ಗುರುವಾರ , ಏಪ್ರಿಲ್ 9, 2020
19 °C

ಒಲಿಂಪಿಕ್ಸ್‌: ಫೆಡರೇಷನ್‌ಗಳ ಜೊತೆ ಐಒಸಿ ಸಭೆ ಇಂದು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಕೊರೊನಾ ಸೋಂಕು ಕಬಂಧಬಾಹುಗಳನ್ನು ಚಾಚುತ್ತಿರುವ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ), ಕ್ರೀಡಾ ಫೆಡರೇಷನ್‌ಗಳ ಜೊತೆ ಮಂಗಳವಾರ ಮಾತುಕತೆ ನಡೆಸಲಿದೆ.

ಅಂತರರಾಷ್ಟ್ರೀಯ ಫೆಡರೇಷನ್‌ ಒಂದರ ನಿಕಟ ಮೂಲಗಳು ಈ ವಿಷಯದ ಬಗ್ಗೆ ಸೋಮವಾರ ಮಾಹಿತಿ ನೀಡಿವೆ. ಟೋಕಿಯೊ ಒಲಿಂಪಿಕ್ಸ್‌ ಆರಂಭಕ್ಕೆ ಐದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಕ್ರೀಡೆಯನ್ನು ನಿಗದಿ ಪ್ರಕಾರ ನಡೆಸಲು ಸಾಧ್ಯವಾಗ‌‌‌‌‌‌ಬಹುದೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸತೊಡಗಿವೆ. ಜುಲೈ 24ರಂದು ಕ್ರೀಡೆಗಳ ಉದ್ಘಾಟನಾ ಸಮಾರಂಭ ನಿಗದಿಯಾಗಿದೆ.

ಐಒಸಿಯು ಮಂಗಳವಾರ ಟೆಲಿ ಕಾನ್ಫರೆನ್ಸ್‌ ನಡೆಸಲಿದ್ದು, ಕೊರನಾ ಸೋಂಕು ಭೀತಿಯಿಂದಾಗಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆಂತರಿಕವಾಗಿ ಚರ್ಚೆ ನಡೆಸಲಿದೆ ಎಂದು ಮೂಲವೊಂದು ತಿಳಿಸಿದೆ.

ಚೀನಾದ ವುಹಾನ್‌ನಲ್ಲಿ ಕಳೆದ ವರ್ಷದ ಕೊನೆಯಲ್ಲಿ ಕಾಣಿಸಿಕೊಂಡ ಕೊರೊನಾ–2 ವೈರಸ್‌ ವಿಶ್ವದಾದ್ಯಂತ ವೇಗವಾಗಿ  ಹರಡಿದ್ದು, 1,60,000 ಮಂದಿ ಸೋಂಕುಪೀಡಿತರಾಗಿದ್ದಾರೆ. ಸೋಂಕಿನ ಪರಿಣಾಮ ಆರು ಸಾವಿರ ಮಂದಿ ಸಾವಿಗೀಡಾಗಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಒಲಿಂಪಿಕ್‌ ಅರ್ಹತಾ ಕೂಟಗಳು ಸೇರಿ ಹಲವು ಕ್ರೀಡಾಕೂಟಗಳನ್ನು ರದ್ದುಮಾಡಲಾಗಿದೆ. ಕೆಲವನ್ನು ಮುಂದೂಡಲಾಗಿದೆ. ಒಲಿಂಪಿಕ್‌ಯೇತರ ಕ್ರೀಡೆಗಳ ಮೇಲೂ ಕೊರೊನಾ ವೈರಸ್‌ ಕೆಂಗಣ್ಣು ಬೀರಿದೆ.‌

ಆದರೆ, ಜಪಾನ್‌ ಪ್ರಧಾನಿ ಶಿಂಜೊ ಅಬೆ ಮತ್ತು ಒಲಿಂಪಿಕ್‌ ಕೂಟದ ಸಂಘಟಕರು ಕ್ರೀಡೆಗಳು ನಿಗದಿಯಂತೆ ನಡೆಯಲಿದ್ದು, ಸಿದ್ಧತೆಗಳು ಯೋಜನೆಯ ಪ್ರಕಾರ ನಡೆಯುತ್ತಿದೆ ಎಂದಿದ್ದಾರೆ. 

‘ಕೊರೊನಾ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಗೆಲುವನ್ನು ಪ್ರತಿನಿಧಿಸುವ ರೀತಿಯಲ್ಲಿ ‘ಟೋಕಿಯೊ ಒಲಿಂಪಿಕ್‌ ಕ್ರೀಡೆಗಳು ನಡೆಯಬೇಕು ಎಂಬುದು ತಮ್ಮ ಮನದಿಚ್ಛೆ’ ಎಂದು ಪ್ರಧಾನಿ ಅಬೆ ಸೋಮವಾರ ಸಂಸತ್ತಿಗೆ ತಿಳಿಸಿರುವುದಾಗಿ ‘ಕ್ಯೊಡೊ’ ನ್ಯೂಸ್‌ವೈರ್‌ ವರದಿ ಮಾಡಿದೆ.

ಆದರೆ ‘ಕ್ಯೊಡೊ’ ನಡೆಸಿದ ಜನಮತಗಣನೆಯಲ್ಲಿ ಜಪಾನ್‌ನ ನಾಗರಿಕರು ಒಲಿಂಪಿಕ್‌ ಕ್ರೀಡೆಗಳು ನಿಗದಿ ಅವಧಿಯಲ್ಲಿ ನಡೆಯುವ ಬಗ್ಗೆ ಆಶಾಭಾವ ಹೊಂದಿಲ್ಲ. ಟೋಕಿಯೊ ಕ್ರೀಡೆಗಳು ಯೋಜನೆಯ ರೀತಿ ನಡೆಯುವುದು ಅನುಮಾನ ಎಂದು ಶೇ 69ರಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಎಷ್ಟು ಮಂದಿಯನ್ನು ಈ ಮತಗಣನೆಗೆ ಬಳಸಲಾಗಿತ್ತು ಎಂಬುದುನ್ನು ಕ್ಯೊಡೊ ತಿಳಿಸಿಲ್ಲ.

‘ಈ ಪರಿಸ್ಥಿತಿ ಕೆಲವು ವಾರಗಳಿಂದ ಉದ್ಭವಿಸಿರುವ ಕಾರಣ, ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾಗೀದಾರರ ಜೊತೆ ಚರ್ಚೆ ನಡೆಸುತ್ತಿದೆ’ ಎಂದು ಐಒಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಐಒಸಿಯ ಕ್ರೀಡಾ ನಿರ್ದೇಶಕ ಕಿಟ್‌ ಮೆಕ್‌ಕಾನೆಲ್‌ ಅವರು, ಒಲಿಂಪಿಕ್‌ ಅರ್ಹತಾ ಮಾನದಂಡಗಳ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ತರುವ ಬಗ್ಗೆ ವಿವಿಧ ಅಂತರರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಜೊತೆ ಕಳೆದ ವಾರ ಸಮಾಲೋಚನೆ ನಡೆಸಿದ್ದಾರೆ. 

‘ಐಒಸಿಯು ಜಾರಿ ಗುಂಪು (ಇಂಪ್ಲಿಮೆಂಟೇಷನ್‌ ಗ್ರೂಪ್‌) ರಚಿಸಿದೆ. ಅರ್ಹತಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವುದಕ್ಕೆ ಸಮ್ಮತಿ ನೀಡುವ ವಿಷಯದಲ್ಲಿ ಈ ಗುಂಪು ಐಒಸಿ ಆಡಳಿತ ಮಂಡಳಿ ಪರ, ಶೀಘ್ರ ನಿರ್ಧಾರಗಳನ್ನು ಕೈಗೊಳ್ಳಲಿದೆ’ ಎಂದು ಮೆಕ್‌ಕಾನೆಲ್‌ ಅವರು ಫೆಡರೇಷನ್‌ಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರವನ್ನು ಮಾರ್ಚ್‌ 9ರಂದು ಬರೆಯಲಾಗಿದೆ.

ಅರ್ಹತಾ ಮಟ್ಟ ಗಳಿಸಲು ಅವಧಿ ವಿಸ್ತರಣೆ, ಕೋಟಾ ಪ್ರಮಾಣದಲ್ಲಿ ಪರಿಷ್ಕರಣೆ, ಕೆಲವು ಅರ್ಹತಾ ಮಾನದಂಡಗಳನ್ನು ತೆಗೆದುಹಾಕುವುದು ಈ ಬದಲಾವಣೆಗಳಲ್ಲಿ ಒಳಗೊಂಡಿವೆ. ಆದರೆ ಇವೆಲ್ಲವನ್ನು ಜೂನ್‌ 30ಕ್ಕೆ ಮೊದಲೇ ಮುಗಿಸಬೇಕಾಗಿದೆ.

ಅರ್ಹತಾ ಪ್ರಕ್ರಿಯೆಯಲ್ಲಿ ಇತರ ಬದಲಾವಣೆಗಳಿಗೆ ಸಂಬಂಧಿಸಿ ಮಂಗಳವಾರ ಚರ್ಚೆ ನಡೆಯುವುದೇ ಎಂಬ ಬಗ್ಗೆ ತಿಳಿದುಬಂದಿಲ್ಲ.

ಚಾರಣ, ಬಾಕ್ಸಿಂಗ್, ಫೆನ್ಸಿಂಗ್‌, ಜೂಡೊ ಸೇರಿ ಹಲವು ಅರ್ಹತಾ ಟೂರ್ನಿಗಳನ್ನು ಒಂದೋ ರದ್ದುಪಡಿಸಲಾಗಿದೆ ಇಲ್ಲವೇ ಮುಂದೂಡಲಾಗಿದೆ. ಹೀಗಾಗಿ ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಷಯದಲ್ಲಿ ಗೊಂದಲದಲ್ಲಿದ್ದಾರೆ.

ಜಪಾನ್‌ನಲ್ಲಿ ಕೊರೊನಾ ಸೋಂಕುಪೀಡಿತರ ಸಂಖ್ಯೆ ಭಾನುವಾರ 1,484ಕ್ಕೆ ಏರಿತ್ತು. ಪ್ರವಾಸಿ ಹಡಗು ‘ಡೈಮಂಡ್‌ ಪ್ರಿನ್ಸೆಸ್‌’ನಲ್ಲಿ ತಂಗಿರುವ 697 ಮಂದಿ ಇದರಲ್ಲಿ ಒಳಗೊಂಡಿದ್ದಾರೆ. ಸೋಂಕಿನಿಂದ ಜಪಾನ್‌ನಲ್ಲಿ  ಮೃತಪಟ್ಟವರ ಸಂಖ್ಯೆ 29 ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು