ಶುಕ್ರವಾರ, ಜುಲೈ 1, 2022
23 °C

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ಬಾಕ್ಸರ್ ಡಿಂಕೊ ಸಿಂಗ್‌ (42) ಗುರುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಬಾಂಟಮ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಡಿಂಕೊ ಸಿಂಗ್‌ ಅತ್ಯಮೋಘ ಪಂಚಿಂಗ್‌ ಮತ್ತು ಉತ್ತಮ ವ್ಯಕ್ತಿತ್ವದ ಮೂಲಕ ಯುವ ಬಾಕ್ಸರ್‌ಗಳ ಮೇಲೆ ಪ್ರಭಾವ ಬೀರಿದ್ದರು. 2017ರಿಂದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಕಳೆದ ವರ್ಷ ಜಾಂಡಿಸ್ ಮತ್ತು ಕೋವಿಡ್ ಕೂಡ ಕಾಡಿತ್ತು.

1988ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಮಣಿಪುರದ ಡಿಂಕೊ ಸಿಂಗ್‌ 10ನೇ ವಯಸ್ಸಿನಲ್ಲಿ ಸಬ್‌ ಜೂನಿಯರ್ ವಿಭಾಗದಲ್ಲಿ ಮೊದಲ ರಾಷ್ಟ್ರೀಯ ಪದಕ ಗೆದ್ದಿದ್ದರು. ಆಧುನಿಕ ಕಾಲದ ಮೊದಲ ಪ್ರಭಾವಿ ಬಾಕ್ಸರ್‌ ಎಂದೆನಿಸಿಕೊಂಡಿದ್ದ ಅವರು ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ.ಮೇರಿ ಕೋಮ್ ಸೇರಿದಂತೆ ಪ್ರಮುಖರಿಗೆ ಪ್ರೇರಣೆಯಾಗಿದ್ದರು.

ಒಲಿಂಪಿಕ್‌ ಪದಕ ವಿಜೇತರಾದ ಥಾಯ್ಲೆಂಡ್‌ನ ಸೊಂಟಾಯ ವೊಂಗ್‌ಪ್ರೇಟ್ಸ್‌ ಮತ್ತು ಉಜ್ಬೆಕಿಸ್ತಾನದ ತಿಮುರ್ ಟುಲ್ಯಕೊವ್‌ ಅವರನ್ನು ಮಣಿಸಿ ಏಷ್ಯನ್ ಗೇಮ್ಸ್‌ನಲ್ಲಿ ಡಿಂಕೊ ಚಿನ್ನ ಗಳಿಸಿದ್ದರು. ಅದು ಭಾರತ ಬಾಕ್ಸಿಂಗ್‌ನಲ್ಲಿ ಪ್ರಮುಖ ಮೈಲುಗಲ್ಲಾಗಿ ದಾಖಲಾಗಿದೆ. ಆ ಕೂಟಕ್ಕೆ ಅವರನ್ನು ಮೊದಲು ಆಯ್ಕೆ ಮಾಡಿರಲಿಲ್ಲ. ಇದರಿಂದ ನೊಂದು ಪ್ರತಿಭಟನೆ ಮಾಡಿದ್ದರು. ಹೀಗಾಗಿ ಕೊನೆಯ ಕ್ಷಣದಲ್ಲಿ ಭಾರತ ತಂಡದೊಂದಿಗೆ ಕಳುಹಿಸಲಾಗಿತ್ತು.

ಪದಕ ಗೆದ್ದ ನಂತರ ಅವರಿಗೆ ಅರ್ಜನ ಪ್ರಶಸ್ತಿ ಒಲಿದಿತ್ತು. 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಅವರಿಗೆ ಸಂದಿತ್ತು. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದಾರೆ. ನಿವೃತ್ತರಾದ ನಂತರ ಇಂಫಾಲದ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಕೋಚ್ ಆಗಿದ್ದರು. ನೌಕಾಪಡೆಯ ಉದ್ಯೋಗಿಯೂ ಆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು