ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ: ನೋವು ಮರೆಸಿದ ‘ಬೆಳ್ಳಿ’ ನಗು

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಸಂಕೇತ್‌ ಸರ್ಗರ್‌
Last Updated 30 ಜುಲೈ 2022, 13:05 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಸಂಕೇತ್ ಮಹಾದೇವ್‌ ಸರ್ಗರ್‌ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕದ ಸಿಹಿ ನೀಡಿದ್ದಾರೆ. ನೋವಿನ ನಡುವೆಯೂ ಮಿಂಚಿದ ಅವರು ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಶನಿವಾರ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.

ಒಟ್ಟು 248 ಕೆಜಿ ಭಾರ (113 ಸ್ನ್ಯಾಚ್‌ + 135 ಕ್ಲೀನ್ ಮತ್ತು ಜರ್ಕ್‌) ಎತ್ತಿದ ಸಂಕೇತ್‌, ಚಿನ್ನದ ಪದಕದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. 139 ಕೆಜಿ ಕ್ಲೀನ್ ಮತ್ತು ಜೆರ್ಕ್‌ ವಿಭಾಗದ ಭಾರ ಎತ್ತುವ ವೇಳೆ ಮೊಣಕೈ ನೋವಿನಿಂದ ಬಳಲಿದರು. ಹೀಗಾಗಿ ಅಗ್ರಸ್ಥಾನ ಕೇವಲ ಒಂದು ಕೆಜಿ ಅಂತರದಿಂದ ಕೈತಪ್ಪಿತು.

ಮಲೇಷ್ಯಾದ ಮೊಹಮ್ಮದ್ ಅನಿಕ್‌ (ಒಟ್ಟು 249; 107+142) ಕ್ಲೀನ್ ಮತ್ತು ಜರ್ಕ್‌ ವಿಭಾಗದ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಶ್ರೀಲಂಕಾದ ದಿಲಂಕಾ ಇಸುರು ಕುಮಾರ (225; 105 ಕೆಜಿ+ 120 ಕೆಜಿ) ಕಂಚಿನ ಪದಕ ಜಯಿಸಿದರು.

ಸಂಕೇತ್ ಅವರು ಸ್ನ್ಯಾಚ್‌ ವಿಭಾಗದಲ್ಲಿ ಎದುರಾಳಿಗಳಿಗಿಂತ ಆರು ಕೆಜಿ ತೂಕ ಹೆಚ್ಚಿನ ಸಾಧನೆ ಮಾಡಿದರು.

‘ಭಾರ ಎತ್ತುವ ಪ್ರಯತ್ನದಲ್ಲಿ ನಾನು ಯಾವುದೇ ತಪ್ಪು ಮಾಡಲಿಲ್ಲ. ಬಲ ಮೊಣಕೈ ಮೇಲೆ ಏಕಾಏಕಿ ಹೆಚ್ಚಿನ ಭಾರ ಬಿದ್ದಂತಾಯಿತು. ಹೀಗಾಗಿ ಹತೋಟಿ ತಪ್ಪಿತು‘ ಎಂದು ನೋವು ಮತ್ತು ಖುಷಿ ಎರಡೂ ಭಾವಗಳ ಸಮ್ಮಿಲನದಲ್ಲಿದ್ದ ಸಂಕೇತ್ ನುಡಿದರು.

ಸಂಕೇತ್ ಅವರ ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಭಿನಂದನೆ ಮಹಾಪೂರ ಹರಿದುಬಂದಿದೆ.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಐದು ಚಿನ್ನ ಸೇರಿ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದ್ದರು. ಈ ಬಾರಿಯೂ ಪಾರಮ್ಯ ಮೆರೆಯುವ ಉತ್ಸಾಹದಲ್ಲಿದ್ದಾರೆ.

21 ವರ್ಷದ ಸಂಕೇತ್‌ ಮಹಾರಾಷ್ಟ್ರದ ಸಾಂಗ್ಲಿಯವರಾಗಿದ್ದಾರೆ. ಅವರ ಅಕ್ಕ ಕಾಜೋಲ್ ಕೂಡ ಅಥ್ಲೀಟ್ ಆಗಿದ್ದಾರೆ.

ಸಂಕೇತ್‌ ಬೆಳ್ಳಿ ಪದಕದ ಹಾದಿ

ಪ್ರಯತ್ನ;ಸ್ನ್ಯಾಚ್‌;ಕ್ಲೀನ್ ಮತ್ತು ಜರ್ಕ್‌

1;107;135

2;111;139 (ವಿಫಲ)

3;113;139 (ವಿಫಲ)

ಫಲಿತಾಂಶ;113+135=248

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT