ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಮತ್ತೆ ನಿರಾಸೆ

ಫಿಬಾ ಮಹಿಳೆಯರ ಏಷ್ಯಾಕಪ್ ‌ಬ್ಯಾಸ್ಕೆಟ್‌ಬಾಲ್ ಟೂರ್ನಿ
Last Updated 26 ಸೆಪ್ಟೆಂಬರ್ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ಛಲದಿಂದ ಆಡಿದರೂ ಫಲ ಸಿಗಲಿಲ್ಲ. ತವರಿನ ಪ್ರೇಕ್ಷಕರ ಆಸೆಯೂ ಕೈಗೂಡಲಿಲ್ಲ.ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿತು. ಚೀನಾ ತೈಪೆ ವಿರುದ್ಧ 58–87ರಲ್ಲಿ ಸೋತ ಭಾರತಕ್ಕೆ ಇದೀಗ ’ಎ’ ವಲಯದಲ್ಲಿ ಸ್ಥಾನ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಶುಕ್ರವಾರ 7ನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಫಿಲಿಪ್ಪಿನ್ಸ್ ತಂಡವನ್ನು ಭಾರತ ಎದುರಿಸಲಿದೆ. ಆ ಪಂದ್ಯದಲ್ಲಿ ಗೆದ್ದರೆ ಮಾತ್ರ ರಾಜಪ್ರಿಯದರ್ಶಿನಿ ಬಳಗ ವಲಯದಲ್ಲಿ ಉಳಿಯಲಿದೆ.

ಕಳೆದ ಬಾರಿ ಮೊದಲ ಸಲ ’ಎ’ ವಲಯಕ್ಕೆ ತೇರ್ಗಡೆ ಹೊಂದಿದ ಭಾರತ ‘ಎ’ ಗುಂಪಿನ ಮೊದಲೆರಡೂ ಪಂದ್ಯಗಳನ್ನು ಸೋತಿತ್ತು. ಸೆಮಿಫೈನಲ್ ಕ್ವಾಲಿಫೈಯರ್ಸ್‌ಗೆ ಅರ್ಹತೆ ಪಡೆಯಬೇಕಾದರೆ ಗುರುವಾರ ಜಯ ಅನಿವಾರ್ಯವಾಗಿತ್ತು. ಆದರೆ ಏಷ್ಯಾಕಪ್‌ನಲ್ಲಿ ಚೀನಾ ತೈಪೆ ವಿರುದ್ಧ ಒಮ್ಮೆಯೂ ಜಯಿಸದ ತಂಡಕ್ಕೆ ‘ಮೊದಲ’ ಜಯದ ಆಸೆ ಈಡೇರಿಸಿಕೊಳ್ಳಲು ಆಗಲೇ ಇಲ್ಲ.

ಪಂದ್ಯದ ಮೊದಲ ಪಾಯಿಂಟ್ ಗಳಿಸಿದ್ದು ಭಾರತ. ಎರಡನೇ ನಿಮಿಷದಲ್ಲಿ ಶಿರೀನ್‌ ಲಿಮಯೆ 2 ಪಾಯಿಂಟ್ ಗಳಿಸಿದಾಗ ಭಾರತದ ಪಾಳಯದಲ್ಲಿ ಸಂಭ್ರಮ ಅಲೆಯಾಡಿತು. ಆದರೆ ಮರು ಗಳಿಗೆಯಲ್ಲೇ ಪಿಂಗ್ ಜೆನ್ ಹ್ಯಾಂಗ್ 3 ಪಾಯಿಂಟ್ ಗಳಿಸಿ ತಿರುಗೇಟು ನೀಡಿದರು. ನಂತರ ತೈಪೆ ಆಟಗಾರ್ತಿಯರು ಆಧಿಪತ್ಯ ಸ್ಥಾಪಿಸಿದರು. ಐದು ನಿಮಿಷಗಳ ನಂತರ ಪಂದ್ಯದ ಗತಿಯೇ ಬದಲಾಯಿತು. ಆಕ್ರಮಣಕಾರಿ ಆಟಕ್ಕೆ ಮುಂದಾದ ತೈಪೆ ಮೊದಲ ಕ್ವಾರ್ಟರ್‌ ತಮ್ಮದಾಗಿಸಿಕೊಂಡಿತು.

ಮುದ ನೀಡಿದ ಭಾರತ ತಂಡದ ಆಟ:ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರು ತವರಿನ ಪ್ರೇಕ್ಷಕರನ್ನು ಮುದಗೊಳಿಸಿದರು. ಕರ್ನಾಟಕದ ನವನೀತ ಪಟ್ಟೆಮನೆ ಅವರೊಂದಿಗೆ ಜೀನಾ ಸ್ಕರಿಯಾ ಮತ್ತು ಲಿಯಮೆ ಅವರ ಆಟ ರಂಗೇರಿತು. ಹೀಗಾಗಿ ತಂಡ ಮೇಲುಗೈ ಸಾಧಿಸಿತು. ಆದರೆ, 24–41ರ ಹಿನ್ನಡೆಯೊಂದಿಗೆ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ಭಾರತದ ಆಟಗಾರ್ತಿಯರನ್ನು ತೈಪೆ ನಿರಾಸೆಗೊಳಿಸಿತು.

ಸತತ ಮುನ್ನಡೆ ಉಳಿಸಿಕೊಂಡ ಆ ತಂಡ ಗೆಲುವಿನ ಕೇಕೆ ಹಾಕಿತು.ತೈಪೆ ಪರ ಯೂ ಟಿಂಗ್ ಲಿನ್ 15, ಸುಯಿ ಚೆಂಗ್ 14 ಮತ್ತು ಟಿಂಗ್ ಹ್ಯಾಂಗ್ 13 ಪಾಯಿಂಟ್ ಗಳಿಸಿದರು. ಭಾರತಕ್ಕೆ ಲಿಮಯೆ 13 ಪಾಯಿಂಟ್ ಗಳಿಸಿಕೊಟ್ಟರೆ ಮಧು ಕುಮಾರಿ ಮತ್ತು ಜೀನಾ ಸ್ಕರಿಯ ತಲಾ 9 ಪಾಯಿಂಟ್ಸ್‌ ಗಳಿಸಿದರು.

ಜಪಾನ್, ಚೀನಾ ಪಾರಮ್ಯ; ಸೆಮಿಗೆ ಲಗ್ಗೆ

ಸತತ ನಾಲ್ಕನೇ ಪ್ರಶಸ್ತಿ ಕನಸು ಹೊತ್ತಿರುವ ಜಪಾನ್ ಮತ್ತು ಮಾಜಿ ಚಾಂಪಿಯನ್ ಚೀನಾ ತಂಡಗಳು ಟೂರ್ನಿಯಲ್ಲಿ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದವು. ಗುರುವಾರ ಸಂಜೆ ನಡೆದ ‘ಎ’ ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ ಜಪಾನ್ 102–61ರಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿತು.‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಚೀನಾ ಕೇವಲ ಒಂದು ಪಾಯಿಂಟ್‌ನಿಂದ (70–69) ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT