ಶನಿವಾರ, ಡಿಸೆಂಬರ್ 7, 2019
21 °C
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಭಾರತದ ಪೈಲ್ವಾನನಿಗೆ ಬೆಳ್ಳಿಯ ಪದಕ; ರಾಹುಲ್‌ಗೆ ಕಂಚು

ಅಖಾಡದಿಂದ ಹಿಂದೆ ಸರಿದ ದೀಪಕ್‌

Published:
Updated:
Prajavani

ನೂರ್‌ ಸುಲ್ತಾನ್‌, ಕಜಕಸ್ತಾನ: ಭಾರತದ ದೀಪಕ್‌ ಪುನಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಚಿನ್ನದ ಪದಕ ಜಯಿಸುವ ಅವರ ಕನಸು ಕೈಗೂಡಲಿಲ್ಲ.

61 ಕೆ.ಜಿ.ವಿಭಾಗದಲ್ಲಿ ಅಖಾಡಕ್ಕೆ ಇಳಿದಿದ್ದ ರಾಹುಲ್‌ ಅವಾರೆ ಕಂಚಿನ ಪದಕ ಪಡೆದರು.

ಭಾನುವಾರ ನಿಗದಿಯಾಗಿದ್ದ 86 ಕೆ.ಜಿ.ವಿಭಾಗದ ಚಿನ್ನದ ಪದಕದ ಪೈಪೋಟಿಯಲ್ಲಿ ದೀಪಕ್‌ ಅವರು ಇರಾನ್‌ನ ಹಸನ್‌ ಯಜದನಿ ಎದುರು ಸೆಣಸಬೇಕಿತ್ತು.

ಶನಿವಾರ ನಡೆದಿದ್ದ ಸ್ವಿಟ್ಜರ್ಲೆಂಡ್‌ನ ಸ್ಟೀಫನ್‌ ರೀಚ್‌ಮತ್‌ ಎದುರಿನ ಸೆಮಿಫೈನಲ್‌ ಹಣಾಹಣಿಯ ವೇಳೆ ದೀಪಕ್‌ ಅವರ ಎಡ ಮೊಣಕಾಲಿಗೆ ಗಾಯವಾಗಿತ್ತು. ನೋವು ಉಲ್ಬಣಿಸಿದ್ದರಿಂದ ಭಾರತದ ಪೈಲ್ವಾನ ಅನಿವಾರ್ಯವಾಗಿ ಅಖಾಡದಿಂದ ಹಿಂದೆ ಉಳಿದರು.

‘ಗಾಯದಿಂದಾಗಿ ಎಡ‌ಗಾಲು ಊದಿಕೊಂಡಿತ್ತು. ಕಾಲನ್ನು ನೆಲದ ಮೇಲೆ ಇಡುವುದಕ್ಕೂ ಆಗುತ್ತಿರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಫೈನಲ್‌ನಿಂದ ಹಿಂದೆ ಸರಿಯಬೇಕಾಯಿತು’ ಎಂದು 20ರ ಹರೆಯದ ದೀಪಕ್‌ ಹೇಳಿದ್ದಾರೆ.

ಹೋದ ವರ್ಷ ನಡೆದಿದ್ದ ಜೂನಿಯರ್‌ ವಿಭಾಗದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ದೀಪಕ್‌, ಮೊದಲ ಸಲ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ರಾಹುಲ್‌ಗೆ ಕಂಚು: 61 ಕೆ.ಜಿ.ವಿಭಾಗದ ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ರಾಹುಲ್‌ 11–4 ಪಾಯಿಂಟ್ಸ್‌ನಿಂದ ಅಮೆರಿಕದ ಟೇಲರ್‌ ಲೀ ಗ್ರಾಫ್‌ ಅವರನ್ನು ‘ಚಿತ್‌’ ಮಾಡಿದರು. ಈ ಮೂಲಕ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಪದಕ ಗೆದ್ದ ಸಾಧನೆಗೆ ಭಾಜನರಾದರು.

2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ರಾಹುಲ್‌, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ (2009, 2011) ಪದಕಗಳನ್ನು ಜಯಿಸಿದ್ದರು.

2017ರ ಪಾನ್‌ ಅಮೆರಿಕ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಟೇಲರ್‌, ಮೊದಲ ಸುತ್ತಿನಲ್ಲಿ ‘ಡಬಲ್‌ ಲೆಗ್‌ ಅಟ್ಯಾಕ್’ ಮೂಲಕ ಭಾರತದ ಪೈಲ್ವಾನನನ್ನು ತಬ್ಬಿಬ್ಬುಗೊಳಿಸಿದರು. ಇದರೊಂದಿಗೆ ಎರಡು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡರು.

ನಂತರ ಲಯ ಕಂಡುಕೊಂಡ ರಾಹುಲ್‌, ಬಿಗಿಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಮ್ಯಾಟ್‌ ಮೇಲೆ ಉರುಳಿಸಿದರು. ಈ ಮೂಲಕ ಸತತ ನಾಲ್ಕು ಪಾಯಿಂಟ್ಸ್‌ ಪಡೆದರು.

ಎರಡನೇ ಸುತ್ತಿನಲ್ಲೂ ಜಾಣ ನಡೆಗಳನ್ನು ಅನುಸರಿಸಿದ ರಾಹುಲ್‌ 10–2 ಮುನ್ನಡೆ ಪಡೆದು ಕಂಚಿನ ಪದಕದ ಹಾದಿಯನ್ನು ಸುಗಮ ಮಾಡಿಕೊಂಡರು. ನಂತರವೂ ಪರಿಣಾಮಕಾರಿ ಸಾಮರ್ಥ್ಯ ತೋರಿ ಸಂಭ್ರಮಿಸಿದರು.

ಭಾರತ ತಂಡವು ವಿಶ್ವ ಚಾಂಪಿಯನ್‌ಷಿಪ್‌ವೊಂದರಲ್ಲಿ ಅತೀ ಹೆಚ್ಚು ಪದಕಗಳನ್ನು (5) ಗೆದ್ದ ಸಾಧನೆಯನ್ನೂ ಈ ಬಾರಿ ಮಾಡಿತು. 2013ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು