ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ನೈರುತ್ಯ ರೈಲ್ವೆ ತಂಡಕ್ಕೆ ಭರ್ಜರಿ ಜಯ

Last Updated 8 ಮೇ 2022, 6:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆ ತಂಡ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಅಂತರರಾಜ್ಯ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು. ಸೆಟ್ಲ್‌ಮೆಂಟ್‌ ಹಾಕಿ ಅಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೊಲ್ಹಾಪುರದ ಶಾಹು ಮಹಾರಾಜ್ ಎದುರು ರೈಲ್ವೆ 5–1ರಲ್ಲಿ ಜಯ ಗಳಿಸಿತು.

ರೈಲ್ವೆ ಪರವಾಗಿ ಶ್ರೀಧರ ಹ್ಯಾಟ್ರಿಕ್‌ ಗೋಲಿನೊಂದಿಗೆ ಮಿಂಚಿದರು. 13, 22 ಹಾಗೂ 55ನೇ ನಿಮಿಷಗಳಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಸಮಂತ 47 ನೇ ನಿಮಿಷದಲ್ಲಿ ಮತ್ತು ಲಿಖಿತ್ 58ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎದುರಾಳಿ ತಂಡಕ್ಕಾಗಿ ಪಾರಸ್ 35ನೇ ನಿಮಿಷದಲ್ಲಿ ಯಶಸ್ಸು ಕಂಡರು.

ಗದಗ ಹನುಮಾನ್ ಬ್ಲೆಸಿಂಗ್ 2–1ರಲ್ಲಿ ಕೊಲ್ಹಾಪುರದ ಎಂ.ಕೆ.ಎಂ ತಂಡವನ್ನು ಮಣಿಸಿತು. 12ನೇ ನಿಮಿಷದಲ್ಲಿ ಸಮೀರ್ ಭೋಸ್ಲೆ ಗಳಿಸಿದ ಗೋಲಿನೊಂದಿಗೆ ಕೊಲ್ಹಾಪುರ ತಂಡ ಮುನ್ನಡೆ ಸಾಧಿಸಿತು. ಕೊನೆಯ ಕ್ವಾರ್ಟರ್‌ನಲ್ಲಿ ಹರೀಶ್ ಮುತಗಾರ ಮಿಂಚಿದರು. 55 ಹಾಗೂ 59ನೇ ನಿಮಿಷಗಳಲ್ಲಿ ಗೋಲು ಗಳಿಸಿ ಅವರು ಜಯ ತಂದುಕೊಟ್ಟರು.

ಬೆಂಗಳೂರಿನ ಡಿವೈಇಎಸ್ ಕೊಲ್ಹಾಪುರ ಪೊಲೀಸ್ ತಂಡಕ್ಕೆ 1–4ರಲ್ಲಿ ಮಣಿಯಿತು. ವಿನೋದ್ (28, 51ನೇ ನಿಮಿಷ) ಸತ್ಯಜಿತ್‌ (38, 59ನೇ ನಿ) ಕೊಲ್ಹಾಪುರ ಪರವಾಗಿ ಮಿಂಚಿದರು. ಡಿವೈಇಎಸ್‌ಗಾಗಿ ಪ್ರಣಾಮ್ ಗೌಡ (28ನೇ ನಿ) ಗೋಲು ಗಳಿಸಿದರು.

ಆತಿಥೇಯ ಯಂಗ್‌ಸ್ಟಾರ್ ಸ್ಪೋರ್ಟ್ಸ್‌ ಕ್ಲಬ್‌ ಕೋಲ್ಹಾಪುರದ ದೇವಗಿರಿ ಫೈಟರ್ಸ್ ತಂಡದ ವಿರುದ್ಧ 2-1ರಲ್ಲಿ ಸೋತಿತು. 7ನೇ ನಿಮಿಷದಲ್ಲಿ ಆತಿಥೇಯರಿಗಾಗಿ ವಿನಾಯಕ ಬಿಜವಾಡ ಗೋಲು ಗಳಿಸಿದರು. ಆದರೆ ಮಯೂರ್ (7ನೇ ನಿ) ಮತ್ತು ಅಭಿಷೇಕ್ (36ನೇ ನಿ) ಗಳಿಸಿದ ಗೋಲುಗಳಿಂದ ದೇವಗಿರಿ ತಂಡ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT