ಸೋಮವಾರ, ಸೆಪ್ಟೆಂಬರ್ 26, 2022
20 °C

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಪದಕಗಳ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಮ್: ಭಾರತದ ಕ್ರೀಡಾಪಟುಗಳ ತಂಡವು ಸತತ ಆರನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಯೂ ಪದಕ ಗಳಿಕೆಯ ‘ಅರ್ಧಶತಕ’ದತ್ತ ಹೆಜ್ಜೆಯಿಟ್ಟಿತು.

ಇಲ್ಲಿ ನಡೆಯುತ್ತಿರುವ 42ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾನುವಾರ ಐದು ಚಿನ್ನ ಸೇರಿದಂತೆ ಒಟ್ಟು ಹತ್ತು ಪದಕಗಳನ್ನು ಭಾರತದ ಅಥ್ಲೀಟ್‌ಗಳು ಜಯಿಸಿದರು. ಇದರೊಂದಿಗೆ ತಂಡದ ಪದಕ ಗಳಿಕೆಯು 49ಕ್ಕೇರಿದೆ. ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್, ಉದಯೋನ್ಮುಖ ತಾರೆ ನೀತು ಗಂಗಾಸ್ ಮತ್ತು ಅನುಭವಿ ಅಮಿತ್ ಪಂಘಾಲ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದರೆ, ಟ್ರಿಪಲ್‌ ಜಂಪ್‌ನಲ್ಲಿ ಎಲ್ದೊಸಾ ಪಾಲ್ ಬಂಗಾರದ ಕಿರೀಟ ಧರಿಸಿದರು. ಪ್ಯಾರಾ ವಿಭಾಗದ ಮಹಿಳೆಯ ಟೇಬಲ್‌ ಟೆನಿಸ್‌ನಲ್ಲಿ ಭಾವಿನಾ ಪಟೇಲ್ ಕೂಡ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

2002ರಿಂದ ಇಲ್ಲಿಯವರೆಗೆ ನಡೆದ ಪ್ರತಿ ಕಾಮನ್‌ವೆಲ್ತ್ ಕೂಟದಲ್ಲಿ ಭಾರತವು 50 ಪದಕಗಳ ಗಡಿ ದಾಟಿದೆ. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ 101 ಪದಕಗಳನ್ನು ಗಳಿಸಿದ್ದು ಇದುವರೆಗಿನ ಗರಿಷ್ಠ ದಾಖಲೆ. ಹೋದ ವರ್ಷ ಗೋಲ್ಡ್‌ಕೋಸ್ಟ್‌ನಲ್ಲಿ 66 ಪದಕಗಳನ್ನು ತಂಡವು ಜಯಿಸಿತ್ತು.

ಟ್ರಿಪಲ್‌ ಜಂಪ್‌ ಚಿನ್ನ–ಬೆಳ್ಳಿ!

ಭಾರತದ ಎಲ್ಕೊಸಾ ಪಾಲ್ ಮತ್ತು ಅಬ್ದುಲ್ಲಾ ಅಬೂಬಕ್ಕರ್ ಪುರುಷರ ಟ್ರಿಪಲ್‌ ಜಂಪ್‌ ವಿಭಾಗದಲ್ಲಿ ಕ್ರಮವಾಗಿ  ಚಿನ್ನ (17.03 ಮೀ) ಮತ್ತು ಬೆಳ್ಳಿ (17.02 ಮೀ) ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಕಾಮನ್‌ವೆಲ್ತ್ ಕೂಟದ ಇತಿಹಾಸದಲ್ಲಿ ಒಂದೇ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಮೊದಲ ಜೋಡಿ ಇದು.

ಹಾಕಿ: 16 ವರ್ಷದ ನಂತರ ಒಲಿದ ಪದಕ

ಭಾರತದ ಮಹಿಳಾ ಹಾಕಿ ತಂಡಕ್ಕೆ ಕಾಮನ್‌ವೆಲ್ತ್ ಕೂಟದಲ್ಲಿ 16 ವರ್ಷಗಳ ನಂತರ ಪದಕ ಒಲಿಯಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಎದುರು ಜಯಿಸಿ ಕಂಚಿನ ಪದಕ ಗಳಿಸಿತು.

ಕೂಟದಲ್ಲಿ ಇದುವರೆಗೆ ಭಾರತ

ಚಿನ್ನ; 17

ಬೆಳ್ಳಿ; 13

ಕಂಚು; 19

ಕೊನೆ ದಿನದ ಕನಸು..

ಕೂಟದ ಅಂತಿಮ ದಿನವಾದ ಸೋಮವಾರವೂ ಭಾರತಕ್ಕೆ ಮತ್ತಷ್ಟು ಪದಕಗಳು ಒಲಿಯುವುದು ಖಚಿತವಾಗಿದೆ. ಬ್ಯಾಡ್ಮಿಂಟನ್  ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು, ಪುರುಷರಲ್ಲಿ ಕೆ.ಶ್ರೀಕಾಂತ್, ಡಬಲ್ಸ್‌ ವಿಭಾಗಗಳಲ್ಲಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಆಟಗಾರರು ಫೈನಲ್‌ನಲ್ಲಿ ಸೆಣಸುವರು. ಪುರುಷರ ಹಾಕಿ ಫೈನಲ್‌ ಮತ್ತು ಪುರುಷರ ಟೇಬಲ್‌ ಟೆನಿಸ್‌ನಲ್ಲಿಯೂ ಭಾರತದ ಸ್ಪರ್ಧಿಗಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು