ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹಾವಳಿ: ಫೈನಲ್‌ನಿಂದ ಹಿಂದೆ ಸರಿದ ಭಾರತದ ಬಾಕ್ಸರ್‌ಗಳು

ಮನೀಷ್ ಕೌಶಿಕ್‌ಗೆ ಚಿನ್ನ; ಸೆಣಸದ ಸಿಮ್ರನ್‌ಜೀತ್ ಕೌರ್‌
Last Updated 7 ಮಾರ್ಚ್ 2021, 15:06 IST
ಅಕ್ಷರ ಗಾತ್ರ

ನವದೆಹಲಿ: ಸ್ಪೇನ್‌ನ ಕ್ಯಾಸ್ಟೆಲ್ಲೋನ್‌ನಲ್ಲಿ ನಡೆಯುತ್ತಿರುವ ಬಾಕ್ಸಮ್‌ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ಚಿನ್ನದ ಪದಕಗಳ ಕನಸಿಗೆ ಕೋವಿಡ್‌–19 ಪಿಡುಗು ಅಡ್ಡಿಯಾಯಿತು. ಮೂವರು ಪುರುಷ ಬಾಕ್ಸರ್‌ಗಳು ಪ್ರಶಸ್ತಿ ಸುತ್ತಿನ ಸ್ಪರ್ಧೆಯಿಂದ ಭಾನುವಾರ ಹಿಂದೆ ಸರಿದರು.

ಟೋಕಿಯೊ ಒಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸಿರುವ ಆಶಿಶ್ ಕುಮಾರ್ (75 ಕೆಜಿ ವಿಭಾಗ) ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಆಶಿಶ್, ಅವರ ಜೊತೆ ವಸತಿ ಹಂಚಿಕೊಂಡಿದ್ದ ಮೊಹಮ್ಮದ್ ಹುಸಾಮುದ್ದೀನ್‌ (57 ಕೆಜಿ) ಹಾಗೂ ಸುಮಿತ್ ಸಂಗ್ವಾನ್‌ (81 ಕೆಜಿ) ಕೂಡ ಶನಿವಾರ ರಾತ್ರಿ ನಡೆಯಬೇಕಿದ್ದ ಫೈನಲ್ ಬೌಟ್‌ಗಳಲ್ಲಿ ಸೆಣಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಅನಿವಾರ್ಯವಾಗಿ ಬೆಳ್ಳಿ ಪದಕಗಳನ್ನು ಪಡೆಯಬೇಕಾಯಿತು.

‘ಆಶಿಶ್ ಅವರಿಗೆ ಕೋವಿಡ್‌ ಲಕ್ಷಣಗಳಿಲ್ಲ; ಸದ್ಯ ಆರೋಗ್ಯವಾಗಿದ್ದಾರೆ‘ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್‌ನ ಮೂಲಗಳು ತಿಳಿಸಿವೆ.

ಆಶಿಶ್ ಅವರು ಭಾರತಕ್ಕೆ ಮರಳುವ ಮೊದಲು ಕ್ಯಾಸ್ಟೆಲ್ಲೋನ್‌ನಲ್ಲಿ ಎರಡು ವಾರಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಬೇಕಿದೆ. ಹುಸಾಮುದ್ದೀನ್‌ ಹಾಗೂ ಸುಮಿತ್ ಅವರು ತಂಡದೊಂದಿಗೆ ಸೋಮವಾರ ಮುಂಬೈ ಬಂದಿಳಿಯಲಿದ್ದಾರೆ.

ಅನುಭವಿ ಬಾಕ್ಸರ್ ಸತೀಶ್ ಕುಮಾರ್‌ (91+ ಕೆಜಿ) ಅವರಿಗೂ ‘ಅನಾರೋಗ್ಯ’ದ ಕಾರಣ ಫೈನಲ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

ಮನೀಷ್ ಕೌಶಿಕ್‌ಗೆ ಚಿನ್ನ: 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಷ್ ಕೌಶಿಕ್ ಮಾತ್ರ ಭಾರತದ ಪರ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಶನಿವಾರ ರಾತ್ರಿ ನಡೆದ ಫೈನಲ್ ಬೌಟ್‌ನಲ್ಲಿ ಅವರು ಡೆನ್ಮಾರ್ಕ್‌ನ ನಿಕೊಲಾಯ್‌ ಟೆರ್ಟೆರ‍್ಯಾನ್ ಅವರನ್ನು ಮಣಿಸಿದರು.

ಮಹಿಳಾ ವಿಭಾಗದಲ್ಲಿ ಫೈನಲ್ ತಲುಪಿದ್ದ ಸಿಮ್ರನ್‌ ಜೀತ್ ಕೌರ್‌ (60 ಕೆಜಿ) ಕೂಡ ಪ್ರಶಸ್ತಿ ಸುತ್ತಿನ ಸ್ಪರ್ಧೆಯಲ್ಲಿ ಸೆಣಸಲಿಲ್ಲ. ಅವರ ಸೆಮಿಫೈನಲ್ ಎದುರಾಳಿಯಾಗಿದ್ದ ಪ್ಯುರ್ಟೊರಿಕೊದ ಕಿರಿಯಾ ತಾಪಿಯಾ ಅವರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಸಿಮ್ರನ್ ಹಿಂದೆ ಸರಿದರು.

ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಏಕೈಕ ಪುರುಷ ಬಾಕ್ಸರ್‌ ವಿಕಾಸ್ ಕೃಷ್ಣ (69 ಕೆಜಿ) ಅವರು ಸ್ಪೇನ್‌ನ ಯೂಬಾ ಸಿಸ್ಸೊಕೊ ಎದುರು ಮಣಿದರು. ಈ ಹಣಾಹಣಿಯಲ್ಲಿ ವಿಕಾಸ್ ಅವರ ಬಲಗಣ್ಣಿಗೆ ಗಾಯವಾಯಿತು.

ಮಹಿಳಾ ವಿಭಾಗದಲ್ಲಿ ಪೂಜಾ ರಾಣಿ (75 ಕೆಜಿ) ಹಾಗೂ ಜಾಸ್ಮಿನ್‌ (57 ಕೆಜಿ) ಫೈನಲ್‌ ಬೌಟ್‌ಗಳಲ್ಲಿ ಸೋತು ಬೆಳ್ಳಿ ಪದಕಗಳಿಗೆ ಸಮಾಧಾನಪಟ್ಟರು. ಪೂಜಾ ಅವರು ಅಮೆರಿಕದ ಮೆಲಿಸ್ಸಾ ಗ್ರಹಾಂ ಎದುರು, ಜಾಸ್ಮಿನ್ ಅವರು ಇಟಲಿಯ ಇರ್ಮಾ ತೆಸ್ಟಾ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT