ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಲವ್ಯ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ

ತರಬೇತಿ ಪಡೆದ ಕೋಚ್‌ ನಿಯೋಜನೆ
Last Updated 29 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕ್ರೀಡಾ ಕೋಚ್‌ಗಳ ಕೊರತೆ ಇದ್ದು, ಸೂಕ್ತ ತರಬೇತಿ ಪಡೆದು ಬರುವ ಕೋಚ್‌ಗಳನ್ನು ಕ್ರೀಡಾಳುಗಳ ತರಬೇತಿಗೆ ನಿಯೋಜಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ 2020ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕರ್ನಾಟಕವನ್ನು ‘ಕ್ರೀಡಾ ಕರ್ನಾಟಕ’ವನ್ನಾಗಿ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಇದಕ್ಕೆ ಪೂರಕವಾಗಿ ತಳಮಟ್ಟದಿಂದಲೂ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಕ್ರೀಡಾ ಕೂಟಗಳನ್ನು ವ್ಯವಸ್ಥಿತವಾಗಿ ನಡೆಸಲಾಗುವುದು. ಕಬಡ್ಡಿ, ಕಂಬಳ, ಎತ್ತಿನಗಾಡಿ ಸ್ಪರ್ಧೆ, ಕಲ್ಲು ಗುಂಡು ಎತ್ತುವುದು ಹೀಗೆ ಹಲವು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

‘ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್‌ಗಾಗಿ ರಾಜ್ಯದ 75 ಕ್ರೀಡಾ ಪಟುಗಳಿಗೆ ವಿಶ್ವ ಮಟ್ಟದ ತರಬೇತಿ ನೀಡಲಾಗುತ್ತಿದೆ. ನಾಲ್ಕು ವರ್ಷ ಅವಧಿಗೆ ಇವರನ್ನು ದತ್ತು ಪಡೆದು ತರಬೇತಿ ನೀಡುತ್ತಿದ್ದೇವೆ. ಅವಶ್ಯಕತೆ ಇದ್ದರೆ ಹೆಚ್ಚಿನ ತರಬೇತಿಗೆ ವಿದೇಶಗಳಿಗೂ ಕಳುಹಿಸಲಾಗುವುದು. ಕೆಲವರಾದರೂ ಒಲಿಂಪಿಕ್‌ ಕೂಟದಲ್ಲಿ ಭಾಗವಹಿಸಬೇಕು’ ಎಂದು ಬೊಮ್ಮಾಯಿ ಹೇಳಿದರು.

‘ಗ್ರಾಮೀಣ ಕ್ರೀಡೆಗಳ ಮೂಲಕ ಪ್ರತಿಭೆಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದೇವೆ. ಇದರ ಜತೆ ಯುವ ಜನರ ಸಬಲೀಕರಣವೂ ಆಗಬೇಕು. ಶಿಕ್ಷಣ, ಉದ್ಯೋಗದ ಮೂಲಕ ಸಬಲೀಕರಿಸುವುದು ಆದ್ಯತೆ ಆಗಿದೆ. ಇದಕ್ಕಾಗಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯನ್ನು ಆರಂಭಿಸಿದ್ದೇವೆ. ಪ್ರತಿ ಗ್ರಾಮದಲ್ಲಿ 30 ಜನರನ್ನು ಗುರುತಿಸಿ ಸಂಘವನ್ನು ರೂಪಿಸಲಾಗುವುದು. ಇವರಿಗೆ ವಿವಿಧ ಉತ್ಪನ್ನಗಳ ತಯಾರಿಕೆಯ ತರಬೇತಿ ನೀಡಿ ಮಾರುಕಟ್ಟೆಯನ್ನೂ ಒದಗಿಸಲಾಗುವುದು’ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಿಂದ ಒಂದು ವರ್ಷಕ್ಕೆ ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಇದು ವಿನೂತನ ಯೋಜನೆಯಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಯುವಕರ ಸಾಮರ್ಥ್ಯ ಹೆಚ್ಚಿಸುವ ಕೆಲಸವನ್ನು ಸರ್ಕಾರ ನಿರಂತರವಾಗಿ ಮಾಡಲಿದೆ ಎಂದು ಬೊಮ್ಮಾಯಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ವಿ.ಗಾಂವಕರ್‌ (ಅಥ್ಲೆಟಿಕ್ಸ್‌), ಕ್ಯಾಪ್ಟನ್‌ ದಿಲೀಪ್‌ ಕುಮಾರ್‌ (ಕಯಾಕಿಂಗ್‌), ವೀರನಗೌಡ ಪಾಟೀಲ (ಅಟ್ಯಾ ಪಟ್ಯಾ), ಎಂ. ನಿರಂಜನಮೂರ್ತಿ (ಯೋಗ) ಮತ್ತು ಎ.ನಾಗರಾಜು (ಕಬಡ್ಡಿ) ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT