ಭಾನುವಾರ, ಡಿಸೆಂಬರ್ 15, 2019
26 °C
13ನೇ ನಿಮಿಷದಲ್ಲಿ ಗೋಲು ಗಳಿಸಿದ ವ್ಯಾಲೆಂಟೀನ್ ವೆರ್ಗಾ; ಮಾರ್ಟಿನ್ ಹ್ಯಾನರ್‌ಗೆ ಭಾರಿ ಜಯ

10 ನಿಮಿಷದಲ್ಲಿ 3 ಗೋಲು ಗಳಿಸಿದ ಜರ್ಮನಿ: ನೆದರ್ಲೆಂಡ್ಸ್‌ಗೆ ಸೋಲು

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಭುವನೇಶ್ವರ: ಮಲೇಷ್ಯಾ ಎದುರು ಏಕಪಕ್ಷೀಯವಾದ ಏಳು ಗೋಲುಗಳ ಗೆಲುವು ಸಾಧಿಸಿದ್ದ ನೆದರ್ಲೆಂಡ್ಸ್‌ ತಂಡ ವಿಶ್ವಕಪ್‌ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ನಿರಾಸೆಗೆ ಒಳಗಾಯಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ತಂಡ ಜರ್ಮನಿಗೆ 4–1ರಿಂದ ಮಣಿಯಿತು.

ಮೊದಲಾರ್ಧದಲ್ಲಿ ಒಂದು ಮತ್ತು ದ್ವಿತೀಯಾರ್ಧದಲ್ಲಿ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಬಿಟ್ಟುಕೊಟ್ಟದ್ದು ನೆದರ್ಲೆಂಡ್ಸ್‌ಗೆ ಮುಳುವಾಯಿತು.

ಈ ಹಿಂದೆ ಮೂರು ಬಾರಿ ಮುಖಾಮುಖಿಯಾಗಿದ್ದಾಗ ಜರ್ಮನಿ ಎರಡು ಬಾರಿ ಮತ್ತು ನೆದರ್ಲೆಂಡ್ಸ್‌ ಒಮ್ಮೆ ಗೆದ್ದಿತ್ತು. ಈ ಬಾರಿಯ ಮೊದಲ ಪಂದ್ಯದಲ್ಲಿ ಜರ್ಮನಿ, ಪಾಕಿಸ್ತಾನ ವಿರುದ್ಧ ಪ್ರಯಾಸದಿಂದ (1–0) ಗೆದ್ದಿತ್ತು. ಆದರೆ ಬುಧವಾರ ಅಮೋಘ ಆಟದ ಮೂಲಕ ಮಾರ್ಟಿನ್ ಹ್ಯಾನರ್‌ ಬಳಗ ಎದುರಾಳಿ ತಂಡದ ಸವಾಲನ್ನು ಮೀರಿತು.

ಪಂದ್ಯದಲ್ಲಿ ಮೊದಲ ಗೋಲು ಹೊಡೆದು ನೆದರ್ಲೆಂಡ್ಸ್ ಸಂಭ್ರಮಿಸಿತು. 13ನೇ ನಿಮಿಷದಲ್ಲಿ ವ್ಯಾಲೆಂಟೀನ್ ವೆರ್ಗಾ ತೋರಿದ ಕಾಲ್ಚಳಕಕ್ಕೆ ತಂಡ ಪುಳಕಗೊಂಡಿತು. ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಜರ್ಮನಿ ತಿರುಗೇಟು ನೀಡಿತು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮಥಾಯಸ್‌ ಮುಲ್ಲರ್ ಚೆಂಡನ್ನು ಗುರಿ ಸೇರಿಸಿ ತಂಡಕ್ಕೆ ಸಮಬಲ ತಂದುಕೊಟ್ಟರು.

ಪ್ರಥಮಾರ್ಧದ ಎರಡೂ ಕ್ವಾರ್ಟರ್‌ಗಳಲ್ಲಿ ನೆದರ್ಲೆಂಡ್ಸ್ ಆಕ್ರಮಣಕಾರಿ ಆಟದ ಮೂಲಕ ಅಬ್ಬರಿಸಿತು. ಜರ್ಮನಿ ಕೂಟ ಪ್ರತಿ ದಾಳಿ ನಡೆಸಿತು. ಮೊದಲ ಕ್ವಾರ್ಟರ್‌ನಲ್ಲಿ ನೆದರ್ಲೆಂಡ್ಸ್ ಏಳು ಬಾರಿ ಎದುರಾಳಿ ಆವರಣವನ್ನು ಪ್ರವೇಶಿಸಿದರೆ, ಜರ್ಮನಿ ಐದು ಬಾರಿ ಎದುರಾಳಿ ಪಾಳಯದಲ್ಲಿ ಆತಂಕ ಸೃಷ್ಟಿಸಿತು. ಆದರೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೈಚೆಲ್ಲಿತು.

ಎರಡನೇ ಕ್ವಾರ್ಟರ್‌ನಲ್ಲೂ ಉಭಯ ತಂಡಗಳ ಆಕ್ರಮಣಕಾರಿ ಆಟ ಮುಂದುವರಿಯಿತು. ಜರ್ಮನಿಗೆ ಈ ಅವಧಿಯಲ್ಲಿ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದವು. ಎರಡನೇ ಅವಕಾಶವನ್ನು ಅದು ಸದುಪಯೋಗ ಮಾಡಿಕೊಂಡಿತು.

ರಕ್ಷಣಾತ್ಮಕ ಆಟಕ್ಕೆ ಮೊರೆ: 1–1ರ ಸಮಬಲದೊಂದಿಗೆ ವಿರಾಮಕ್ಕೆ ತೆರಳಿದ ತಂಡಗಳು ದ್ವಿತೀಯಾರ್ಧದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದವು. ಹೀಗಾಗಿ ಗೋಲು ಗಳಿಸುವ ಆಸೆ ಕಮರಿತು. ಕೊನೆಯ ಅವಧಿಯಲ್ಲೂ ಪಂದ್ಯ ರೋಚಕವಾಯಿತು.

ಮುನ್ನಡೆಗಾಗಿ ಎರಡೂ ತಂಡಗಳು ಜಿದ್ದಾಜಿದ್ದಿಯ ಹೋರಾಟಕ್ಕೆ ಮುಂದಾದವು. ಕೊನೆಯ 10 ನಿಮಿಷಗಳಲ್ಲಿ ಮೂರು ಗೋಲು ಗಳಿಸಿದ ಜರ್ಮನಿ ಗೆಲುವು ತನ್ನದಾಗಿಸಿಕೊಂಡಿತು. 52ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಲೂಕಾಸ್ ವಿಂಡ್‌ಫೆಡರ್‌ ಗೋಲಾಗಿ ಪರಿವರ್ತಿಸಿದರು. ಎರಡು ನಿಮಿಷಗಳ ಅಂತರದಲ್ಲಿ ಮಾರ್ಕೊ ಮಿಲ್ಟಾಕು ಫೀಲ್ಡ್ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ಕೊನೆಯ ಎರಡು ನಿಮಿಷಗಳ ಬಾಕಿ ಇದ್ದಾಗ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಿಟ್ಟುಕೊಟ್ಟು ನೆದರ್ಲೆಂಡ್ಸ್‌ ನಿರಾಸೆಗೆ ಒಳಗಾಯಿತು. ಕ್ರಿಸ್ಟೊಫರ್‌ ರುಹರ್ ಚೆಂಡನ್ನು ಗುರಿ ಸೇರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು