ಟೋಕಿಯೊ: ಒಲಿಂಪಿಕ್ಸ್ ಕೂಟದ ಪ್ರಮುಖ ಸ್ಪರ್ಧೆಗಳು ನಡೆಯಲಿರುವ ಟೋಕಿಯೊದಲ್ಲಿ ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಿರುವ ಬೆನ್ನಲ್ಲೇ ಸಮೀಪದ ಫುಕುಶಿಮಾ ಮತ್ತು ಸಪೊರೊದಲ್ಲೂ ಪ್ರೇಕ್ಷಕರನ್ನು ಒಳಗೆ ಬಿಡದೇ ಇರಲು ಆಯೋಜಕರು ನಿರ್ಧರಿಸಿದ್ದಾರೆ.
ಒಲಿಂಪಿಕ್ಸ್ ಆರಂಭಗೊಳ್ಳಲು ಎರಡು ವಾರಗಳು ಬಾರಿ ಇದೆ. ಈಗಲೂ ಕೋವಿಡ್ ಸೋಂಕು ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಟೋಕಿಯೊ ಮತ್ತು ಸಮೀಪದ ಮೂರು ಅಂಗಣಗಳಿಗೆ ಪ್ರೇಕ್ಷಕರನ್ನು ಬಿಡದೇ ಇರಲು ಸ್ಥಳೀಯ ಆಯೋಜಕರು ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕಳೆದ ವಾರ ನಿರ್ಧರಿಸಿತ್ತು.
ಫುಕುಶಿಮಾ ಪ್ರದೇಶವು ಈಶಾನ್ಯ ಜಪಾನ್‌ನಲ್ಲಿದ್ದು ಇಲ್ಲಿ ಬ್ಯಾಸ್ಕೆಟ್‌ಬಾಲ್ ಮತ್ತು ಸಾಫ್ಟ್‌ಬಾಲ್ ಸ್ಪರ್ಧೆಗಳು ನಡೆಯಲಿವೆ. ಉತ್ತರ ಜಪಾನ್‌ನಲ್ಲಿರುವ ಸಪೊರೊದ ಹೊಕೈಡೊದಲ್ಲಿ ಫುಟ್‌ಬಾಲ್ ಪಂದ್ಯಗಳು ನಡೆಯಲಿವೆ.
ಶೂಟಿಂಗ್: ಬದಲಿ ಅಥ್ಲೀಟ್‌ಗೆ ಅವಕಾಶ
ನವದೆಹಲಿ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಮಿಶ್ರ ಶೂಟಿಂಗ್ ತಂಡದಲ್ಲಿ ಯಾರಿಗಾದರೂ ಕೋವಿಡ್ ಸೋಂಕು ತಗುಲಿದರೆ ಬದಲಿ ಶೂಟರ್‌ಗೆ ಅವಕಾಶ ನೀಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಒಪ್ಪಿಗೆ ನೀಡಿದೆ.
100 ದೇಶಗಳ 356 ಶೂಟರ್‌ಗಳು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ ಮತ್ತು 10 ಮೀಟರ್ಸ್ ಏರ್ ಪಿಸ್ತೂಲು ವಿಭಾಗದಲ್ಲಿ ಅತಿ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಬದಲಿ ಶೂಟರ್ ಕಣಕ್ಕೆ ಇಳಿಸಲು ಅವಕಾಶ ಇಲ್ಲ.
ಕೋವಿಡ್ ಕಾಡಿದರೆ ಕಂಚಿನ ಪದಕದ ಪಂದ್ಯ ಇಲ್ಲ
ಒಲಿಂಪಿಕ್ಸ್ ಹಾಕಿಯಲ್ಲಿ ಫೈನಲ್ ಪ್ರವೇಶಿಸಿದ ತಂಡ ಕೋವಿಡ್‌ನಿಂದಾಗಿ ಕಣಕ್ಕೆ ಇಳಿಯದೇ ಇದ್ದರೆ ಆ ತಂಡದ ಎದುರು ಸೆಮಿಫೈನಲ್‌ನಲ್ಲಿ ಸೋತ ತಂಡಕ್ಕೆ ಫೈನಲ್‌ಗೆ ಬಡ್ತಿ ನೀಡಲಾಗುವುದು. ಹಾಗೆ ಆದರೆ ಕಂಚಿನ ಪದಕದ ಪಂದ್ಯ ಇರುವುದಿಲ್ಲ.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಅಂತರರಾಷ್ಟ್ರೀಯ ಫೆಡರೇಷನ್‌ಗಳ ಜೊತೆ ಚರ್ಚಿಸಿದ ನಂತರ ಒಲಿಂಪಿಕ್ಸ್‌ನ ಸ್ಪೋರ್ಟ್ಸ್ ಸ್ಪೆಸಿಫಿಕ್ ರೆಗುಲೇಷನ್ಸ್ (ಎಸ್‌ಎಸ್ಆರ್) ಈ ವಿಷಯವನ್ನು ಭಾನುವಾರ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.