ದೇಸಿ ಕ್ರೀಡೆಗೆ ಬೇಕು ಪ್ರಚಾರದ ಸ್ಪರ್ಶ

7
ಅಟ್ಯಪಟ್ಯಾ

ದೇಸಿ ಕ್ರೀಡೆಗೆ ಬೇಕು ಪ್ರಚಾರದ ಸ್ಪರ್ಶ

Published:
Updated:
Deccan Herald

ಗ್ರಾಮೀಣ ಭಾಗದಲ್ಲಿ ಜನಜನಿತವಾಗಿರುವ ಉಪ್ಪು ತರುವ ಆಟ ನಿಮಗೆ ನೆನಪಿರಬೇಕಲ್ಲವೇ. ಅದೇ ಮಾದರಿಯ ಮತ್ತು ಬಹುತೇಕ ಅದೇ ಕ್ರೀಡೆಯ ನಿಯಮ ಒಳಗೊಂಡಿರುವ ಅಟ್ಯಪಟ್ಯಾ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಕರ್ನಾಟಕದ ಮಟ್ಟಿಗೆ ಇದರ ಮೂಲ ಬೇರು ಇರುವುದು ಉತ್ತರ ಕರ್ನಾಟಕ ಭಾಗದಲ್ಲಿ.

ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಈ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತವೆ. ಧಾರವಾಡದ ಯುನಿವರ್ಸಿಟಿ ಹೈಸ್ಕೂಲಿನ ಮೈದಾನದಲ್ಲಿ ಮಕ್ಕಳು ಈ ಕ್ರೀಡೆಯನ್ನು ಅಭ್ಯಾಸ ಮಾಡುವ ದೃಶ್ಯ ಕಂಡುಬರುತ್ತದೆ. ಇದೇ ವರ್ಷ ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ಯಲ್ಲಿ ಉತ್ತರ ಕರ್ನಾಟಕದ ಭಾಗದ ಸ್ಪರ್ಧಿಗಳು ಭಾಗವಹಿಸಿದ್ದರು. ಭಟ್ಕಳದ ರಕ್ಷಾ ಜನ್ನ ಮೊಗೇರ್ ಕಂಚಿನ ಪದಕ ಜಯಿಸಿದ್ದರು.

ಇತ್ತೀಚಿಗೆ ಅಥಣಿ ತಾಲ್ಲೂಕಿನ ಸಂಬರಗಿಯಲ್ಲಿ ನಡೆದಿದ್ದ ರಾಜ್ಯಮಟ್ಟದ ಜೂನಿಯರ್‌ ಅಟ್ಯಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಧಾರವಾಡ ಜಿಲ್ಲೆಯ ಕಲಕೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮೂರನೇ ಸ್ಥಾನ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾಶಾಲೆ ಕೂಡ ಈ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದೆ.

ಕಲಕೇರಿ ಶಾಲೆಯ ಮೇಘಾ ಹಿರೇಮಠ, ಕವಿತಾ ಕಜಗುನಟ್ಟಿ, ನೇತ್ರಾವತಿ ಬಾಂಗಡಿ, ಅಕ್ಷತಾ ಕಾಲವಾಡ, ಅರ್ಚನಾ ಬೆಟಗೇರಿ, ಸುಧಾ ರಾಟೊಳ್ಳಿ, ಮಂಗಳಗೌರಿ ಕೊಟ್ರಿ, ಜ್ಯೋತಿ ಅಸುಂಡಿ, ಕಲಾವತಿ ಬಾವಕ್ಕನವರ, ಅನ್ನಪೂರ್ಣ ಮಂಗಳಗಟ್ಟಿ, ವೈಶಾಲಿ ವಾಲ್ಮೀಕಿ ಹಾಗೂ ನಾಗರತ್ನ ಪಾಗೋಜಿ ಕಲಕೇರಿ ಅವರನ್ನು ಒಳಗೊಂಡ ತಂಡ ರಾಜ್ಯಮಟ್ಟದ ಟೂರ್ನಿಯಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನಡೆದ 14 ವರ್ಷದ ಒಳಗಿನವರ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡ ಚಿನ್ನದ ಪದಕ ಮತ್ತು ಬಾಲಕಿಯರ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. 17 ವರ್ಷದ ಒಳಗಿನವರ ವಿಭಾಗಕ್ಕೆ ನಡೆದಿದ್ದ ಟೂರ್ನಿಯಲ್ಲಿ ಕರ್ನಾಟಕ ಬಾಲಕರ ತಂಡ ಚಿನ್ನ ಜಯಿಸಿತ್ತು. ಮುಂದಿನ ತಿಂಗಳು ನಾಲ್ಕರಿಂದ ಮೂರು ದಿನ ಬಾಗಲಕೋಟೆ ಬಳಿಯ ಶಿರೂರದಲ್ಲಿ ಸೀನಿಯರ್‌ ರಾಷ್ಟ್ರೀಯ ಟೂರ್ನಿ ನಡೆಯುತ್ತದೆ. 27 ರಾಜ್ಯಗಳಲ್ಲಿ ಈ ಕ್ರೀಡೆ ಕ್ರೀಯಾಶೀಲವಾಗಿದೆ.

ಭಾರತದ ಸಾಂಪ್ರದಾಯಿಕ ಕ್ರೀಡೆಯಾದ ಅಟ್ಯಪಟ್ಯಾ ಪೋಷಿಸಿ, ಬೆಳೆಸಲು ರಾಜ್ಯ ಕ್ರೀಡಾ ಸಂಸ್ಥೆ ಮತ್ತು ಭಾರತ ಅಟ್ಯ ‍ಪಟ್ಯಾ ಫೆಡರೇಷನ್‌ ಆಗಾಗ ಟೂರ್ನಿಗಳನ್ನು ಸಂಘಟಿಸುತ್ತಿವೆ. 1982ರಲ್ಲಿ ಫೆಡರೇಷನ್ ಆರಂಭವಾಯಿತು. 2013ರಲ್ಲಿ ಭಟ್ಕಳದಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿ ಆಯೋಜಿಸಲಾಗಿತ್ತು. 22 ರಾಜ್ಯಗಳು ಮತ್ತು ಕ್ರೀಡಾ ಸಂಸ್ಥೆಗಳು ಪಾಲ್ಗೊಂಡಿದ್ದವು. ಮಹಾರಾಷ್ಟ್ರದಲ್ಲಿ 27ನೇ ಸೀನಿಯರ್ ರಾಷ್ಟ್ರೀಯ ಟೂರ್ನಿ, 2012ರಲ್ಲಿ ಹೈದರಾಬಾದ್‌ನಲ್ಲಿ ಸೀನಿಯರ್‌ ಟೂರ್ನಿ ನಡೆದಿತ್ತು.

ಮೂರೂವರೆ ದಶಕದ ಇತಿಹಾಸ ಹೊಂದಿರುವ ಈ ಕ್ರೀಡೆ ಇದುವರೆಗೆ ನಿರೀಕ್ಷೆಯಂತೆ ಅಭಿವೃದ್ಧಿ ಕಂಡಿಲ್ಲ. ಬೆಂಗಳೂರು, ಮೈಸೂರು ಭಾಗದಲ್ಲಿ ಈ ಕ್ರೀಡೆಯ ಹೆಸರು ಹೇಳಿದರೆ ‘ಇಂಥದ್ದೊಂದು ಕ್ರೀಡೆ ಇದೆಯಾ’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಆದ್ದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಸೀಮಿತವಾದ ಕ್ರೀಡೆಯನ್ನು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಪರಿಚಯಿಸುವ ಅಗತ್ಯವಿದೆ. ಆದ್ದರಿಂದ ಈ ಕ್ರೀಡೆ ಸಾಕಷ್ಟು ಪ್ರಚಾರ ಪಡೆದುಕೊಳ್ಳಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ರೀಡಾಕೂಟಗಳನ್ನು ಸಂಘಟಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !