ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: ಎಲುಬು ಮುರಿದರೂ ಎದೆಗುಂದದ ಬ್ರೌನ್

ತಲೆ ಬುರುಡೆಗೆ ಪೆಟ್ಟು ಬಿದ್ದು, ಮಣಿಗಂಟು–ಕೈ ಮುರಿದ ಸ್ಕೇಟ್‌ಬೋರ್ಡ್‌ ಕ್ರೀಡಾಪಟು
Last Updated 21 ಜುಲೈ 2021, 16:09 IST
ಅಕ್ಷರ ಗಾತ್ರ

ನವದೆಹಲಿ: ತಲೆಬುರುಡೆಯ ವಿವಿಧ ಕಡೆ ಗಾಯಗಳಾಗಿದ್ದು, ಮಣಿಗಂಟು ಮತ್ತು ಕೈಯ ಎಲುಬು ಮುರಿದರೂ 13 ವರ್ಷದ ಸ್ಕೇಟ್‌ಬೋರ್ಡ್ ಪಟು ಸ್ಕೈ ಬ್ರೌನ್ ಅವರು ತಮ್ಮ ಕನಸನ್ನು ಕೈಚೆಲ್ಲಲಿಲ್ಲ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅತಿ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಒಳಗಾಗಿರುವ ಅವರು ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

‘ಬಾಲ ಪ್ರತಿಭೆ’ ಬ್ರೌನ್ ಈ ವರ್ಷದ ಮೇ ತಿಂಗಳಲ್ಲಿ ತರಬೇತಿ ಸಂಧರ್ಭಧಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದರು. ಇಳಿಜಾರಾದ ಎರಡು ಹಲಿಗೆಗಳ ನಡುವಿನಿಂದ ಜಿಗಿಯಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡ ಅವರು 15 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದರು.

‘ಅಂದಿನ ಆ ದುರ್ಘಟನೆಯನ್ನು ನೆನಪಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ. ಆ ದುರ್ದಿನವನ್ನು ಮರೆತು ಸ್ಕೇಟಿಂಗ್ ಮಾಡಲು ಪ್ರಯತ್ನಿಸುತ್ತೇನೆ. ಈಗ ಹಳೆಯ ತಂತ್ರಗಳಿಗೆ ಮೊನಚು ತುಂಬುವ ಹುಮ್ಮಸ್ಸಿನಲ್ಲಿದ್ದೇನೆ’ ಎಂದು ಅವರು ಹೇಳಿದರು. ಅವರ ಕುರಿತು ಸಿದ್ಧಪಡಿಸಿರುವ ‘ರೀಚಿಂಗ್ ದ ಸ್ಕೈ’ ಸಾಕ್ಷ್ಯಚಿತ್ರ ಪ್ರಸಾರಗೊಂಡಿದೆ.

‘ಫ್ರಂಟ್ ಅಲೀ ವೂಪ್ ಎಂಬ ತಂತ್ರ ಬಳಸಿ ಜಿಗಿಯುವಾಗ ಕೆಳಕ್ಕೆ ಬಿದ್ದಿದ್ದೆ. ಗಾಳಿಯಲ್ಲಿ ದೇಹವನ್ನು ಬಳುಕಿಸುವಾಗ ಹಿಂದೆ ಏನಿದೆ ಎಂದು ಕಾಣಲು ಸಾಧ್ಯವಾಗಲಿಲ್ಲ. ಹಲಗೆ ಮೇಲೆ ಕಾಲೂರಲು ಸಾಧ್ಯವಾಗುವ ಪರಿಸ್ಥಿತಿಯಲ್ಲಿಲ್ಲ ಎಂದು ಕೆಳಗೆ ಬೀಳುತ್ತಿದ್ದಾಗಲೇ ನನಗೆ ಮನವರಿಕೆಯಾದದ್ದು’ ಎಂದು ಅವರು ವಿವರಿಸಿದರು.

‘ಗಾಯಗೊಂಡ ನಂತರ ನನ್ನನ್ನು ಹೆಲಿಕ್ಯಾಪ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು ಏಂದೂ ಅನಂತರ ಏನಾಯಿತು ಎಂದೂ ತಂದೆ ತಾಯಿ ವಿವರಿಸಿದ ಮೇಲೆಯೇ ಅವರಿಗೆ ತಿಳಿದದ್ದು. ನೆತ್ತರ ಧಾರೆ ಹರಿದಿತ್ತು ಎಂದು ಅವರು ತಿಳಿಸಿದ್ದರು. ಅದೇನೇ ಇರಲಿ, ಎಲ್ಲದರ ಕೊನೆಯಲ್ಲಿ ಅಂಗಣಕ್ಕೆ ವಾಪಸಾಗಲು ಸಾಧ್ಯವಾದದ್ದು ಸಮಾಧಾನ ತಂದಿದೆ’ ಎಂದು ತಿಳಿಸಿದರು.

ಸ್ಕೇಟ್ ಬೋರ್ಡಿಂಗ್ ಕ್ರೀಡೆಯನ್ನು ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ. ಈ ವಿಷಯ ತಿಳಿದಾಗಲೇ ಪಾಲ್ಗೊಳ್ಳುವ ಆಸೆ ಬ್ರೌನ್ ಅವರಲ್ಲಿ ಉಂಟಾಗಿತ್ತು. ಅಪಘಾತಕ್ಕೆ ಒಳಗಾದ ನಂತರ ಇದಕ್ಕೆ ಪೆಟ್ಟು ಬಿತ್ತು. ಆದರೆ ಚೇತರಿಸಿಕೊಂಡ ಅವರು ಈಗ ಸ್ಪರ್ಧೆಗೆ ಪೂರ್ಣವಾಗಿ ಸಜ್ಜಾಗಿದ್ದಾರೆ. ಆದರೆ ಅವರ ಪಾಲಕರು ಈಗಲೂ ಆತಂಕದಲ್ಲೇ ಇದ್ದಾರೆ.

2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಬ್ರೌನ್‌ ಒಲಿಂಪಿಕ್ಸ್‌ನಲ್ಲಿ ಪಾರ್ಕ್ ಸ್ಕೇಟ್‌ಬೋರ್ಡಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. 13 ವರ್ಷ 23 ದಿನಗಳ ಅವರು 1928ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಈಜುಪಟು ಮಾರ್ಗರಿ ಹಿಲ್ಟನ್ ದಾಖಲೆಯನ್ನು ಮುರಿಯಲಿದ್ದಾರೆ. ಹಿಲ್ಟನ್ 13 ವರ್ಷ 44 ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ 8,40,000 ಹಿಂಬಾಲಕರನ್ನು ಹೊಂದಿರುವ ಬ್ರೌನ್ ತಮ್ಮ ಸಾಧನೆ ಬಾಲಕಿಯರಿಗೆ ಸ್ಫೂರ್ತಿಯಾದರೆ ಸಾಕು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT