ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸುವೆ: ಭಾರತದ ಸ್ಪ್ರಿಂಟರ್ ಹಿಮಾ ದಾಸ್‌ ವಿಶ್ವಾಸ

Last Updated 12 ಜುಲೈ 2020, 13:03 IST
ಅಕ್ಷರ ಗಾತ್ರ

ನವದೆಹಲಿ: ‘ಕೊರೊನಾ ಬಿಕ್ಕಟ್ಟಿನಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಇನ್ನೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಆಗಿಲ್ಲ. ಹಾಗಂತ ಎದೆಗುಂದಿಲ್ಲ. ಕ್ರೀಡಾಕೂಟಗಳು ಪುನರಾರಂಭವಾದ ಬಳಿಕ ಶ್ರೇಷ್ಠ ಸಾಮರ್ಥ್ಯ ತೋರಿ ಟೋಕಿಯೊ ಕೂಟಕ್ಕೆ ರಹದಾರಿ ಪಡೆಯುತ್ತೇನೆ’ ಎಂದು ಭಾರತದ ಸ್ಪ್ರಿಂಟರ್‌ ಹಿಮಾ ದಾಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಮಾ ಅವರು 2018ರಲ್ಲಿ ನಡೆದಿದ್ದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಅದೇ ವರ್ಷ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು.

‘ಒಲಿಂಪಿಕ್‌ ಕ್ರೀಡಾಕೂಟವನ್ನು ಒಂದು ವರ್ಷ ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಅರ್ಹತೆಯ ಬಗ್ಗೆ ಸದ್ಯಕ್ಕೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಕೋವಿಡ್‌ ಬಿಕ್ಕಟ್ಟು ಬೇಗನೆ ಬಗೆಹರಿಯಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ. ಕೊರೊನಾ ವೈರಾಣು ಶಮನವಾದರೆ ಡಿಸೆಂಬರ್‌ 1ರಿಂದ ಅಥ್ಲೆಟಿಕ್ಸ್‌ ಚಟುವಟಿಕೆಗಳು ಗರಿಗೆದರುತ್ತವೆ’ ಎಂದು ಅವರು ತಿಳಿಸಿದ್ದಾರೆ.

ಸೊಂಟದ ನೋವು ಪದೇ ಪದೇ ಬಾಧಿಸುತ್ತಿರುವ ಕಾರಣ 400 ಮೀಟರ್ಸ್‌ನಿಂದ ದೂರ ಉಳಿದು 200 ಮೀಟರ್ಸ್‌ನತ್ತ ಮಾತ್ರ ಚಿತ್ತ ಹರಿಸಲು ಹಿಮಾ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಅವರು ‘ಗಾಯದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. 200 ಮತ್ತು 400 ಮೀಟರ್ಸ್‌ ಪೈಕಿ ಯಾವುದರಲ್ಲಿ ಪಾಲ್ಗೊಳ್ಳುವುದು ಸೂಕ್ತ ಎಂಬುದರ ಬಗ್ಗೆ ನನ್ನ ಕೋಚ್‌ ಹಾಗೂ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಎಎಫ್‌ಐ) ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ತೀರ್ಮಾನಕ್ಕೆ ನಾನು ಬದ್ಧಳಾಗಿರುತ್ತೇನೆ’ ಎಂದಿದ್ದಾರೆ.

‘ಸದ್ಯ ಪಟಿಯಾಲದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಎನ್‌ಐಎಸ್‌) ಕೇಂದ್ರದಲ್ಲಿದ್ದೇನೆ. ಈಗ ಯಾವುದೇ ಟೂರ್ನಿಗಳು ಇಲ್ಲದಿರುವುದರಿಂದ ಪೂರ್ಣ ಪ್ರಮಾಣದ ತರಬೇತಿ ಶುರುಮಾಡಿಲ್ಲ. ಇಲ್ಲಿ ಗರಿಷ್ಠ ಮಟ್ಟದ ತಾಪಮಾನ ಇದೆ. ಹೀಗಾಗಿ ಮುಂಜಾನೆಯ ಸಮಯದಲ್ಲಷ್ಟೇ ಕೊಂಚ ಅಭ್ಯಾಸ ಮಾಡುತ್ತಿದ್ದೇವೆ’ ಎಂದೂ ಹಿಮಾ ಮಾಹಿತಿ ನೀಡಿದ್ದಾರೆ.

‘ಸೆಪ್ಟೆಂಬರ್‌ 12ರಿಂದ ದೇಶಿಯ ಕೂಟಗಳನ್ನು ಆರಂಭಿಸಲು ಎಎಫ್‌ಐ ಚಿಂತಿಸಿದೆ. ಈ ಬಗ್ಗೆ ನಮಗೂ ಮಾಹಿತಿ ನೀಡಲಾಗಿದೆ. ಆದರೆ ಈಗ ಎಲ್ಲೆಡೆಯೂ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಒಂದೊಮ್ಮೆ ಕೂಟಗಳನ್ನು ಆಯೋಜಿಸಿದರೆ ಅದರಲ್ಲಿ ಪಾಲ್ಗೊಳ್ಳಲು ದೇಶದ ಎಲ್ಲಾ ಭಾಗಗಳಿಂದಲೂ ಕ್ರೀಡಾಪಟುಗಳು ಬರುತ್ತಾರೆ. ಇದರಿಂದ ಅಪಾಯವೇ ಹೆಚ್ಚು. ಈ ವಿಚಾರದಲ್ಲಿ ಎಎಫ್‌ಐ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT