ಸೋಮವಾರ, ಸೆಪ್ಟೆಂಬರ್ 16, 2019
27 °C
ಪ್ರೊ ಕಬಡ್ಡಿ ಲೀಗ್‌ ಬೆಂಗಳೂರು ಲೆಗ್‌: ಸಿದ್ಧಾರ್ಥ್ ದೇಸಾಯಿ ಹೋರಾಟ ವ್ಯರ್ಥ

ರೇಡರ್‌ಗಳ ಮೇಲಾಟ: ಬುಲ್ಸ್‌ಗೆ ರೋಚಕ ಜಯ

Published:
Updated:
Prajavani

ಬೆಂಗಳೂರು: ಮೈನವಿರೇಳಿಸುವ ಪೈಪೋಟಿ ಕಂಡ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 40–39 ರಿಂದ ತೆಲುಗು ಟೈಟನ್ಸ್‌ ತಂಡವನ್ನು ಒಂದು ಪಾಯಿಂಟ್‌ನಿಂದ ಸೋಲಿಸಿತು. ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಪ್ರೊ ಕಬಡ್ಡಿ ಲೀಗ್ ಪಂದ್ಯ ಪವನ್‌ ಕುಮಾರ್‌ ಶೆರಾವತ್‌ ಮತ್ತು ಸಿದ್ಧಾರ್ಥ್‌ ‘ಬಾಹುಬಲಿ’ ದೇಸಾಯಿ ನಡುವಣ ಮೇಲಾಟದಂತೆ ಕಂಡಿತು. ಅಂತಿಮವಾಗಿ ಆತಿಥೇಯ ತಂಡ ಯಶಸ್ಸು ಗಳಿಸಿತು.

ಪಂದ್ಯ ಆ ಹಾದಿಯಲ್ಲೇ ಸಾಗಿತ್ತು ಎಂಬುದಕ್ಕೆ ಇಬ್ಬರೂ ತಲಾ 23 ಪಾಯಿಂಟ್ಸ್‌ ಗಳಿಸಿದ್ದು ಸಾಕ್ಷಿಯಾಯಿತು. ಕೊನೆಯ 11 ರೇಡ್‌ಗಳನ್ನು ಇವರಿಬ್ಬರೇ ಮಾಡಿದ್ದು ವಿಶೇಷ. ಪವನ್‌ ಅವರ ಪ್ರತಿಯೊಂದು ರೇಡ್‌ಗೂ ಪ್ರೇಕ್ಷಕರು ಹರ್ಷೋದ್ಗಾರದೊಡನೆ ಪ್ರೋತ್ಸಾಹಿಸಿದರು. ಅವರೂ ತವರಿನ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ.

ವಿರಾಮದ ವೇಳೆ 15–12 ರಲ್ಲಿ ಬುಲ್ಸ್‌ ತಂಡ ಮುನ್ನಡೆ ಸಾಧಿಸಿತ್ತು. ರೋಹಿತ್‌ ಕುಮಾರ್‌ ಐದು ರೇಡಿಂಗ್‌ ಪಾಯಿಂಟ್ಸ್‌ ಗಳಿಸಿದರು. ಟೈಟನ್ಸ್‌ ಪರ ಅಬೊಜರ್‌ ಮಿಗಾನಿ ನಾಲ್ಕು ಟ್ಯಾಕ್ಲಿಂಗ್‌ ಪಾಯಿಂಟ್ಸ್‌ ತಂದುಕೊಟ್ಟರು.

ಬುಲ್ಸ್ ತಂಡ ದ್ವಿತೀಯಾರ್ಧದ ಹೆಚ್ಚಿನ ಅವಧಿಯಲ್ಲಿ ಐದು ಆರು ಪಾಯಿಂಟ್‌ಗಳ ಲೀಡ್‌ ಸಾಧಿಸಿತ್ತು. ಮೂರು ನಿಮಿಷಗಳಿದ್ದಾಗ ಸಿದ್ಧಾರ್ಥ್‌ ಮೂವರನ್ನು ಔಟ್‌ ಮಾಡುವ ಮೂಲಕ ಸ್ಕೋರ್‌ 36–36ರಲ್ಲಿ ಸಮನಾಯಿತು. ನಂತರ ಸಮಬಲದಲ್ಲೇ ಸಾಗಿತು. ಪವನ್‌ ಪಂದ್ಯ ಮುಗಿಯಲು ಒಂದು ನಿಮಿಷ ಇದ್ದಾಗ ಎರಡು ಪಾಯಿಂಟ್‌ ತಂದುಕೊಟ್ಟರು. ಬುಲ್ಸ್‌ 40–38ರಲ್ಲಿ ಮುನ್ನಡೆಯಿತು. ಸಿದ್ಧಾರ್ಥ್‌  ಕೊನೆಯ ರೇಡ್‌ನಲ್ಲಿ ಈ ಅಂತರವನ್ನು ಒಂದು ಪಾಯಿಂಟ್‌ ಕಡಿಮೆ ಮಾಡಲಷ್ಟೇ ಶಕ್ತರಾದಾಗ, ಬುಲ್ಸ್‌ ಅಭಿಮಾನಿಗಳು ಸಂಭ್ರಮ ಆಚರಿಸಿದರು.

ಯೋಧಾ ಜಯಭೇರಿ: ಮತ್ತೊಂದು ಪಂದ್ಯದಲ್ಲಿ ಶ್ರೀಕಾಂತ್‌ ಜಾಧವ್‌ ಅವರ ಸೊಗಸಾದ ರೇಡಿಂಗ್‌ನಲ್ಲಿ ಯುಪಿ ಯೋಧಾ ಮಿನುಗಿತು.  ಪಟ್ನಾ ಪೈರೇಟ್ಸ್ ಎದುರಿನ ಪಂದ್ಯದಲ್ಲಿ 41–29 ಪಾಯಿಂಟ್‌ಗಳಿಂದ ಜಯಭೇರಿ ಮೊಳಗಿಸಿತು. ಪ್ರದೀಪ್‌ ನರ್ವಾಲ್‌ ದಾಖಲಿಸಿದ 14 ಪಾಯಿಂಟ್‌ಗಳು ವ್ಯರ್ಥವಾದವು.

ಪ್ರದೀಪ್‌ ಅವರು ಪಟ್ನಾ ಪರ ಖಾತೆ ತೆರೆದರು. ಆ ಮೂಲಕ ಈ ಋತುವಿನಲ್ಲಿ 100 ರೇಡ್‌ ಪಾಯಿಂಟ್‌ ಮೈಲುಗಲ್ಲು ತಲುಪಿದರು. ಶ್ರೀಕಾಂತ್‌ ಜಾಧವ್‌ ಅವರು ಯೋಧಾ ಪರ ಮೊದಲ ರೇಡ್‌ ಮಾಡಿ ಎರಡು ಪಾಯಿಂಟ್‌ ತಂದರು. ಮುನ್ನಡೆ ಕಾಯ್ದುಕೊಳ್ಳುತ್ತಾ ಸಾಗಿತು ಯೋಧಾ.

ಪಂದ್ಯದ ಏಳನೇ ನಿಮಿಷದಲ್ಲಿ ಪಟ್ನಾ ಆಲೌಟ್‌ ಆಗುವ ಮೂಲಕ ಯೋಧಾ ಮುನ್ನಡೆ 9–2ಕ್ಕೆ ತಲುಪಿತು. 11ನೇ ನಿಮಿಷದಲ್ಲಿ ಸೂಪರ್‌ ರೇಡ್‌ ಮಾಡಿದ ಜಾಧವ್‌ ತಮ್ಮ ತಂಡಕ್ಕೆ 13–5 ಮುನ್ನಡೆ ತಂದರು. ಬಳಿಕ ಯೋಧಾ ನಾಯಕ ನಿತೇಶ್‌ ಕುಮಾರ್‌ ಮಾಡಿದ ಟ್ಯಾಕಲ್‌ ಆಕರ್ಷಕವಾಗಿತ್ತು. ಇದರಲ್ಲಿ ಬಂಧಿಯಾದದ್ದು ಪ್ರದೀಪ್‌.

ಪ್ರತಿಯಾಗಿ ಸುರೇಂದರ್‌ ಗಿಲ್‌ ಅವರನ್ನು ಟ್ಯಾಕಲ್‌ ಮಾಡಿದ ಪಟ್ನಾ ತಿರುಗೇಟು ನೀಡಿತು. ಸೂಪರ್‌ ರೇಡ್‌ ಮಾಡಿದ ಪ್ರದೀಪ್‌, ತಮ್ಮ ತಂಡದ ಹಿನ್ನಡೆ ತಗ್ಗಿಸಿದರು. ಮೊದಲಾರ್ಧ ಮುಕ್ತಾಯಕ್ಕೆ ಪಟ್ನಾ ಪಡೆ 14–16ರ ಹಿನ್ನಡೆಯಲ್ಲಿತ್ತು.

ದ್ವಿತಿಯಾರ್ಧದ ಮೊದಲ ನಿಮಿಷದಲ್ಲೇ ಯೋಧಾ ಆಲೌಟ್‌ ಆಯಿತು. ಪಟ್ನಾಗೆ ಅಲ್ಪ ಮುನ್ನಡೆಯೂ ಸಿಕ್ಕಿತು. ದ್ವಿತಿಯಾರ್ಧದ 12ನೇ ನಿಮಿಷದಲ್ಲಿ ಯೋಧಾ ತಂಡದ ನಿತೇಶ್‌ಕುಮಾರ್‌, ಪ್ರದೀಪ್‌ ಅವರನ್ನು ಮತ್ತೊಮ್ಮೆ ಟ್ಯಾಕಲ್‌ ಮಾಡಿದರು.

ಈ ವೇಳೆ ಪಂದ್ಯ 22–22ರ ಸಮಬಲದಲ್ಲಿತ್ತು. ಸುರೇಂದರ್‌ ಗಿಲ್‌ ಒಂದು ರೇಡ್‌ ಪಾಯಿಂಟ್‌ ಗಳಿಸಿ ಯೋಧಾಗೆ ಮುನ್ನಡೆ ತಂದರು.

ಪಂದ್ಯ ಮುಕ್ತಾಯಕ್ಕೆ ಏಳು ನಿಮಿಷಗಳಿರುವಾಗ ಪಟ್ನಾ ಮತ್ತೊಮ್ಮೆ ಆಲೌಟ್‌ ಆಯಿತು.

ಯೋಧಾ ಈ ವೇಳೆ 23–29ರಿಂದ ಮುಂದಿತ್ತು. ಪಂದ್ಯ ಮುಕ್ತಾಯಕ್ಕೆ ಒಂದು ನಿಮಿಷ ಉಳಿದಿರುವಾಗ ಮೂರನೇ ಬಾರಿ ಆಲೌಟ್‌ ಆದ ಪಟ್ನಾಗೆ ಸೋಲು ಖಚಿತವಾಯಿತು. ಬಳಿಕ ಅದು ಚೇತರಿಸಿಕೊಳ್ಳಲು ಯತ್ನಿಸಿದರೂ ಸಮಯ ಮೀರಿತ್ತು. 

Post Comments (+)