ಬುಧವಾರ, ಆಗಸ್ಟ್ 10, 2022
23 °C
ರೋಮ್‌ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಸಿಂಗ್ ಓಟದ ಮೆಲುಕು ಹಾಕಿದ ಹಿರಿಯ ಅಥ್ಲೀಟ್ ಗುರುಬಚನ್ ಸಿಂಗ್ ರಾಂಧವಾ

‘ಇಡೀ ಭಾರತ ತಂಡವೇ ಆ ಒಂದು ಪದಕಕ್ಕಾಗಿ ಕಾದಿತ್ತು’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಅದು ಅವರ ಜೀವನದ ಮಹತ್ವದ ಓಟವಾಗಿತ್ತು. ಆದರೆ ಕೊನೆಯಲ್ಲಿ ಮಿಲ್ಖಾ ಸಿಂಗ್ ಸಂಪೂರ್ಣ ಹತಾಶೆಗೊಂಡಿದ್ದರು‘...

1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಕೇವಲ 0.1 ಸೆಕೆಂಡ್ ಅಂತರದಲ್ಲಿ ‘ಪೋಡಿಯಂ ಫಿನಿಶ್‘ ತಪ್ಪಿಸಿಕೊಂಡಿದ್ದರು ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್. ಆ ನೋವು ಅವರನ್ನು ಜೀವನದುದ್ದಕ್ಕೂ ಬೆಂಬಿಡದೇ ಕಾಡಿತ್ತು. ಈ 400 ಮೀ. ಓಟದ ಕುರಿತು ಭಾರತದ ಹಿರಿಯ ಹರ್ಡಲ್ಸ್ ಪಟು ಗುರುಬಚನ್‌ಸಿಂಗ್ ರಾಂಧವಾ ಮೆಲುಕು ಹಾಕಿದ್ದಾರೆ.

1960ರ ರೋಮ್ ಹಾಗೂ 1964ರ ಟೋಕಿಯೊ ಒಲಿಂಪಿಕ್ಸ್‌ಗಳಲ್ಲಿ ಮಿಲ್ಖಾ ಹಾಗೂ ರಾಂಧವಾ ತಂಡದಲ್ಲಿದ್ದರು.

‘1960ರ ಕೂಟದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ ಎಂದು ಇಡೀ ಭಾರತ ತಂಡ ಕಾತರದಿಂದ ಕಾಯುತ್ತಿತ್ತು. ಮಿಲ್ಖಾ ಅವರಿಂದ ಎಲ್ಲರೂ ಪದಕ ನಿರೀಕ್ಷಿಸುತ್ತಿದ್ದರು. 400 ಮೀ. ಓಟದ ಆರಂಭಕ್ಕೆ ಉಸಿರು ಬಿಗಿ ಹಿಡಿದು ಕಾದಿದ್ದರು‘ ಎಂದು 82 ವರ್ಷದ ರಾಂಧವಾ ನೆನಪಿಸಿಕೊಂಡಿದ್ದಾರೆ.

‘ಮಿಲ್ಖಾ ಅದ್ಭುತ ಲಯದಲ್ಲಿದ್ದರು. ಚಿನ್ನ ಅಥವಾ ಬೆಳ್ಳಿ ಕಷ್ಟವಾದರೂ ಕನಿಷ್ಠ ಕಂಚಿನ ಪದಕವಾದರೂ ಅವರ ಕೈ ಸೇರಬಹುದು ಎಂಬ ಭರವಸೆ ಪ್ರತಿಯೊಬ್ಬರದಾಗಿತ್ತು. ಅವರಿಂದ ಅದು ಸಾಧ್ಯವೂ ಇತ್ತು‘ ಎಂದು ರಾಂಧವಾ ನುಡಿದರು.

45.6 ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಮಿಲ್ಖಾ, ಕೂದಲೆಳೆ ಅಂತರದಿಂದ ಕಂಚಿನ ಪದಕ ತಪ್ಪಿಸಿಕೊಂಡಿದ್ದರು. ಮೂರನೇ ಸ್ಥಾನ ಗಳಿಸಿದ್ದ ದಕ್ಷಿಣ ಆಫ್ರಿಕಾದ ಮಾಲ್ಕಂ ಸ್ಪೆನ್ಸ್‌ ಅವರಿಂದ ಕೇವಲ 0.1 ಸೆಕೆಂಡು ಹಿಂದುಳಿದಿದ್ದರು. 1958ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಇದೇ ಅಥ್ಲೀಟ್‌ಅನ್ನು ಹಿಂದಿಕ್ಕಿ ಮಿಲ್ಖಾ ಐತಿಹಾಸಿಕ ಚಿನ್ನ ಕೊರಳಿಗೇರಿಸಿಕೊಂಡಿದ್ದರು.

‘ಭಾರತದ ಎಲ್ಲ ಅಥ್ಲೀಟ್‌ಗಳಿಗೆ ಇದರಿಂದ ಆಘಾತವಾಗಿತ್ತು. ತಂಡದಲ್ಲಿ ಮೌನ ಮನೆ ಮಾಡಿತು. ಮಿಲ್ಖಾ ಸಿಂಗ್ ಹತಾಶೆಗೊಂಡಿದ್ದರು‘ ಎಂದು ರಾಂಧವಾ ನುಡಿದರು.

‘200ರಿಂದ 250 ಮೀಟರ್‌ವರೆಗೆ ಮಿಲ್ಖಾ ಸಿಂಗ್ ಮುಂದಿದ್ದರು. ಆದರೆ ಬಳಿಕ ಓಟವನ್ನು ನಿಧಾನಗೊಳಿಸಿ ತಪ್ಪು ಮಾಡಿದರು. ಅದೇ ಅವರಿಗೆ ಮುಳುವಾಯಿತು‘ ಎಂದು ರಾಂಧವಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು