ಶನಿವಾರ, ಜನವರಿ 16, 2021
24 °C

ಅರ್ಜೆಂಟೀನಾ ಎದುರು ಉತ್ತಮ ಆಟವಾಡಿದರೆ ಆತ್ಮವಿಶ್ವಾಸ ವೃದ್ಧಿ: ರಾಣಿ ರಾಂಪಾಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅರ್ಜೆಂಟೀನಾ ವಿರುದ್ಧದ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ಆತ್ಮವಿಶ್ವಾಸ ವೃದ್ಧಿಸಲಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌–19 ಪಿಡುಗಿನಿಂದ ಬಹುತೇಕ ಒಂದು ವರ್ಷ ಸ್ಥಗಿತಗೊಂಡಿದ್ದ ಮಹಿಳಾ ಹಾಕಿ ತಂಡದ ಚಟುವಟಿಕೆಗಳು, ಮುಂದಿನ ವಾರ ನಡೆಯಲಿರುವ ಅರ್ಜೆಂಟೀನಾ ಪ್ರವಾಸದ ಮೂಲಕ ಪುನರಾರಂಭಗೊಳ್ಳುತ್ತಿವೆ. ಈ ಮೂಲಕ ಒಲಿಂಪಿಕ್ಸ್‌ಗೂ ರಾಣಿ ರಾಂಪಾಲ್ ಬಳಗ ಸಜ್ಜುಗೊಳ್ಳುತ್ತಿದೆ.

‘ಅರ್ಜೆಂಟೀನಾ ತಂಡದ ಎದುರು ಉತ್ತಮ ಆಟವಾಡಿದರೆ, ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳುತ್ತಿರುವ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಪದಕ ಗೆಲ್ಲುವ ಗುರಿಯೊಂದಿಗೇ ಟೋಕಿಯೊ ಕೂಟದಲ್ಲಿ ಕಣಕ್ಕಿಳಿಯಲಿದ್ದೇವೆ‘ ಎಂದು ರಾಣಿ ಹೇಳಿದ್ದಾಗಿ ಹಾಕಿ ಇಂಡಿಯಾ ಉಲ್ಲೇಖಿಸಿದೆ.

ಆತಿಥೇಯ ಅರ್ಜೆಂಟೀನಾ ವಿರುದ್ಧ ಜನವರಿ 17ರಿಂದ 31ರವರೆಗೆ ನಡೆಯಲಿರುವ ಸರಣಿಯಲ್ಲಿ ಎಂಟು ಪಂದ್ಯಗಳಲ್ಲಿ ಭಾರತ ಕಣಕ್ಕಿಳಿಯಲಿದೆ.

‘ಅಂತರರಾಷ್ಟ್ರೀಯ ಟೂರ್ನಿಗೆ ಮರಳಲು ನಾವು ಉತ್ಸುಕರಾಗಿದ್ದೇವೆ. 2020 ನಿಜಕ್ಕೂ ಸವಾಲಿನ ವರ್ಷವಾಗಿತ್ತು. ಆದರೂ ರಾಷ್ಟ್ರೀಯ ಶಿಬಿರದಲ್ಲಿ ಅಭ್ಯಾಸ ಮುಂದುವರಿಸಿದೆವು. ದೀರ್ಘ ಅವಧಿಯ ವಿರಾಮದ ಬಳಿಕ ಕಣಕ್ಕಿಳಿಯುತ್ತಿದ್ದು ನಮ್ಮ ಸಾಮರ್ಥ್ಯ ಅರಿಯಲಿದ್ದೇವೆ‘ ಎಂದು ರಾಣಿ ಹೇಳಿದ್ದಾರೆ.

ಭಾರತ ಪುರುಷರ ತಂಡವು ಕೊನೆಯ ಬಾರಿ ಅಂತರರಾಷ್ಟ್ರೀಯ ಪಂದ್ಯ ಆಡಿದ್ದು 2020ರ ಫೆಬ್ರುವರಿ 22ರಂದು ಪ್ರೊ ಲೀಗ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ. ಹಾಕಿ ಇಂಡಿಯಾ, ಪುರುಷರ ತಂಡವನ್ನೂ ಕಣಕ್ಕಿಳಿಸಲು ಬೇರೆ ಬೇರೆ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ.

‘ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲು ನಾವೂ ಉತ್ಸುಕರಾಗಿದ್ದೇವೆ. ಕೆಲವೊಂದಿಷ್ಟು ಪಂದ್ಯಗಳನ್ನು ಆಡಿದರೆ ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳಲು ಅನುಕೂಲವಾಗಲಿದೆ‘ ಎಂದು ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು