ಶನಿವಾರ, ನವೆಂಬರ್ 23, 2019
17 °C
ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಹಾಕಿ ಟೂರ್ನಿ

ಮಡಿಕೇರಿ ಎಫ್‌.ಎಂ.ಸಿ ಕಾಲೇಜು ತಂಡಕ್ಕೆ ಪ್ರಶಸ್ತಿ  

Published:
Updated:
Prajavani

ಮಡಿಕೇರಿ: ಇಲ್ಲಿನ ಸಾಯಿ ಹಾಕಿ ಮೈದಾನದಲ್ಲಿ ಶನಿವಾರ ಮುಕ್ತಾಯವಾದ ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ (ಎಫ್ಎಂಸಿ) ಮಹಿಳಾ ತಂಡವು ಫೈನಲ್‌ನಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.

‘ಪುಳ್ಳಂಗಡ ಚಿಣ್ಣಪ್ಪ ಸ್ಮಾರಕ ಮಹಿಳಾ ರೋಲಿಂಗ್ ಟ್ರೋಫಿ’ಯಲ್ಲಿ ಎಫ್‌.ಎಂ.ಸಿ ಕಾಲೇಜು ತಂಡವು, ಮೂಡಬಿದರೆಯ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತಂಡದ ವಿರುದ್ಧ 1–0 ಅಂತರದಲ್ಲಿ ಜಯದ ನಗೆ ಬೀರಿತು. ಗೋಲು ಗಳಿಸಲು ಪರದಾಡಿದ ಆಳ್ವಾಸ್‌ ತಂಡದ ಆಟಗಾರರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಎಫ್‌ಎಂಸಿ ಪರವಾಗಿ ಪವಿತ್ರಾ ಮೊದಲಾರ್ಧದಲ್ಲಿ ಒಂದು ಗೋಲು ಬಾರಿಸಿ ಜಯದ ತಂದುಕೊಟ್ಟರು.

ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜು ತಂಡವು ತೃತೀಯ ಸ್ಥಾನ, ಮೂಡಬಿದರೆಯ ಆಳ್ವಾಸ್‌ ಕಾಲೇಜು ತಂಡವು ನಾಲ್ಕನೇ ಸ್ಥಾನ ಪಡೆದವು. ಒಟ್ಟು 9 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.

ಬೆಸ್ಟ್‌ ಗೋಲುಕೀಪರ್‌ ಪ್ರಶಸ್ತಿಯನ್ನು ಕೊಡಗಿನ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಗಾನಾ, ಬೆಸ್ಟ್‌ ಡಿಫೆಂಡರ್‌ ಪ್ರಶಸ್ತಿಯನ್ನು ಆಳ್ವಾಸ್‌ ದೈಹಿಕ ಶಿಕ್ಷಣ ಕಾಲೇಜು ತಂಡದ ಆಟಗಾರ್ತಿ ಚೆಲುವಾಂಬಾ, ಬೆಸ್ಟ್‌ ಆಫ್‌ ಪ್ರಶಸ್ತಿಯನ್ನು ಎಫ್‌ಎಂಸಿ ಕಾಲೇಜು ಪವಿತ್ರಾ, ಬೆಸ್ಟ್‌ ಫಾವರ್ಡ್‌ ಪ್ರಶಸ್ತಿಯನ್ನು ಎಫ್‌ಎಂಸಿ ಕಾಲೇಜಿನ ಸುಸ್ಮಿತಾ ತನ್ನದಾಗಿಸಿಕೊಂಡರು.

ಪಂದ್ಯಾವಳಿಗೆ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ತಾಂತ್ರಿಕ ಸಹಾಯಕ ಪುಳ್ಳಂಗಡ ರೋಹಿಣಿ ಬೋಪಣ್ಣ ಚಾಲನೆ ನೀಡಿ ಮಾತನಾಡಿ, ‘ಹಾಕಿ ಕ್ರೀಡೆಯ ನಿಯಮಾವಳಿ ಬದಲಾಗಿವೆ. ಕ್ರೀಡಾಪಟುಗಳು ಅವುಗಳನ್ನು ತಪ್ಪದೇ ಪಾಲಿಸಬೇಕು. ಸೋಲು–ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಎಂಬುದನ್ನು ಅರಿತು ಶ್ರದ್ಧೆಯಿಂದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗತ್ ತಿಮ್ಮಯ್ಯ ಹಾಗೂ ಹಾಕಿ ಆಟಗಾರ ಪುಳ್ಳಂಗಡ ಬೋಪಣ್ಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮೂಡಬಿದಿರೆಯ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಶ್ರೀದೇವಳ ಕಾಲೇಜು, ಮಂಗಳೂರು ವಿಶ್ವವಿದ್ಯಾಲದ ಮಂಗಳ ಗಂಗೋತ್ರಿ ತಂಡ, ಗೋಣಿಕೊಪ್ಪಲು ಕಾವೇರಿ ಕಾಲೇಜು, ಸೋಮವಾರಪೇಟೆ ಜೋಸೆಫ್ ಕಾಲೇಜು, ಮಂಗಳೂರು ಸೇಂಟ್ ಅಲೋಷಿಯಸ್‌, ಮಡಿಕೇರಿ ಎಫ್‌ಎಂಸಿ ತಂಡಗಳು ಪಾಲ್ಗೊಂಡಿದ್ದವು.  

ಪ್ರತಿಕ್ರಿಯಿಸಿ (+)