ಬುಧವಾರ, ಸೆಪ್ಟೆಂಬರ್ 18, 2019
26 °C

ಯೋಗದ ಮೋಡಿಗಾರ ದೀಪಕ್‌ ಗೌಡ

Published:
Updated:
Prajavani

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಯೋಗ ಪ್ರಾಚೀನ ಭಾರತದ ಸಂಸ್ಕೃತಿಯ ಕೊಡುಗೆ. ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಲ್ಲಿ ಯೋಗಭ್ಯಾಸ ತಪಸ್ಸು ಇದ್ದ ಹಾಗೆ. ವಿಶ್ವದ ವಿವಿಧ ಭಾಗಗಳಲ್ಲಿ ಯೋಗಾಭ್ಯಾಸ ರೂಢಿಯಲ್ಲಿದೆ. ಆದರೆ ಭಾರತದಲ್ಲಿ ಬಹಳ ಮಹತ್ವ. ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಅಭಿಯಾನವು ಆರೋಗ್ಯದ ದೃಷ್ಟಿಯಿಂದ ನಡೆಯುತ್ತಿದೆ. ಯೋಗಕ್ಕೆ ಮಹತ್ವ ಹೆಚ್ಚುತ್ತಿರುವಾಗಲೇ ಯುವ ಯೋಗ ತರಬೇತುದಾರರಾಗಿ ವಿದೇಶದಲ್ಲಿ ಹೆಸರುವಾಸಿಯಾಗಿದ್ದಾರೆ ದೀಪಕ್‌ ಗೌಡ.

ದಕ್ಷಿಣಕನ್ನಡ ಜಿಲ್ಲೆಯ, ಕಡಬ ತಾಲ್ಲೂಕಿನ ಬಿಳಿನೆಲೆ ಗ್ರಾಮದ ಎರ್ಮಾಯಿಲ್ ಎಂಬ ಪುಟ್ಟ ಊರಿನ ಪ್ರತಿಭೆ ದೀಪಕ್. ತನ್ನ ಊರಿನ ಪ್ರತಿಭೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗದ ಮೂಲಕ ಸಾರಿದ ಕೀರ್ತಿ ಇವರದು. ಇವರು ಯೋಗ ಮಾಡಲು ಆರಂಭಿಸಿದರೆ ತಮ್ಮ ಮೈಯಲ್ಲಿ ಎಲುಬೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಯೋಗ ಎಂಬುದು ಆಸನ, ಪ್ರಾಣಾಯಾಮ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಮೀರಿದಂಥದ್ದು. ಯೋಗಾಭ್ಯಾಸಕ್ಕೆ ಯೋಗ್ಯ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಯೋಗ ತರಬೇತಿಯನ್ನೇ ತಮ್ಮ ಉದ್ಯೋಗವನ್ನಾಗಿಸಿಕೊಂಡವರು ದೀಪಕ್.

ಎರ್ಮಾಯಿಲ್‌ನ ಕೆಂಚಪ್ಪಗೌಡ ಮತ್ತು ಇಂದಿರಾ ದಂಪತಿಯ ಪುತ್ರರಾದ ಇವರು ಗ್ರಾಮೀಣ ಪ್ರದೇಶದಲ್ಲೇ ಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ಮುಗಿಸಿ ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ನಂತರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗಿಕ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡರು. ಕಾಲೇಜು ದಿನಗಳಲ್ಲಿಯೇ ಎನ್.ಸಿ.ಸಿ ಕಡೆಗೆ ಅಪಾರ ಒಲವನ್ನು ಮೂಡಿಸಿಕೊಂಡಿದ್ದ ಇವರು ಎನ್.ಸಿ.ಸಿಯಿಂದಾಗಿ ಯೋಗದ ಕಡೆಕಣ್ಣು ಹಾಯಿಸುವಂತೆ ಆಗಿದ್ದು ವಿಶೇಷ. ಇದರ ಜೊತೆಗೆ ಸ್ಕೂಬಾ ಡೈವಿಂಗ್‌ನಲ್ಲೂ ತನ್ನ ಕರಾಮತ್ತು ತೋರಿಸುವ ಧೀರ ಈ ತರುಣ.

ದೇಹವನ್ನು ಬಿಲ್ಲಿನಂತೆ ಬಾಗಿಸಬಲ್ಲರು, ಚೇಳಿನಂತೆ ಮುದುಡಿಸಬಲ್ಲರು. ತಮ್ಮ ದೇಹವನ್ನು ದಂಡಿಸಿ ಎಲ್ಲಾ ಆಸನಗಳನ್ನು ಪರಿಪೂರ್ಣವಾಗಿ ಮಾಡಿ ಮುಗಿಸುತ್ತಾರೆ. ಇವರು ಯೋಗ ಮಾತ್ರವಲ್ಲದೆ ಸಮುದ್ರದ ಆಳದಲ್ಲಿ ಕಿಲೋಮೀಟರ್‌ಗಟ್ಟಲೆ ಮೀನಿನಂತೆ ಈಜಬಲ್ಲರು. ಹಾಗೆ ರೈಫಲ್ ಹಿಡಿದರೆಂದರೆ ಗುರಿ ಪಕ್ಕಾ.

2013ರಲ್ಲಿ ಅಖಿಲ ಭಾರತ್ ನವಸೈನಿಕ್ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. 2014ರಲ್ಲಿ ಭಾರತೀಯ ನೌಕಾಪಡೆಯ ನೆಲೆಯಾದ ಕಾರವಾರದಲ್ಲಿ ನಡೆದ ಸ್ಕೂಬಾ ಡೈವಿಂಗ್ ಕ್ಯಾಂಪ್‌ನಲ್ಲಿ ಪಾಲ್ಗೊಂಡಿದ್ದು, 2015ರಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು, ಥಾಯ್ಲೆಂಡ್‌ ಹಾಗೂ ಬ್ಯಾಂಕಾಕ್‌ನಲ್ಲಿ ಅತಿಥಿ ಯೋಗ ತರಬೇತುದಾರನಾಗಿ ಕಾರ್ಯ ನಿರ್ವಹಿಸಿದ್ದು ಇವರ ಯೋಗ ಪಾಂಡಿತ್ಯಕ್ಕೆ ಸಿಕ್ಕ ಮನ್ನಣೆಗಳು.

ತನ್ನ ವಿದ್ಯಾಭ್ಯಾಸ ಮುಗಿಸಿದ ಕೂಡಲೇ ಪ್ರತಿಷ್ಟಿತ ಜಿಂದಾಲ್‌ನ ನೇಚರ್‌ಕೇರ್ ವಿಭಾಗದಲ್ಲಿ ಯೋಗ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇಂಡೊನೇಷ್ಯಾದ ಜಕಾರ್ತದಲ್ಲಿ ಯೋಗ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದ ಹೆಮ್ಮೆಯ ಯೋಗ ಪದ್ಧತಿಯನ್ನು ಅಲ್ಲಿನ ಜನರ ಮನೆ ಮನಕ್ಕೆ ತಲುಪಿಸುವ ಕೆಲಸದಲ್ಲಿ ತೋಡಗಿದ್ದಾರೆ.

ತಾನು ಕಲಿತಿರುವ ಯೋಗ ವಿದ್ಯೆ ಇತರರಿಗೂ ಉಪಯೋಗವಾಗಬೇಕು. ಭಾರತದ ಪರಂಪರೆಯ ವಿದ್ಯೆ ಮುಂದಿನ ಪೀಳಿಗೆಗೂ ಸಿಗುವಂತಾಗಬೇಕೆಂಬುದು ನನ್ನ ಆಶಯ ಎನ್ನುತ್ತಾರೆ ದೀಪಕ್‌ಗೌಡ.

Post Comments (+)