ಮಂಗಳವಾರ, ಮಾರ್ಚ್ 28, 2023
30 °C

ಸಾಯ್ ಕೋಚಿಂಗ್ ಕೋರ್ಸ್‌ಗೆ ಒಲಿಂಪಿಯನ್‌ ಮನೋಜ್, ಬಜರಂಗ್ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಯನ್ನರಾದ ಬಾಕ್ಸರ್ ಮನೋಜ್‌ ಕುಮಾರ್, ರೋವರ್ ಬಜರಂಗ್ ಲಾಲ್‌ ತಾಖರ್, ಅಥ್ಲೀಟ್ ಕುಞು ಮೊಹಮ್ಮದ್ ಹಾಗೂ ಹಾಕಿ ಪಟು ಪೂನಂ ರಾಣಿ ಅವರು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಕೋಚಿಂಗ್ ಡಿಪ್ಲೋಮಾ ಕೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡವರು ಸೇರಿದಂತೆ ‍ಪ್ರಮುಖ ಕ್ರೀಡಾಪಟುಗಳಿಗೆ ಕೋರ್ಸ್‌ಗೆ ಸೇರಲು ನೇರ ಅವಕಾಶ ಕಲ್ಪಿಸಿ ಸಾಯ್ ನಿಯಮಗಳಿಗೆ ತಿದ್ದುಪಡಿ ತಂದಿರುವುದು ಕ್ರೀಡಾಪಟುಗಳಲ್ಲಿ ಭರವಸೆ ಮೂಡಿಸಿದ್ದು ಒಟ್ಟು 33 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಮನೋಜ್ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಬಜರಂಗ್ ಏಷ್ಯನ್ ಗೇಮ್ಸ್‌ನಲ್ಲಿ ಮೂರು ಪದಕಗಳನ್ನು ಗಳಿಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರು ಪಾಲ್ಗೊಂಡಿದ್ದರು.

ಕುಞು ಮೊಹಮ್ಮದ್ ಮತ್ತು ಪೂನಂ ರಾಣಿ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮೊಹಮ್ಮದ್ 2017ರ ಏಷ್ಯನ್ ಚಾಂಪಿಯನ್‌ಷಿಪ್‌ನ 4x400 ಮೀಟರ್ಸ್ ರಿಲೆಯಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. ಅವರು ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನೂ ಗಳಿಸಿದ್ದಾರೆ. ಪೂನಂ ರಾಣಿ 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ತಂಡದಲ್ಲಿದ್ದರು.

’15 ವಿಭಾಗಗಳಲ್ಲಿ 33 ಮಂದಿ ಆಯ್ಕೆ ಬಯಸಿದ್ದಾರೆ. ಇವರೆಲ್ಲರೂ ಎ–1 ವಿಭಾಗದಲ್ಲಿ ಸೇರಿದ್ದು ನೇರ ಪ್ರವೇಶ ನೀಡಲಾಗುವುದು. ಒಟ್ಟು 23 ವಿಭಾಗಗಳಲ್ಲಿ 46 ಮಂದಿಗೆ ನೇರ ಪ್ರವೇಶ ಸಿಗಲಿದೆ. ಇವರಲ್ಲಿ ತಲಾ ಒಬ್ಬರು ಪುರುಷ ಮತ್ತು ಮಹಿಳೆ ಇರುತ್ತಾರೆ‘ ಎಂದು ಸಾಯ್ ಪ್ರಕಟಣೆ ತಿಳಿಸಿದೆ.

’ಏಷ್ಯನ್ ಗೇಮ್ಸ್ ಅಥವಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮಾತ್ರ ಈ ಹಿಂದೆ ಅವಕಾಶ ನೀಡಲಾಗುತ್ತಿತ್ತು. ಅದನ್ನು ಬದಲಿಸಿ ಈಗ ಈ ಎರಡು ಕೂಟಗಳಲ್ಲಿ ಯಾವುದೇ ಪದಕ ಗೆದ್ದವರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಭಾರತ ಕ್ರೀಡಾ ಪ್ರಾಧಿಕಾರ ಇದೇ ಮೊದಲ ಬಾರಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಸಹಯೋಗದಲ್ಲಿ ಪರೀಕ್ಷೆ ನಡೆಸಲಿದ್ದು ದೇಶದ 17 ಕೇಂದ್ರಗಳಲ್ಲಿ ಸೆಪ್ಟೆಂಬರ್ 12ರಂದು ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಇಲ್ಲಿಯ ವರೆಗೆ 566 ಮಂದಿಗೆ ಮಾತ್ರ ಕೋರ್ಸ್‌ಗೆ ಸೇರಲು ಅವಕಾಶವಿತ್ತು. ಈ ವರ್ಷದಿಂದ ಈ ಸಂಖ್ಯೆಯನ್ನು 725ಕ್ಕೆ ಏರಿಸಲಾಗಿದೆ. ಇದಕ್ಕೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಅಕಾಡೆಮಿಕ್ ಕೌನ್ಸಿಲ್ ಅನುಮತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.