ಮಂಗಳವಾರ, ಜುಲೈ 27, 2021
21 °C
ಬೋಲ್ಟ್‌ ಉತ್ತರಾಧಿಕಾರಿಯಾಗುವತ್ತ ಬ್ರೊಮೆಲ್‌ ಚಿತ್ತ

ಒಲಿಂಪಿಕ್ಸ್‌: ಆಲಿಸನ್‌ಗೆ ಟೊಕಿಯೊ ಟಿಕೆಟ್‌ ಖಾತರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಯುಜಿನ್‌ (ಅಮೆರಿಕ): ಅಮೆರಿಕದ ವೇಗದ ಓಟಗಾರ್ತಿ ಆಲಿಸನ್‌ ಫೆಲಿಕ್ಸ್‌ ತಮ್ಮ ಐದನೇ ಒಲಿಂಪಿಕ್‌ ಕ್ರೀಡೆಗೆ ಟಿಕೆಟ್‌ ಖಾತರಿಪಡಿಸಿಕೊಂಡರು. ಯು.ಎಸ್‌. ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಕೂಟದಲ್ಲಿ ಇನ್ನೊಂದೆಡೆ, ಟ್ರೇವೊನ್‌ ಬ್ರೊಮೆಲ್‌ ಪುರುಷರ 100 ಮೀ. ಓಟವನ್ನು ಗೆದ್ದುಕೊಂಡು ಉಸೇನ್‌ ಬೋಲ್ಟ್‌ ಉತ್ತರಾಧಿಕಾರಿ ಪಟ್ಟಕ್ಕೆ ಫೆವರೀಟ್‌ ಎನ್ನುವುದನ್ನು ಸಾಬೀತುಪಡಿಸಿದರು.

ಒರೆಗಾನ್‌ನಲ್ಲಿ ಭಾನುವಾರ ನಡೆದ ಈ ಕೂಟದ 400 ಮೀ. ಓಟದಲ್ಲಿ ಆಲಿಸನ್‌ ತಮ್ಮ ವೈಭವದ ದಿನಗಳ ರೀತಿಯ ಪ್ರದರ್ಶನ ನೀಡಿದರು. ಆ ಮೂಲಕ ಟೋಕಿಯೊ ಕ್ರೀಡೆಗಳಿಗೆ ಸ್ಥಾನ ಖಚಿತಪಡಿಸಿಕೊಂಡರು. 35 ವರ್ಷದ ಆಲಿಸನ್‌, ಒಲಿಂಪಿಕ್‌ ಕ್ರೀಡೆಗಳ ಟ್ರ್ಯಾಕ್‌ ಇತಿಹಾಸದಲ್ಲಿ ಆರು ಚಿನ್ನದ ಪದಕಗಳನ್ನು ಪಡೆದ ಏಕೈಕ ಅಥ್ಲೀಟ್‌ ಎಂಬ ಹಿರಿಮೆಯನ್ನು ಹೊಂದಿದ್ದಾರೆ.

ಈ ಹಿಂದೆ, ಫೆಲಿಕ್ಸ್‌, ಅವಧಿಪೂರ್ವ ಹೆರಿಗೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಪ್ರಾಣಾಪಾಯವನ್ನೂ ಎದುರಿಸಿದ್ದರು. ಆದರೆ ಎರಡು ವರ್ಷದ ಹಿಂದೆ ಅವರು ಮರಳಿ ಅಭ್ಯಾಸ ಆರಂಭಿಸಿದ್ದರು. ಏನಿದ್ದರೂ ಹಿಂದಿನ ಲಯಕ್ಕೆ ಮರಳುವುದು ಕಷ್ಟ ಎಂಬ ಭಾವನೆ ಮೂಡಿತ್ತು. ಆದರೆ ನಿರೀಕ್ಷೆ ಮೀರಿ ಉತ್ತಮ ಸಾಧನೆ ತೋರಿದ ಅವರು ಎರಡನೇ ಸ್ಥಾನ ಪಡೆದರು. ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಒಟ್ಟು 13 ಚಿನ್ನದ ಪದಕ ಕೊರಳಿಗೇರಿಸಿಕೊಂಡಿರುವ ಈ ಅನುಭವಿ ಓಟಗಾರ್ತಿಗೆ ಪ್ರೇಕ್ಷಕರಿಂದ ಮುಗಿಲುಮುಟ್ಟಿದ ಹರ್ಷೋದ್ಗಾರವೂ ದೊರೆಯಿತು.

ಓಟ ಪೂರೈಸಲು ಆಲಿಸನ್‌ 50.02 ಸೆಕೆಂಡು ತೆಗೆದುಕೊಂಡಿದ್ದು, ಇದು 2017ರ ನಂತರ ಅವರ ಅತ್ಯುತ್ತಮ ಕಾಲಾವಧಿ ಆಗಿದೆ. ತಾಯಿಯಾದ ಇನ್ನೊಬ್ಬ ಓಟಗಾರ್ತಿ ಕ್ವನೇರಾ ಹೇಯ್ಸ್‌ 49.78 ಸೆಕೆಂಡುಗಳಲ್ಲಿ ಓಟ ಪೂರೈಸಿ ಅಗ್ರಸ್ಥಾನ ಪಡೆದರು. ಮೂರನೇ ಸ್ಥಾನ ಪಡೆದರೂ, ವಾಡೆಲಿನ್‌ ಜೊನಾಥಾಸ್‌ 50.03 ಸೆ.ಗಳ ಸಾಧನೆಯೊಡನೆ ಜಪಾನ್‌ಗೆ ಟಿಕೆಟ್‌ ಬುಕ್‌ ಮಾಡಿದರು

ಜುಲೈ–ಆಗಸ್ಟ್‌ ಒಲಿಂಪಿಕ್ಸ್‌ ನಂತರ ನಿವೃತ್ತರಾಗುವುದಾಗಿ ಘೋಷಿಸಿರುವ ಆಲಿಸನ್‌, ತಮ್ಮ ಸಾಧನೆ ತಾಯಿಯಾಗಿರುವ ಇತರ ಅಥ್ಲೀಟುಗಳಿಗೆ ಸಂದೇಶ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪುರುಷರ 100 ಮೀ. ಓಟದಲ್ಲಿ ಬ್ರೊಮೆಲ್‌ ಮುನ್ನಡೆ ಕಾಯ್ದುಕೊಂಡು 9.80 ಸೆಕೆಂಡುಗಳಲ್ಲಿ ಗುರಿಮುಟ್ಟಿದರು. ಫ್ಲಾರಿಡಾದ 25 ವರ್ಷ ವಯಸ್ಸಿನ ಬ್ರೊಮೆಲ್‌ ಈ ಹಾದಿಯಲ್ಲಿ ರಾನಿ ಬೇಕರ್‌ (9.85 ಸೆ.) ಮತ್ತು ಫ್ರೆಡ್‌ ಕೆರ್ಲಿ (9.86 ಸೆ.) ಅವರನ್ನು ಹಿಂದೆಹಾಕಿದರು. 39ರ ವಯಸ್ಸಿನಲ್ಲಿ ಮತ್ತೊಮ್ಮೆ ಒಲಿಂಪಿಕ್ಸ್‌ ಅವಕಾಶ ನೋಡಲು ಯತ್ನಿಸಿದ್ದ ಜಸ್ಟಿನ್‌ ಗ್ಯಾಟ್ಲಿನ್‌ 10.87 ಸೆ.ಗಳ  ಅವಧಿಯೊಡನೆ ಎಂಟನೇ ಸ್ಥಾನಕ್ಕೆ ಸರಿದರು.

ಈ ವರ್ಷ 9.77 ಸೆ.ಗಳ ಅತ್ಯುತ್ತಮ ಸಾಧನೆಯೊಡನೆ ಬ್ರೊಮೆಲ್‌ ವಿಶ್ವದಲ್ಲಿ ಹಾಲಿ ಅತಿ ವೇಗದ ಓಟಗಾರ ಎನಿಸಿದ್ದಾರೆ. ಇತ್ತೀಚಿನ ತಿಂಗಳಲ್ಲಿ ಉತ್ತಮ ಲಯದಲ್ಲಿರುವುದರಿಂದ ಟೋಕಿಯೊದಲ್ಲಿ ಅವರು ಚಿನ್ನ ಗೆಲ್ಲುವ ನೆಚ್ಚಿನ ಓಟಗಾರ ಎನಿಸಿದ್ದಾರೆ.

2004ರಲ್ಲಿ ಗ್ಯಾಟ್ಲಿನ್‌ ಅವರು 100 ಮೀ. ಓಟದಲ್ಲಿ ಚಿನ್ನ ಗೆದ್ದ ನಂತರ ಅಮೆರಿಕದ ಯಾವುದೇ ಓಟಗಾರ ಅಂಥ ಸಾಧನೆ ಪುನರಾವರ್ತಿಸಿಲ್ಲ. ‘ವಿಶ್ವಾಸದೊಡನೆ ಕೆಲವೊಮ್ಮೆ ಉದಾಸೀನವೂ ಜೊತೆಗೂಡುತ್ತದೆ ಎಂಬ ಭಾವನೆ ನನ್ನದು’ ಎಂದು ಬ್ರೊಮೆಲ್‌ ಹೇಳಿದ್ದಾರೆ.

ಮೈಕೆಲ್‌ ನೋರ್ಮನ್‌ 400 ಮೀ. ಓಟದಲ್ಲಿ 44.07 ಸೆ.ಗಳ ಸಾಧನೆಯೊಡನೆ ಚಿನ್ನ ಗೆದ್ದು, ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದನ್ನು ಖಾತರಿಪಡಿಸಿದರು. ಮೈಕೆಲ್‌ ಚೆರಿ (44.35 ಸೆ) ಮತ್ತು ರ‍್ಯಾಂಡೋಲ್ಫ್‌ ರಾಸ್‌ (44.74 ಸೆ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಸ್ಪರ್ಧೆ ಪೂರೈಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು