3

ಭರವಸೆಯ ಅಥ್ಲೀಟ್‌ ಹರ್ಷಿಣಿ

Published:
Updated:
ಆರ್.ಹರ್ಷಿಣಿ

ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಮಿಂಚು ಹರಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ಮೈಸೂರಿನ ಅಥ್ಲೀಟ್‌ಗಳಲ್ಲಿ ಆರ್.ಹರ್ಷಿಣಿ ಒಬ್ಬರು. ವೇಗದ ಓಟದಲ್ಲಿ ಪಳಗಿರುವ ಅವರು ಮುಂಬರುವ ಯೂತ್‌ ನ್ಯಾಷನಲ್ಸ್‌ನಲ್ಲಿ ಬಾಲಕಿಯರ 200 ಮೀ. ಓಟದಲ್ಲಿ ಕರ್ನಾಟಕದ ಭರವಸೆ ಎನಿಸಿಕೊಂಡಿದ್ದಾರೆ.

15ನೇ ಯೂತ್‌ ನ್ಯಾಷನಲ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಗುಜರಾತಿನ ವಡೋದರದಲ್ಲಿ ಜುಲೈ 21 ರಿಂದ 23ರ ವರೆಗೆ ನಡೆಯಲಿದೆ. 200 ಮೀಟರ್‌ ಓಟದಲ್ಲಿ ರಾಜ್ಯದಿಂದ ಅರ್ಹತೆ ಪಡೆದಿರುವ ಇಬ್ಬರು ಅಥ್ಲೀಟ್‌ಗಳಲ್ಲಿ ಹರ್ಷಿಣಿ ಒಬ್ಬರಾಗಿದ್ದಾರೆ. 4x100 ರಿಲೇನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡದಲ್ಲೂ ಅವರಿದ್ದಾರೆ.

ರಾಜ್ಯ ತಂಡದ ಆಯ್ಕೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಅವರು ಮಿಂಚಿನ ವೇಗದಲ್ಲಿ ಓಡಿದ್ದರು. 18 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಅವರು ಸ್ಪರ್ಧಿಸಲಿದ್ದಾರೆ. ನಗರದ ಹೆಬ್ಬಾಳದಲ್ಲಿ ನೆಲೆಸಿರುವ ರಾಜಶೇಖರ ಮತ್ತು ಕೆ.ಎಂ.ಆಶಾಲತಾ ಅವರ ಪುತ್ರಿ ಹರ್ಷಿಣಿ ಅವರು ಬನ್ನೂರು ರಿಂಗ್‌ ರಸ್ತೆಯಲ್ಲಿರುವ ಜೀನಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಮೈಸೂರಿನ ಡಿವೈಇಎಸ್‌ನಲ್ಲಿ ಕೋಚ್‌ ವಸಂತಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

‘ಎಳೆಯ ವಯಸ್ಸಿನಿಂದಲೇ ಕ್ರೀಡೆಯಲ್ಲಿ ಆಸಕ್ತಿಯಿತ್ತು. ಹೆತ್ತವರ ಪ್ರೋತ್ಸಾಹವೂ ದೊರೆಯಿತು. ಆರಂಭದ ವರ್ಷಗಳಲ್ಲಿ ಸ್ವ ಆಸಕ್ತಿಯಿಂದ ಅಭ್ಯಾಸ ನಡೆಸುತ್ತಿದ್ದೆ. ಕಳೆದ ಒಂದು ವರ್ಷದಿಂದ ಡಿವೈಇಎಸ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಇದರಿಂದ ಪ್ರದರ್ಶನಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ’ ಎಂದು ಹರ್ಷಿಣಿ ಹೇಳುತ್ತಾರೆ.

ಸಾಧನೆಯ ಹಾದಿ: ಹರ್ಷಿಣಿ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪದಕಗಳನ್ನು ಗೆದ್ದುಕೊಂಡಿದ್ದಾರೆ. 2017ರ ಸೆಪ್ಟೆಂಬರ್‌ನಲ್ಲಿ ಮೂಡುಬಿದಿರೆಯಲ್ಲಿ ನಡೆದಿದ್ದ ರಾಜ್ಯ ಅಮೆಚೂರ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 100ಮೀಟರ್ ಮತ್ತು 200 ಮೀಟರ್‌ ಓಟದಲ್ಲಿ ಗಮನ ಸೆಳೆದಿದ್ದರು.

ಕಳೆದ ನವೆಂಬರ್‌ನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಸೇಂಟ್ ಮೇರಿಸ್ ಸಿರಿಯನ್ ಕಾಲೇಜಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಪಿಯು ಅಥ್ಲೆಟಿಕ್‌ ಕೂಟದ 200 ಮೀಟರ್‌ ಓಟದಲ್ಲಿ ಬೆಳ್ಳಿ ಜಯಿಸಿದ್ದರು. 4x100 ಮೀಟರ್‌ ರಿಲೇ ಸ್ಪರ್ಧೆಯಲ್ಲಿ ಹರ್ಷಿಣಿ ಅವರನ್ನೊಳಗೊಂಡ ತಂಡ ಮೂರನೇ ಸ್ಥಾನ ಪಡೆದುಕೊಂಡಿತ್ತು. 200 ಮೀಟರ್‌ ಓಟವನ್ನು 25.88 ಸೆಕೆಂಡುಗಳಲ್ಲಿ ತಲುಪಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ಏಪ್ರಿಲ್‌ ತಿಂಗಳಲ್ಲಿ ಕೊಯಮತ್ತೂರಿನಲ್ಲಿ ನಡೆದ ಫೆಡರೇಷನ್ ಕಪ್‌ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 4x100 ಮೀಟರ್‌ ರಿಲೇಯಲ್ಲಿ ಹರ್ಷಿಣಿ ಅವರನ್ನೊಳಗೊಂಡ ಕರ್ನಾಟಕ ತಂಡ 48.54 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದುಕೊಂಡಿತ್ತು.

ಇನ್ನಷ್ಟು ಸಾಧಿಸುವ ಹಂಬಲ ಹೊಂದಿರುವ ಈ ಯುವ ಅಥ್ಲೀಟ್ ಮುಂಬರುವ ಯೂತ್ ನ್ಯಾಷನಲ್ಸ್‌ಗೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !