ಚಾಡ್ಲಿ ಮತ್ತು ಗುರು...

7

ಚಾಡ್ಲಿ ಮತ್ತು ಗುರು...

Published:
Updated:

ಎರಡು ವರ್ಷಗಳಾದವು; ಟಾಬಿ ಆಲ್ಡರ್ ವೀರೆಲ್ಡ್ ಹಾಗೂ ಜಾನ್ ವರ್ಟೊಂಗೆನ್ ಎಂಬಿಬ್ಬರು, ಬೆಲ್ಜಿಯಂ ದೇಶದ ಸ್ನೇಹಿತರು ಬೆಂಚುಕಲ್ಲಿನ ಮೇಲೆ ಕುಳಿತು ಸ್ನೇಹಿತನ ಮನವೊಲಿಸಲು ಯತ್ನಿಸಿ. ನೇಸರ್ ಚಾಡ್ಲಿ ಎಂಬುವವನೇ ಅವರ ಸ್ನೇಹಿತ. ಟ್ಯಾಟೆನ್‌ಹ್ಯಾಮ್ ಹಾಟ್‌ಸ್ಪರ್ ಎಂಬ ಕ್ಲಬ್‌ನಿಂದ ದಿ ಹಾಥಾರ್ನ್ಸ್ ಎಂಬ ಇನ್ನೊಂದು ಸಣ್ಣ ಕ್ಲಬ್‌ಗೆ ಹೋಗಲು ಆ ಫುಟ್‌ಬಾಲ್ ಆಟಗಾರ ನಿರ್ಧರಿಸಿ ಆಗಿತ್ತು. ಅದನ್ನು ಬದಲಿಸಲು ಆ ಸ್ನೇಹಿತರು ಪರದಾಡಿದ್ದು. ಹಾಥಾರ್ನ್ಸ್ ಕ್ಲಬ್ ಸುಮಾರು 116 ಕೋಟಿ ರೂಪಾಯಿ ಮೊತ್ತಕ್ಕೆ (1.3 ಕೋಟಿ ಪೌಂಡ್) ಆ ಆಟಗಾರನ ಖರೀದಿಗೆ ಮುಂದಾಗಿತ್ತು. ಅವನ ಆಟದ ವೈಖರಿ ಹೇಗಿದ್ದೀತು ಎನ್ನುವುದನ್ನು ನಾವು ಊಹಿಸಿಕೊಳ್ಳಬಹುದು. 

ಪ್ರತಿಭೆಯಿದ್ದೂ ಚಾಡ್ಲಿ ತನ್ನ ಮೂಲ ಕ್ಲಬ್ ತೊರೆಯಲು ಕಾರಣ ಇನ್ನಷ್ಟು ಫುಟ್‌ಬಾಲ್ ಆಡಬೇಕು ಎನ್ನುವುದೇ ಆಗಿತ್ತು.
‘ಹಣ ಮಾಡಲೆಂದು ನಾನು ಫುಟ್‌ಬಾಲ್ ಆಡಿದವನೇ ಅಲ್ಲ. ಬಾಲ್ಯದಿಂದ ಅದು ನನ್ನ ಇಷ್ಟದ ಆಟ. ಮನಸ್ಸಿಗೆ ನೆಮ್ಮದಿ ಸಿಗುವ ಕ್ಲಬ್ ಬೇಕಿತ್ತು. ಅದಕ್ಕೇ ಸಣ್ಣ ಕ್ಲಬ್‌ನಲ್ಲಿ ಇನ್ನಷ್ಟು ಹೆಚ್ಚು ಆಟ ಆಡಬಹುದು ಎಂದು ಬದಲಾವಣೆಯ ತೀರ್ಮಾನಕ್ಕೆ ಬಂದೆ’ ಎಂದು ಆಗ ಚಾಡ್ಲಿ ಪ್ರತಿಕ್ರಿಯಿಸಿದ್ದ. ಬೆಂಚಿನ ಮೇಲೆ ದೂಳು ಹೊಡೆಯುತ್ತಾ ಕುಳಿತು, ಆಟವನ್ನು ದೂರದಿಂದ ನೋಡುವುದನ್ನು ಅವನೆಂದೂ ಇಷ್ಟಪಟ್ಟವನಲ್ಲ.

ಟೋನಿ ಪ್ಯುಲಿಸ್ ಎಂಬ ಅನನ್ಯ ತರಬೇತುದಾರ ಹಾಥಾರ್ನ್ಸ್ ಕ್ಲಬ್ ಆಟಗಾರರಿಗೆ ಪಾಠ ಕಲಿಸುತ್ತಿದ್ದರು. ಹೇಳಿಕೊಳ್ಳುವಷ್ಟು ಪ್ರತಿಭಾವಂತರಲ್ಲದವರನ್ನು ಹೆಕ್ಕಿ, ಅವರಲ್ಲಿ ಚಾಲಾಕಿತನ ತುಂಬುವುದು ಅವರ ಜಾಯಮಾನ. ಫುಟ್‌ಬಾಲ್‌ನಲ್ಲಿ ಭದ್ರತೆಯ ಕೋಟೆ ಕಟ್ಟುವುದು ಹೇಗೆ ಎಂದು ಮೊದಲು ಹೇಳಿಕೊಡುತ್ತಿದ್ದ ಅವರಿಗೆ ಆಕ್ರಮಣದ ದಾರಿ ಅಪಥ್ಯವಾಗಿತ್ತು. ದಾಳಿಕೋರ ಮನಸ್ಥಿತಿಯನ್ನು ಅವರು ಒಪ್ಪುತ್ತಲೇ ಇರಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಫುಟ್‌ಬಾಲ್ ಆಡುವಾಗ ಎದುರಾಳಿಗಳಿಂದ ಸಾಂಸ್ಕೃತಿಕ ದಾಳಿ ನಡೆಯುತ್ತದೆ. ಅದನ್ನು ಎದುರಿಸಲು ರಕ್ಷಣಾ ತಂತ್ರ ಬಲವಾಗಿರಬೇಕು ಎಂದೇ ನಂಬಿದ್ದರು. ಹಾಗೆ ನಂಬಿದ್ದರಿಂದಲೇ ಅವರು ತರಬೇತುದಾರನ ಕೆಲಸ ಕಳೆದುಕೊಳ್ಳಬೇಕಾಗಿ ಬಂತು ಎನ್ನುವುದು ಬೇರೆ ವಿಷಯ.

ಟೋನಿ ಹಾಗೂ ಚಾಂಡ್ಲಿ ಎಲ್ಲಕ್ಕೂ ಪಂತ ಕಟ್ಟುತ್ತಿದ್ದರು. ಹಾಗೊಮ್ಮೆ ಪಂತದಲ್ಲಿ ಚಾಡ್ಲಿ ಸೋತಿದ್ದ. ಐಷಾರಾಮಿ ಹೋಟೆಲ್‌ನಲ್ಲಿ ತನ್ನ ತರಬೇತುದಾರನಿಗೆ ಊಟ ಕೊಡಿಸಬೇಕಿತ್ತು. ಅಲ್ಲಿ ಇಬ್ಬರ ನಡುವೆ ನಡೆದ ಸಂವಾದ ಅರ್ಥಪೂರ್ಣವಾಗಿತ್ತು. ‘ಪಂತದಲ್ಲಿ ಯಾರೇ ಸೋಲಲಿ, ಗೆಲ್ಲಲಿ; ಹಾಯಾಗಿ ಕುಳಿತು ಪಾರ್ಟಿ ನೆಪದಲ್ಲಿ ಮಾತಾಡಬಹುದಲ್ಲ’ ಎಂದು ಟೋನಿ ಸದಾ ಹೇಳುತ್ತಿದ್ದರು. ಆಗ ಅವರು ಚಾಡ್ಲಿಗೆ ತುಂಬಾ ಸರಳ ಪ್ರಶ್ನೆ ಕೇಳಿದ್ದರು–‘ನಿನಗೆ ಭಯವಾಗುತ್ತಾ? ಯಾವಾಗ ಆಗುತ್ತದೆ?’

ಚಾಡ್ಲಿ ಸಾಕಷ್ಟು ಯೋಚಿಸಿ ಕೊಟ್ಟ ಉತ್ತರ ಹೀಗಿತ್ತು: ‘ನನಗೆ ತಿಕ್ಕಲು ತಿರುಗಿದಾಗ ಭಯವಾಗುತ್ತೆ’. ಅದಕ್ಕೆ ಟೋನಿ ತಮಗೂ ಹಾಗೆಯೇ ಆಗುತ್ತದೆ ಎನ್ನಬೇಕೆ!

ಇಂಥ ಗುರು–ಶಿಷ್ಯ ಪರಂಪರೆಯನ್ನು ಯಾಕೆ ನೆನಪಿಸಿಕೊಳ್ಳಬೇಕು ಎಂದರೆ, ಮೊನ್ನೆ ವಿಶ್ವಕಪ್ ಫುಟ್‌ಬಾಲ್‌ನ ನಾಕ್‌ಔಟ್ ಪಂದ್ಯದಲ್ಲಿ ಜಪಾನ್ ತಂಡವು ಟೋನಿ ಹೇಳಿಕೊಟ್ಟಂಥದ್ದೇ ಪಾಠವನ್ನು ಪ್ರದರ್ಶಿಸಿತು. ಮೊದಲರ್ಧ ಬೆಲ್ಜಿಯಂ ತಂಡಕ್ಕಾಗಲೀ, ಜಪಾನ್ ತಂಡಕ್ಕಾಗಲೀ ಒಂದೂ ಗೋಲು ಸಿಗಲಿಲ್ಲ. ಆಮೇಲೆ ಜಪಾನ್ ಪಾಲಿಗೆ ಎರಡು ಗೋಲುಗಳು. ಆಟದ ಅವಧಿ ಮುಗಿಯುವ ಹೊತ್ತಿಗೆ ಬೆಲ್ಜಿಯಂಗೂ ಎರಡು. ಹೆಚ್ಚುವರಿ ನಾಲ್ಕು ನಿಮಿಷಗಳ ಆಟ ಇತ್ತಲ್ಲ; ಅದರಲ್ಲಿ ಇನ್ನು ಎಂಟೇ ಸೆಕೆಂಡ್ ಬಾಕಿ ಇರುವಾಗ ಚಾಡ್ಲಿ ಹೊಡೆದ ಗೋಲಿನಿಂದ ಬೆಲ್ಜಿಯಂ ಗೆದ್ದು ಬೀಗಿತು. ಅವನಿಗೆ ಪಾಠ ಹೇಳಿಕೊಟ್ಟಿದ್ದ ಟೋನಿ ಕೂಡ ಒಂದು ಕಾಲದಲ್ಲಿ ಬೆಲ್ಜಿಯಂ ರಾಷ್ಟ್ರೀಯ ತಂಡದ ಫುಟ್‌ಬಾಲ್ ಕೋಚ್ ಆಗಬೇಕು ಎಂಬ ಕನಸು ಕಂಡಿದ್ದವರೇ. ಚಾಡ್ಲಿ ಕೊನೆಯ ಕ್ಷಣದ ಕರಾಮತ್ತಿಗೂ ಇದುವರೆಗೆ ಪ್ರಸ್ತಾಪಿಸಿದ ಗುರು–ಶಿಷ್ಯ ಬಾಂಧವ್ಯಕ್ಕೂ ಗಟ್ಟಿಯಾದ ಕೊಂಡಿಯಂತೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !