ಭಾನುವಾರ, ಸೆಪ್ಟೆಂಬರ್ 27, 2020
21 °C
ಜಪಾನ್ ವಿರುದ್ಧ ಭಾರತಕ್ಕೆ 7–2 ಅಂತರದ ಗೆಲುವು

ಎಫ್‌ಐಎಚ್‌ ಹಾಕಿ ಸಿರೀಸ್ ಫೈನಲ್ಸ್: ಪ್ರಶಸ್ತಿಗೆ ಭಾರತ–ದಕ್ಷಿಣ ಆಫ್ರಿಕಾ ಪೈಪೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಜಪಾನ್ ಎದುರು ಭರ್ಜರಿ ಜಯ ಸಾಧಿಸಿದ ಭಾರತ ತಂಡ ಎಫ್‌ಐಎಚ್ ಸಿರೀಸ್‌ ಹಾಕಿ ಫೈನಲ್ಸ್‌ನ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ 7–2ರಿಂದ ಗೆದ್ದಿತು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ.

ಎರಡನೇ ನಿಮಿಷದಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ನಂತರ ಪಂದ್ಯದ ಮೇಲೆ ಆಧಿಪತ್ಯ ಸ್ಥಾಪಿಸಿತು. ಕಿಟಜೆಟಾ ಕೆನ್ಜಿ ಪಂದ್ಯದ ಮೊದಲ ಗೋಲು ಗಳಿಸಿದರು. 100ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಹರ್ಮನ್ ಪ್ರೀತ್ ಸಿಂಗ್ ಏಳನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿಸಿ ಭಾರತದ ಖಾತೆ ತೆರೆದರು. 14ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ವರುಣ್ ಕುಮಾರ್ ಗೋಲಾಗಿ ಪರಿವರ್ತಿಸಿದರು. 20ನೇ ನಿಮಿಷದಲ್ಲಿ ವಟನಬೆ ಕೋಟ ಜಪಾನ್‌ಗೆ ಸಮಬಲ ಗಳಿಸಿಕೊಟ್ಟರು.

ನಂತರ ಭಾರತದ ಆಟಗಾರರು ಸತತ ಗೋಲುಗಳ ಮೂಲಕ ಪ್ರವಾಸಿ ತಂಡವನ್ನು ಕಂಗೆಡಿಸಿದರು. ರಮಣ್‌ ದೀಪ್ ಸಿಂಗ್ (23, 37ನೇ ನಿಮಿಷ), ಹಾರ್ದಿಕ್ ಸಿಂಗ್ (25ನೇ ನಿ), ಗುರ್‌ಸಾಹೀಬ್‌ಜೀತ್ ಸಿಂಗ್ (43ನೇ ನಿ) ಮತ್ತು ವಿವೇಕ್ ಪ್ರಸಾದ್ (47ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಉಭಯ ತಂಡಗಳು ಈ ಹಿಂದೆ ಒಟ್ಟು 15 ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ಪಾರಮ್ಯ ಮೆರೆದಿದ್ದು 13 ಪಂದ್ಯಗಳನ್ನು ಗೆದ್ದಿದೆ. ಒಂದರಲ್ಲಿ ಜಪಾನ್ ಗೆದ್ದಿದ್ದರೆ, ಒಂದು ಪಂದ್ಯ ಡ್ರಾ ಆಗಿತ್ತು. ಗೋಲು ಗಳಿಕೆಯಲ್ಲೂ ಭಾರತ ಅಮೋಘ ಸಾಧನೆ ಮಾಡಿದೆ. ಒಟ್ಟು 63 ಗೋಲು ಗಳಿಸಿರುವ ಭಾರತ 15 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದೆ.

ದಕ್ಷಿಣ ಆಫ್ರಿಕಾ ಫೈನಲ್‌ಗೆ: ಅಂತಿಮ ಹಂತದಲ್ಲಿ ಗೋಲು ಗಳಿಸಿದ ದಕ್ಷಿಣ ಆಫ್ರಿಕಾ ತಂಡ ಶುಕ್ರವಾರ ಅಮೆರಿಕಾ ತಂಡವನ್ನು 2–1ರಿಂದ ಮಣಿಸಿ ಎಫ್‌ಐಎಚ್‌ ಸಿರೀಸ್‌ ಹಾಕಿ ಫೈನಲ್‌ಗೆ ಲಗ್ಗೆಯಿಟ್ಟಿತು.

15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅಕಿ ಕೆಪ್ಪೆಲರ್‌ ಅಮೆರಿಕಾಕ್ಕೆ ಮುನ್ನಡೆ ತಂದುಕೊಟ್ಟರು. 42ನೇ ನಿಮಿಷದಲ್ಲಿ ಅಸ್ಟಿನ್‌ ಸ್ಮಿತ್‌ ಗೋಲು ಗಳಿಸಿ ಸಮಬಲ ಸಾಧಿಸಿದರು. ನಂತರ ಪಂದ್ಯ ರೋಚಕವಾಯಿತು. 60ನೇ ನಿಮಿಷದಲ್ಲಿ ಸ್ಪೂನರ್ ನಿಕೋಲಸ್‌ ಗಳಿಸಿದ ಗೋಲಿನೊಂದಿಗೆ ದಕ್ಷಿಣ ಆಫ್ರಿಕಾ ಸಂಭ್ರಮದ ಅಲೆಯಲ್ಲಿ ಮಿಂದಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು