ಭಾನುವಾರ, ಆಗಸ್ಟ್ 1, 2021
26 °C

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಮೂವರು ಬಾಕ್ಸರ್‌ಗಳ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ –19ರ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಮೂವರು ಬಾಕ್ಸರ್‌ಗಳನ್ನು ವಿಚಾರಣೆಗೆ ಒಳಪಡಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ನಿರ್ಧರಿಸಿದೆ. ತಪ್ಪಿತಸ್ಥರು ಎಂದು ಕಂಡುಬಂದರೆ ಬಾಕ್ಸರ್‌ಗಳ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ವಿಕಾಸ್ ಕೃಷ್ಣ ಒಳಗೊಂಡಂತೆ ಈ ಮೂವರು ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌ಐಎಸ್) ಇದ್ದಾಗ ಇತರ ಅಥ್ಲೀಟ್‌ಗಳ ಜೊತೆ ಸೇರಿದ್ದರು ಎಂದು ಆರೋಪಿಸಲಾಗಿದೆ. 

ವೃತ್ತಿಪರ ಬಾಕ್ಸರ್ ನೀರಜ್ ಗೋಯತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸತೀಶ್ ಕುಮಾರ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿರುವ ಇತರರು. ಈ ಪೈಕಿ ವಿಕಾಸ್ (69 ಕೆಜಿ) ಮತ್ತು ಸತೀಶ್ (+91 ಕೆಜಿ) ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿದ್ದಾರೆ.

’ಸದ್ಯ ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಬಾಕ್ಸರ್‌ಗಳ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾಯ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ನೀರಜ್ ‘ನಾನು ಮತ್ತು ವಿಕಾಸ್ ಉಪಾಹಾರ ಗೃಹಕ್ಕೆ ತೆರಳುವ ಬದಲು ಹೊರಾಂಗಣಕ್ಕೆ ತೆರಳಿದ್ದೆವು. ಇದಕ್ಕೆ ಎನ್‌ಐಎಸ್ ಕಾರ್ಯನಿರ್ವಾಹಕ ನಿರ್ದೇಶಕ ರಾಜ್ ಸಿಂಗ್ ಬಿಷ್ನೋಯ್ ಅವರ ಅನುಮತಿ ಪಡೆದುಕೊಂಡಿದ್ದೆವು. ನಮ್ಮ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದ ಕಾರಣ ಅನುಮತಿ ಕೋರಿದ್ದೆವು’ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಸತೀಶ್ ಅವರ ಪರೀಕ್ಷಾ ವರದಿಯೂ ನೆಗೆಟಿವ್ ಆಗಿದೆ. ಅವರು ಉಪಾಹಾರ ಗೃಹಕ್ಕೆ ತೆರಳಿದ್ದರು. ವಾಸ್ತವದಲ್ಲಿ ಅಲ್ಲಿಗೆ ಹೋಗಬಾರದು ಎಂದು ಅವರಿಗೆ ತಿಳಿದಿರಲಿಲ್ಲ. ನಾವು ಮೂವರು ಒಂದು ಕಡೆ ಸೇರಿದ್ದನ್ನು ಗಮನಿಸಿದ ಕೆಲ ವೇಟ್‌ಲಿಫ್ಟರ್‌ಗಳು ಮತ್ತು ಅಥ್ಲೀಟ್‌ಗಳು ದೂರು ಸಲ್ಲಿಸಿದ್ದರು’ ಎಂದು ಅವರು ತಿಳಿಸಿದ್ದಾರೆ.

‘ನಾನು, ಸತೀಶ್ ಮತ್ತು ವಿಕಾಸ್ ಜುಲೈ ಒಂದರಂದು ಇಲ್ಲಿಗೆ ಬಂದಿದ್ದೆವು. ಅದಕ್ಕೂ ಮೊದಲು ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದೆವು. ಇಲ್ಲಿ ಪ್ರತ್ಯೇಕವಾಸದಲ್ಲಿ ಇರಲು ಹೇಳಿದ್ದು ಅದನ್ನು ಪಾಲಿಸುತ್ತಿದ್ದೇವೆ’ ಎಂದು ನೀರಜ್ ವಿವರಿಸಿದ್ದಾರೆ.

ಸೋಂಕು ತಗುಲದಂತೆ ಎಚ್ಚರ ವಹಿಸಿ ಸಾಯ್ ವಿವಿಧ ಕ್ರೀಡೆಗಳ ತರಬೇತಿ ಶಿಬಿರಗಳನ್ನು ಈಗಾಗಲೇ ಆರಂಭಿಸಿದೆ. ಬಾಕ್ಸಿಂಗ್ ಶಿಬಿರ ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಒಲಿಂಪಿಕ್ಸ್‌ಗೆ ಆಯ್ಕೆಯಾದವರಿಗೆ ಶಿಬಿರದಲ್ಲಿ ಆದ್ಯತೆ ನೀಡಲಾಗುತ್ತದೆ. ಏಳು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ಇನ್ನೂ ಕೈಸೇರಬೇಕಷ್ಟೆ. ತರಬೇತಿಯನ್ನು ರಿಂಗ್‌ನಲ್ಲಿ ನಡೆಸದೇ ಇರಲು ನಿರ್ಧರಿಸಿದ್ದು ಇತರ ಬಾಕ್ಸರ್‌ಗಳು ಬಳಸುವ ಯಾವುದೇ ವಸ್ತುವನ್ನು ಮುಟ್ಟಬಾರದು ಎಂದು ಸೂಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು