ದರು. ನಂತರ ನಿರಂತರ ಮೂರು ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡು ಹಿನ್ನಡೆಯನ್ನು ಕುಗ್ಗಿಸಿದರು. ಆದರೆ ಪಟ್ಟು ಬಿಡದ ವಾಂಗ್‌ 17–14ರಿಂದ ಮುಂದೆ ಸಾಗಿದರು. ಪ್ರಣಯ್ ಕೂಡ ಪ್ರತ್ಯುತ್ತರ ನೀಡಿದರು. ಹೀಗಾಗಿ ಗೇಮ್‌ 19–19ರಿಂದ ಸಮವಾಯಿತು. ನಂತರ ವಾಂಗ್ ಅವರು ಹಿಡಿತ ಬಿಗಿಗೊಳಿಸಿ ಗೇಮ್‌ ಗೆದ್ದರು.

ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ ಭರ್ಜರಿ ತಿರುಗೇಟು ನೀಡಿದರು. ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಅರು 11–8ರಿಂದ ಎದುರಾಳಿಯನ್ನು ಹಿಂದಿಕ್ಕಿದರು. ನಂತರ ಈ ಮುನ್ನಡೆ 17–12ಕ್ಕೆ ಏರಿತು. ಹೀಗಾಗಿ ಗೇಮ್‌ನಲ್ಲಿ ಸುಲಭ ಜಯ ತಮ್ಮದಾಗಿಸಿಕೊಂಡರು.

ನಿರ್ಣಾಯಕ ಗೇಮ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಪ್ರಣಯ್‌ಗೆ ಉತ್ತರ ನೀಡಲು ವಾಂಗ್ ಪರದಾಡಿದರು.

ವಿಶ್ವದ ಅಗ್ರ ಕ್ರಮಾಂಕದ ಆಟಗಾರ ವಿಕ್ಟರ್‌ ಅಕ್ಸೆಲ್ಸನ್ ಅವರ ವಿರುದ್ಧ ಕಣಕ್ಕೆ ಇಳಿದ ಭಾರತದ ಸಮೀರ್ ವರ್ಮಾ 15–21, 14–21ರಿಂದ ಸೋತು ಹೊರಬಿದ್ದರು.

ಒಲಿಂಪಿಕ್‌ ಪದಕ ವಿಜೇತೆ ಸೈನಾ ನೆಹ್ವಾಲ್ ಕೂಡ ಭಾರತ ಪಾಳಯದಲ್ಲಿ ನಿರಾಸೆ ಮೂಡಿಸಿದರು. 40 ನಿಮಿಷಗಳ ಹಣಾಹಣಿಯಲ್ಲಿ ಅವರು 18–21, 15–21ರಿಂದ ಸೋಲೊಪ್ಪಿಕೊಂಡರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !